ಮಧುಗಿರಿ, ಆ. ೨೯- ಪಟ್ಟಣದಲ್ಲಿ ಈ ಬಾರಿಯ ಗಣೇಶೋತ್ಸವ ಕಳೆಗಟ್ಟಿದ್ದು, ಸುಮಾರು ೨೦ ವರ್ಷಗಳಿಂದ ಕನಸಾಗಿಯೇ ಉಳಿದಿದ್ದ ಭಕ್ತ ಮಂಡಳಿಯವರ ಮತ್ತು ಸಾರ್ವಜನಿಕರ ದೇವಸ್ಥಾನದ ಮುಂಭಾಗದ ಆವರಣದಲ್ಲಿ ಶಾಶ್ವತ (ಶೆಡ್) ಪೆಂಡಾಲ್ ನಿರ್ಮಾಣದ ಕನಸು ನನಸಾಗಿದ್ದು, ಈ ಬಾರಿ ಗಣೇಶನ ಹಬ್ಬಕ್ಕೆ ಮೆರುಗು ತಂದಿದೆ.
ಪಟ್ಟಣದ ಶ್ರೀ ಮಲ್ಲೇಶ್ವರ ಸ್ವಾಮಿ ಮತ್ತು ಶ್ರೀ ವೆಂಕಟೇಶ್ವರ ಸ್ವಾಮಿ ಮದ್ಯ ಭಾಗದಲ್ಲಿರುವ ಶ್ರೀ ಬಾಲಗಂಗಾಧರ ತಿಲಕ್ ವೇದಿಕೆಯಲ್ಲಿ ಸುಮಾರು ೨೦ ವರ್ಷಗಳಿಂದಲೂ ಪಕ್ಷಾತೀತವಾಗಿ ಗಣೇಶ ಉತ್ಸವ ಸಮಿತಿ ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಗಣೇಶಮೂರ್ತಿಯನ್ನು ಪ್ರತಿಷ್ಟಾಪಿಸುತ್ತಿದ್ದು, ಪ್ರತೀ ವರ್ಷ ತಾತ್ಕಾಲಿಕ ವೇದಿಕೆ ನಿರ್ಮಿಸಿ ಇದೇ ವೇದಿಕೆಯಲ್ಲಿ ೯ ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು. ಆದರೆ ಹಲವಾರು ವರ್ಷಗಳಿಂದ ಈ ಭಾಗದಲ್ಲಿ ಗಣೇಶ ಉತ್ಸವ ಮತ್ತು ಇನ್ನಿತರೆ ದೇವಸ್ಥಾನ ಕಾರ್ಯಕ್ರಮಗಳನ್ನು ಆಯೋಜಿಸಲು ಶಾಶ್ವತ ಪೆಂಡಾಲ್ ನಿರ್ಮಿಸಿದರೆ ಅನುಕೂಲವಾಗುತ್ತದೆ ಎಂದು ಭಕ್ತ ಮಂಡಳಿ ಮತ್ತು ಸಾರ್ವಜನಿಕರ ಒತ್ತಾಯವಾಗಿತ್ತು. ಆದರೆ ಜನಪ್ರತಿನಿಧಿಗಳಿಗೆ ಬಹಳಷ್ಟು ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗದೇ ಶಾಶ್ವತ ಪೆಂಡಾಲ್ ನಿರ್ಮಾಣದ ಕನಸನ್ನು ಕೈ ಚೆಲ್ಲಿದ್ದರು.
೨೦ ವರ್ಷಗಳ ಕನಸು ೨೦ ದಿನದಲ್ಲೇ ನನಸು
ಕಳೆದ ವರ್ಷದ ಗಣೇಶೋತ್ಸವ ಪ್ರತಿಷ್ಟಾಪನೆ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣನವರಿಗೆ ಈ ಭಾಗದಲ್ಲಿ ಶಾಶ್ವತ ಪೆಂಡಾಲ್ ನಿರ್ಮಿಸಿಕೊಡಬೇಕು ಎಂದು ಉತ್ಸವ ಸಮಿತಿಯವರು ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದ್ದ ರಾಜೇಂದ್ರ, ಶಾಸಕ ಕೆ.ಎನ್. ರಾಜಣ್ಣ ನವರ ಗಮನಕ್ಕೆ ತಂದು ಮುಂದಿನ ಗಣೇಶ ಉತ್ಸವದ ವೇಳೆಗೆ ಶಾಶ್ವತ ಪೆಂಡಾಲ್ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಆ.೭ ರಂದು ಸುಮಾರು ೩೦ ಲಕ್ಷ ರೂ. ವೆಚ್ಚದಲ್ಲಿ ಶಾಶ್ವತ ಪೆಂಡಾಲ್ ನಿರ್ಮಾಣಕ್ಕೆ ರಾಜೇಂದ್ರ ಗುದ್ದಲಿ ಪೂಜೆ ನೆರವೇರಿಸಿದ್ದು, ಸುಸಜ್ಜಿತವಾಗಿ ಹೈಟೆಕ್ ಮಾದರಿಯಲ್ಲಿ ಶಾಶ್ವತ ಪೆಂಡಲ್ ನಿರ್ಮಾಣವಾಗಿದೆ.
ಹೇಗಿದೆ ಶಾಶ್ವತ ಪೆಂಡಾಲ್
ಪಟ್ಟಣದ ಶ್ರೀ ಮಲ್ಲೇಶ್ವರ ಸ್ವಾಮಿ ಮತ್ತು ಶ್ರೀ ವೆಂಕಟೇಶ್ವರ ಸ್ವಾಮಿ ಮಧ್ಯ ಭಾಗದಲ್ಲಿರುವ ಶ್ರೀ ಬಾಲಗಂಗಾಧರ ತಿಲಕ್ ವೇದಿಕೆಯಲ್ಲಿ ಗಣೇಶ ಪ್ರತಿಷ್ಟಾಪನೆ ನಡೆಯಲಿದ್ದು, ಬಹಳಷ್ಟು ಶಿಥಿಲಗೊಂಡಿದ್ದ ಈ ಭಾಗವನ್ನು ಸಮತಟ್ಟುಗೊಳಿಸಿ ಜಲ್ಲಿ ಮತ್ತು ಕಾಂಕ್ರೀಟ್ ಬಳಸಿ ಶಾಶ್ವತ ವೇದಿಕೆ ನಿರ್ಮಿಸಲಾಗಿದೆ. ೭ ಜೋಡಿ ಕಂಬಗಳನ್ನು ಬಳಸಿ ಸುಮಾರು ೧೪೦x೩೫ ಅಳತೆಯ ಸ್ಥಳದಲ್ಲಿ ಶಾಶ್ವತ ಶೆಡ್(ಪೆಂಡಾಲ್) ನಿರ್ಮಾಣ ಮಾಡಿದ್ದು, ಮೇಲ್ಭಾಗದಲ್ಲಿ ಶೀಟ್‌ನ ಹೊದಿಕೆಯಿಂದ ಮುಚ್ಚಲಾಗಿದೆ. ಪೆಂಡಾಲ್ ನಿರ್ಮಾಣದಿಂದ ಬಹಳಷ್ಟು ಅನುಕೂಲವಾಗಲಿದ್ದು, ಗಣೇಶ ಉತ್ಸವಕ್ಕೆ ಮಾತ್ರ ಸೀಮಿತವಾಗದೇ, ಸಾಂಸ್ಕೃತಿಕ ಕಾರ್ಯಕ್ರಗಳು ಮತ್ತು ಶಾಲಾ ಮಕ್ಕಳ ಕಾರ್ಯಕ್ರಮಗಳಿಗೂ ಬಳಸಿಕೊಳ್ಳಬಹುದಾಗಿದ್ದು, ಶಾಶ್ವತ ಶೆಡ್(ಪೆಂಡಾಲ್) ನಿರ್ಮಿಸಿಕೊಟ್ಟು ಶಾಸಕ ಕೆ.ಎನ್. ರಾಜಣ್ಣನವರಿಗೆ ಮತ್ತು ರಾಜೇಂದ್ರ ರಾಜಣ್ಣನವರಿಗೆ ಭಕ್ತ ಮಂಡಳಿಯವರು ಮತ್ತು ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.
ಪಟ್ಟಣದ ಶ್ರೀ ಮಲ್ಲೇಶ್ವರ ಸ್ವಾಮಿ ಮತ್ತು ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಪ್ರತೀ ವರ್ಷ ಗಣೇಶಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುತ್ತಿದ್ದು, ಈ ಭಾಗದಲ್ಲಿ ಶಾಶ್ವತ ಶೆಡ್ ಇಲ್ಲದೇ ಗಣೇಶನ ಕಾರ್ಯಕ್ರಮಗಳನ್ನು ನಡೆಸಲು ಬಹಳಷ್ಟು ತೊಂದರೆಯಾಗುತ್ತಿತ್ತು. ಇದರ ಬಗ್ಗೆ ಶಾಸಕ ಕೆ.ಎನ್. ರಾಜಣ್ಣ ಮತ್ತು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ನವರಿಗೆ ಭಕ್ತ ಮಂಡಳಿಯವರು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ತಕ್ಷಣವೇ ಶಾಶ್ವತ ಶೆಡ್ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ. ಇದರಿಂದ ದೇವಸ್ಥಾನದ ಆವರಣಕ್ಕೆ ಮೆರುಗು ಬಂದಿದ್ದು, ಪಟ್ಟಣವನ್ನು ಸುಂದರಗೊಳಿಸುವ ನಿಟ್ಟಿನಲ್ಲಿ ಶಾಸಕ ಕೆ.ಎನ್. ರಾಜಣ್ಣ ಮತ್ತು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣನವರು ಬಹಳಷ್ಟು ಶ್ರಮ ವಹಿಸುತ್ತಿದ್ದಾರೆ ಎಂದು ಪುರ ಸಭಾಧ್ಯಕ್ಷ ಲಾಲಾಪೇಟೆ ಮಂಜುನಾಥ್ ತಿಳಿಸಿದ್ದಾರೆ.
ಶಾಸಕ ಕೆ. ಎನ್. ರಾಜಣ್ಣ ಮತ್ತು ವಿಧಾನಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ರವರ ಅವರ ದೂರದೃಷ್ಟಿಯ ಫಲವಾಗಿ ಬೃಹತ್ ವೇದಿಕೆ ತ್ವರಿತಗತಿಯಲ್ಲಿ ನಿರ್ಮಾಣವಾಗಿದೆ. ಹಿಂದೆ ನಡೆಯುತ್ತಿದ್ದ ಗಣೇಶ ಸಂದರ್ಭದಲ್ಲಿ ಚಪ್ಪರ, ಶಾಮಿಯಾನ ಮತ್ತು ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಲಾಗುತ್ತಿತ್ತು, ತಾತ್ಕಾಲಿಕ ಶೆಡ್‌ಗೆ ಲಕ್ಷಾಂತರ ಖರ್ಚು ಮಾಡಲಾಗಿತ್ತು. ಈ ಶಾಶ್ವತ ಶೆಡ್ ನಿರ್ಮಾಣದಿಂದ ಗಣಪತಿ ಮಂಡಲಿಗೆ ಲಕ್ಷಾಂತರ ರೂಗಳು ಉಳಿಯುತ್ತದೆ. ಇದರಿಂದ ದೇವಸ್ಥಾನಗಳಿಗೆ ಉತ್ತಮ ಮೆರಗು ಬರುತ್ತದೆ ಎಂದು ಪುರಸಭಾ ಸದಸ್ಯ ಎಂ. ಶ್ರೀಧರ್ ತಿಳಿಸಿದ್ದಾರೆ.
ಹಲವಾರು ವರ್ಷಗಳಿಂದ ದೇವಸ್ಥಾನದ ಮುಂಭಾಗದ ಆವರಣದಲ್ಲಿ ಶಾಶ್ವತ (ಶೆಡ್) ಪೆಂಡಾಲ್ ನಿರ್ಮಿಸಬೇಕೆಂಬ ಕನಸು ನನಸಾಗಿರಲಿಲ್ಲ. ಹಲವಾರು ವರ್ಷ ಪ್ರಯತ್ನ ಪಟ್ಟರೂ ಕೂಡ ಯಾವುದೇ ಜನಪ್ರತಿನಿಧಿಗಳು ಮಾಡದಂತ ಕಾರ್ಯವನ್ನು ಕೇವಲ ೨೦ ದಿನಗಳಲ್ಲಿ ಈಡೇರಿಸಿದ ಮಾಜಿ ಸಚಿವರು, ಹಾಗೂ ಶಾಸಕ ಕೆ ಎನ್ ರಾಜಣ್ಣ ಹಾಗೂ ರಾಜೇಂದ್ರ ರಾಜಣ್ಣನವರ ಪ್ರಯತ್ನ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಈ ವರ್ಷ ಶಾಶ್ವತ ಪೆಂಡಾಲ್ ಗಣೇಶನ ಉತ್ಸವಕ್ಕೆ ಮೆರುಗು ತಂದಿದೆ.




























