
ಬೀದರ್:ಜು.7:ಶಿಕ್ಷಣದಿಂದಲೇ ಉತ್ತಮ ಬದುಕು ಕಟ್ಟಿಕೊಳ್ಳಬಹುದು, ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಡಾ. ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಶನ್ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಹೇಳಿದರು.
ನಗರದ ಕೆಎಚ್‍ಬಿ ಕಾಲೋನಿಯಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಮಹರ್ಷಿ ಆಂಗ್ಲ ಮಾಧ್ಯಮ ಶಾಲೆಯ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣವು ಸುಸಂಸ್ಕøತ ನಾಗರಿಕರನ್ನು ರೂಪಿಸುತ್ತದೆ. ಮಾನವೀಯ ಮೌಲ್ಯಗಳನ್ನು ಬೆಳೆಸುತ್ತದೆ ಎಂದು ಹೇಳಿದರು.
ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕಾದ ಜವಾಬ್ದಾರಿ ಶಾಲೆ, ಶಿಕ್ಷಣ ಸಂಸ್ಥೆಯ ಮೇಲಿದೆ. ಪಾಲಕರೂ ತಮ್ಮ ಪಾಲಿನ ಹೊಣೆಯನ್ನು ಉತ್ತಮ ರೀತಿಯಿಂದ ನಿಭಾಯಿಸಬೇಕಾಗಿದೆ. ಶಾಲೆ ಮತ್ತು ಪಾಲಕರ ಪ್ರಯತ್ನವು ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ನೆರವಾಗಬಲ್ಲದು ಎಂದು ಸೂರ್ಯಕಾಂತ್ ಹೇಳಿದರು.
ಶಿಕ್ಷಣದ ಮಹತ್ವ ಹೆಚ್ಚಿರುವುದನ್ನು ಸಮಾಜ ಅರಿತಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಪಾಲಕರು ಉತ್ಸುಕರಾಗಿದ್ದಾರೆ. ಈ ಶೈಕ್ಷಣಿಕ ಜಾಗೃತಿಯು ಸುಶಿಕ್ಷಿತ ಸಮಾಜ ನಿರ್ಮಾಣಕ್ಕೆ ನೆರವಾಗಬಲ್ಲದು. ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಉತ್ತಮ ಶಿಕ್ಷಣ ನೀಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡುವುದು ಮಹತ್ವದ್ದು ಎನ್ನುವುದನ್ನು ಪಾಲಕರು ಅರಿತುಕೊಳ್ಳುತ್ತಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಉತ್ತಮ ಶಿಕ್ಷಣ ನೀಡಲು ಶ್ರಮಿಸುತ್ತಿವೆ ಎಂದು ಶ್ಲಾಘಿಸಿದರು.
ಮಹರ್ಷಿ ಆಂಗ್ಲ ಮಾಧ್ಯಮ ಶಾಲೆಯ ಕಟ್ಟಡ ಉದ್ಘಾಟಿಸಲು ಸಂತೋಷವಾಗುತ್ತಿದೆ. ಈ ಸಂಸ್ಥೆಯು ಮಕ್ಕಳಿಗೆ ಅಗತ್ಯವಿರುವ ಎಲ್ಲ ಅನುಕೂಲಗಳನ್ನು ಮಾಡಿಕೊಡುತ್ತಿದೆ. ಉತ್ತಮ ಬೋಧಕರು, ಶೈಕ್ಷಣಿಕ ಬೆಳವಣಿಗೆ ಮತ್ತು ಮಕ್ಕಳ ಅಭ್ಯುಯದ ಮೇಲೆ ನಿಗಾ ಇಡುವ ಆಡಳಿತ ಮಂಡಳಿ ಇಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ ಚೆನಶೆಟ್ಟಿ, ನಗರಸಭೆ ಸ್ಥಾಯಿ ಸಮಿತಿ ಅದ್ಯಕ್ಷ ಪ್ರಶಾಂತ ದೊಡ್ಡಿ, ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ಶಾರದಾ ಮಾಳಗೆ, ಮಹರ್ಷಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಾವಂತ ಸಾಗರ, ಉಪಾಧ್ಯಕ್ಷ ಅರುಣಕುಮಾರ ಸಾಗರ್, ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಆಶಾರಾಣಿ ಸಾಗರ್ ಮತ್ತಿತರ ಗಣ್ಯರು, ಹಿರಿಯರು ಉಪಸ್ಥಿತರಿದ್ದರು.