ತಿಪಟೂರು, ಅ. ೬- ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಯವರ ಸತ್ಯ, ಅಹಿಂಸೆ, ಶಾಂತಿ ಮತ್ತು ಸ್ವಚ್ಛತೆಯ ಮೌಲ್ಯಗಳನ್ನು ವಿಶ್ವಕ್ಕೆ ಬೋಧಿಸಿ ಅವರಂತೆ ಲಾಲ್ ಬಹದ್ದೂರ್ ಶಾಸ್ತ್ರಿಜಿ ಅವರ ಸರಳತೆ, ಶಿಸ್ತನ್ನು ನಾವುಗಳು ರೂಡಿಸಿಕೊಳ್ಳಬೇಕು ಎಂದು ಶಾಸಕ ಕೆ.ಷಡಕ್ಷರಿ ಹೇಳಿದರು.
ಇಲ್ಲಿನ ನಗರಸಭೆಯ ಕಾರ್ಯಾಲಯದಲ್ಲಿ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಯವರ ಜನ್ಮ ದಿನಾಚರಣೆಯ ಅಂಗವಾಗಿ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಗಾಂಧೀಜಿ ಅವರ ಮಾರ್ಗದರ್ಶನದಿಂದಲೇ ಭಾರತ ಸ್ವಾತಂತ್ರ್ಯ ಪಡೆದುಕೊಂಡಿತು. ಇಂದಿಗೂ ಗಾಂಧೀಜಿಯ ಸ್ವಚ್ಛತಾ ಸಂದೇಶ ಮತ್ತು ಅಹಿಂಸಾ ಸಿದ್ಧಾಂತವು ಸಮಾಜಕ್ಕೆ ದಾರಿ ತೋರುತ್ತಿದೆ. ಅದೇ ರೀತಿ ನಮ್ಮ ದ್ವಿತೀಯ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಸರಳತೆ, ಶಿಸ್ತು ಮತ್ತು ತ್ಯಾಗದ ಪ್ರತೀಕವಾಗಿದೆ. ಶಾಸ್ತ್ರೀಯವರು ರೈತ ಮತ್ತು ಸೈನಿಕರ ಮಹತ್ವವನ್ನು ಅರಿತಿದ್ದು ಅವರ ಜೈ ಜವಾನ್ ಜೈ ಕಿಸಾನ್ ಘೋಷಣೆ ಇಂದಿಗೂ ರಾಷ್ಟ್ರದಲ್ಲಿ ಮೊಳಗುತಿದೆ ಎಂದರು.
ಇವರಿಬ್ಬರ ಜೀವನ ಮೌಲ್ಯಗಳನ್ನು ನಾವು ಕೇವಲ ಸ್ಮರಣೆ ಮಾಡುವುದರ ಜತೆಗೆ ನಮ್ಮ ದೈನಂದಿನ ಬದುಕಿನಲ್ಲಿ ಅನುಸರಿಸಿದಾಗ ಮಾತ್ರ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ. ಎಲ್ಲ ವ್ಯಕ್ತಿಗಳು ಸ್ವಚ್ಛತೆ, ಶಾಂತಿ, ಶಿಸ್ತು, ನೈತಿಕತೆ, ಪ್ರಾಮಾಣಿಕತೆ ಇವುಗಳನ್ನು ಅಳವಡಿಸಿಕೊಂಡರೆ ನಮ್ಮ ಸಮಾಜ ಇನ್ನಷ್ಟು ಪ್ರಗತಿಯ ಹಾದಿಯಲ್ಲಿ ಸಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಒಳಚರಂಡಿ ಸ್ವಚ್ಚಗೊಳಿಸುವ ಪೌರಕಾರ್ಮಿಕರಿಗೆ ಸುರಕ್ಷತಾ ರಕ್ಷಾ ಕವಚಗಳನ್ನು ನಮಸ್ತೆ ಯೋಜನೆಯಡಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಸಭಾಧ್ಯಕ್ಷೆ ಯಮುನಾಧರಣೇಶ್, ಸದಸ್ಯ ಮೆಡಿಕಲ್‌ಶ್ರೀನಿವಾಸ್, ಆಯುಕ್ತ ವಿಶ್ವೇಶ್ವರ ಬದರಗಡೆ, ಆರೋಗ್ಯಾಧಿಕಾರಿ ಶ್ರೀನಿವಾಸ್ ಸೇರಿದಂತೆ ಪೌರ ಕಾರ್ಮಿಕರು ಹಾಗೂ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.



























