
ತುಮಕೂರು, ನ. ೨೯- ಸಂವಿಧಾನ ರಕ್ಷಣೆಗೆ ವಿದ್ಯೆಯ ಜತೆಗೆ ಶಿಸ್ತು ರೂಢಿಸಿಕೊಳ್ಳಬೇಕು. ಜವಾಬ್ದಾರಿ ನಾಗರಿಕರಾಗಿ ದೇಶಕ್ಕೆ ಅನೇಕ ಕರ್ತವ್ಯಗಳನ್ನು ಸಲ್ಲಿಸಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಶಿವರಾಜು ಹೇಳಿದರು.
ತಾಲ್ಲೂಕಿನ ಹೆಬ್ಬೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಂವಿಧಾನ ರಚನಾ ಸಮಿತಿ ಸುಮಾರು ೨ ವರ್ಷ, ೧೧ ತಿಂಗಳು ಹಾಗೂ ೧೮ ದಿನಗಳ ನಿರಂತರ ಶ್ರಮ ಮತ್ತು ಅನೇಕ ಚರ್ಚೆ-ಸಂವಾದಗಳ ಫಲಶೃತಿ ನಮ್ಮ ಈ ಸಂವಿಧಾನ. ಇದರಿಂದ ನಮ್ಮೆಲ್ಲರ ಜೀವನ ಉತ್ತಮಗೊಳ್ಳುತ್ತಿದೆ ಎಂದರು.
ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಮಧುಸೂಧನ.ಕೆ.ಪಿ. ಮಾತನಾಡಿ, ಸಂವಿಧಾನ ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಘನತೆ ಮತ್ತು ಸ್ವಾಭಿಮಾನದ ಬದುಕನ್ನು ಒದಗಿಸಿದೆ. ಎಲ್ಲರ ವ್ಯಕ್ತಿತ್ವವು ಸರ್ವತೋಮುಖ ಬೆಳವಣಿಗೆಗೆ ಹಾಗೂ ಸಮಾಜದ ಮುಖ್ಯ ಚಲನೆಗೆ ಸಂವಿಧಾನ ಕಾರಣವಾಗಿದೆ. ನಮ್ಮ ಸಂವಿಧಾನ ನಮ್ಮ ಸ್ವಾಭಿಮಾನ ಎಂದು ತಿಳಿದು ಅದನ್ನು ರಕ್ಷಿಸೋಣ ಎಂದರು.
ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಜಗದೀಶ್ ಎಂ.ಎಸ್. ಮಾತನಾಡಿ, ಹಕ್ಕುಗಳನ್ನಷ್ಟೇ ಅನುಭವಿಸಿ ಕರ್ತವ್ಯಗಳನ್ನು ಕಡೆಗಣಿಸಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ದ್ವಿತೀಯ ಬಿ.ಎ ವಿದ್ಯಾರ್ಥಿಗಳು ಸಂವಿಧಾನ ರಚನಾ ಸಭೆಯ ಪ್ರಮುಖ ಚರ್ಚೆಗಳಾದ ಪ್ರಸ್ತಾವನೆ, ಮೂಲಭೂತ ಹಕ್ಕುಗಳು ಹಾಗೂ ಅಸ್ಪೃಶ್ಯತೆ ಆಚರಣೆ ನಿಷೇಧಗಳ ಕುರಿತು ಕಿರುನಾಟಕ ಪ್ರದರ್ಶನ ಮಾಡಿದರು ಕಾರ್ಯಕ್ರಮದಲ್ಲಿ ಕಾಲೇಜಿನ ಅಧೀಕ್ಷಕ ಭಾರತೀ ಸುತ, ಅತಿಥಿ ಉಪನ್ಯಾಸಕರಾದ ಡಾ.ಶ್ರೀನಿವಾಸ್, ಡಾ.ರಾಕೇಶ್, ರಾಮಪ್ರಕಾಶ್ ಮತ್ತಿತರರು ಭಾಗವಹಿಸಿದ್ದರು.




























