Home Lead News ಬಲಿಷ್ಠ ಬಾಂಧವ್ಯಕ್ಕೆ ಪಣ

ಬಲಿಷ್ಠ ಬಾಂಧವ್ಯಕ್ಕೆ ಪಣ

ಹೊಸದೆಹಲಿ, ಮೇ ೨೪- ಭಾರತ ಮತ್ತು ಅಮೆರಿಕ ನಡುವಿನ ಸಂಬಂಧವು ಕೇವಲ ಸಾಂಪ್ರದಾಯಿಕ ಸ್ನೇಹಕ್ಕೆ ಸೀಮಿತವಾಗಿಲ್ಲ. ಇದು ಅದನ್ನೂ ಮೀರಿದ ಅತ್ಯಂತ ಆಳವಾದ ಜಾಗತಿಕ ವ್ಯೂಹಾತ್ಮಕ ಪಾಲುದಾರಿಕೆಯಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಪ್ರತಿಪಾದಿಸಿದ್ದಾರೆ.
ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿರುವ ರುಬಿಯೊ ಅವರು ಇಂದು ದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಅವರೊಂದಿಗೆ ಉನ್ನತ ಮಟ್ಟದ ನಿಯೋಗದ ಸಭೆ ನಡೆಸಿದ ಬಳಿಕ ಜಂಟಿ ಹೇಳಿಕೆ ನೀಡಿದರು.

“ಭಾರತ ಮತ್ತು ಅಮೆರಿಕ ಪ್ರಪಂಚದ ಎರಡು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳು. ಇದುವೇ ನಮ್ಮ ನಡುವಿನ ಅದ್ಭುತ ಸಹಕಾರಕ್ಕೆ ಅಡಿಪಾಯ. ನಮ್ಮ ಸಂಬಂಧವು ಕೇವಲ ಒಂದು ಪ್ರಾಂತ್ಯಕ್ಕೆ ಸೀಮಿತವಾಗಿರದೆ, ಜಾಗತಿಕ ಮಟ್ಟದಲ್ಲಿ ಪರಸ್ಪರ ಸಹಕರಿಸಲು ನಮಗೆ ದೊಡ್ಡ ಅವಕಾಶಗಳನ್ನು ಒದಗಿಸಿದೆ” ಎಂದು ಮಾರ್ಕೊ ರುಬಿಯೊ ತಿಳಿಸಿದರು. ಹಳೆಯ ಸಂಬಂಧವನ್ನು ಕೇವಲ ನವೀಕರಿಸುವುದಲ್ಲ, ಈಗಾಗಲೇ ಗಟ್ಟಿಯಾಗಿರುವ ಬಾಂಧವ್ಯದ ಮೇಲೆ ಮತ್ತಷ್ಟು ಬಲಿಷ್ಠ ಕೋಟೆ ಕಟ್ಟುವುದು ನಮ್ಮ ಉದ್ದೇಶ ಎಂದರು.

ಪ್ರಧಾನಿ ಮೋದಿ ಭೇಟಿ: ಪ್ರಮುಖ ಚರ್ಚೆಗಳು
ಅಮೆರಿಕದ ಉನ್ನತ ರಾಜತಾಂತ್ರಿಕ ಅಧಿಕಾರಿ ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈ ವೇಳೆ ರಕ್ಷಣೆ, ತಂತ್ರಜ್ಞಾನ, ಇಂಧನ ಭದ್ರತೆ, ವ್ಯಾಪಾರ, ಹೂಡಿಕೆ ಹಾಗೂ ಶಿಕ್ಷಣ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿನ ಪ್ರಗತಿಯನ್ನು ಪ್ರಧಾನಿ ಅವರಿಗೆ ವಿವರಿಸಿದರು. ಪಶ್ಚಿಮ ಏಷ್ಯಾದ ಪ್ರಸ್ತುತ ಪ್ರಕ್ಷುಬ್ಧ ಪರಿಸ್ಥಿತಿಯ ಕುರಿತು ಉಭಯ ನಾಯಕರು ಸುದೀರ್ಘವಾಗಿ ಚರ್ಚಿಸಿದ್ದು, ಯಾವುದೇ ಸಂಘರ್ಷಕ್ಕೆ ರಾಜತಾಂತ್ರಿಕ ಮಾತುಕತೆಯೇ ಏಕೈಕ ಪರಿಹಾರ ಎಂದು ಪ್ರಧಾನಿ ಮೋದಿ ಪುನರುಚ್ಚರಿಸಿದ್ದಾರೆ.

“ವಿಶ್ವದ ದೊಡ್ಡ ಜಾಗತಿಕ ಸಮಸ್ಯೆಗಳ ಮೇಲೆ ಧನಾತ್ಮಕ ಪ್ರಭಾವ ಬೀರಬಲ್ಲ ಆರ್ಥಿಕ ಮತ್ತು ರಾಜತಾಂತ್ರಿಕ ಶಕ್ತಿ ಹೊಂದಿರುವ ಕೆಲವೇ ಕೆಲವು ದೇಶಗಳಲ್ಲಿ ಭಾರತವೂ ಒಂದು ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಹೇಳಿದರು.


ಅಮೆರಿಕ ಫಸ್ಟ್’ ವೀಸಾ ವ್ಯವಸ್ಥೆ: ಭಾರತದ ಉದ್ಯಮಿಗಳು ಮತ್ತು ವೃತ್ತಿಪರರಿಗೆ ಅನುಕೂಲವಾಗುವಂತೆ ವೀಸಾ ಪ್ರಕ್ರಿಯೆಯನ್ನು ಸರಳಗೊಳಿಸುವುದು ಹಾಗೂ ಆರ್ಥಿಕ ಸಂಬಂಧವನ್ನು ವೃದ್ಧಿಸುವುದು ಈ ನೂತನ ವ್ಯವಸ್ಥೆಯ ಮುಖ್ಯ ಉದ್ದೇಶವಾಗಿದೆ.$೫೦೦ ಬಿಲಿಯನ್ ವ್ಯಾಪಾರ ಬದ್ಧತೆ: ಮುಂದಿನ ೫ ವರ್ಷಗಳಲ್ಲಿ ಇಂಧನ, ತಂತ್ರಜ್ಞಾನ ಮತ್ತು ಕೃಷಿ ವಲಯದಲ್ಲಿ ಅಮೆರಿಕದಿಂದ ಸುಮಾರು ೫೦೦ ಬಿಲಿಯನ್ ಡಾಲರ್ ಮೌಲ್ಯದ ವಸ್ತುಗಳನ್ನು ಖರೀದಿಸಲು ಭಾರತ ಬದ್ಧತೆ ತೋರಿದೆ ಎಂದು ಅಮೆರಿಕದ ನಿಯೋಗ ತಿಳಿಸಿದೆ.
ಮೇ ೨೬ ರಂದು ನವದೆಹಲಿಯಲ್ಲಿ ಕ್ವಾಡ್ ವಿದೇಶಾಂಗ ಸಚಿವರ ಸಭೆ ನಡೆಯಲಿದ್ದು, ಆಸ್ಟ್ರೇಲಿಯಾ ಮತ್ತು ಜಪಾನ್ ವಿದೇಶಾಂಗ ಸಚಿವರೂ ಇದರಲ್ಲಿ ಭಾಗವಹಿಸಲಿದ್ದಾರೆ. ಇಂಡೋ-ಪೆಸಿಫಿಕ್ ವಲಯದ ಸುರಕ್ಷತೆಯ ದೃಷ್ಟಿಯಿಂದ ಈ ಸಭೆ ಅತಿ ಮಹತ್ವದ್ದಾಗಿದೆ.


ಅಮೆರಿಕದ ಹೇಳಿಕೆಗೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್, “ಪ್ರಸ್ತುತ ಜಾಗತಿಕ ಪರಿಸ್ಥಿತಿ ಸಾಕಷ್ಟು ಸಂಕೀರ್ಣವಾಗಿದೆ. ಆದರೆ ಪರಸ್ಪರ ಹಿತಾಸಕ್ತಿಗಳನ್ನು ಹೊಂದಿರುವ ಬಲಿಷ್ಠ ಪಾಲುದಾರರಾಗಿ ನಾವು ಈ ಎಲ್ಲಾ ಸವಾಲುಗಳನ್ನು ಮುಕ್ತ ಚರ್ಚೆಯ ಮೂಲಕ ಎದುರಿಸಲಿದ್ದೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಮೆರಿಕ ರಾಯಭಾರಿ ಸೆರ್ಗಿಯೋ ಗೋರ್ ಸೇರಿದಂತೆ ಉಭಯ ದೇಶಗಳ ಹಿರಿಯ ಅಧಿಕಾರಿಗಳು ಈ ನಿಯೋಗ ಮಟ್ಟದ ಮಾತುಕತೆಯಲ್ಲಿ ಉಪಸ್ಥಿತರಿದ್ದರು.

ಪ್ರತಿ ದೇಶದಲ್ಲೂ ಮೂರ್ಖರಿದ್ದಾರೆ”
ಅಮೆರಿಕದಲ್ಲಿ ಇತ್ತೀಚೆಗೆ ಭಾರತೀಯರ ವಿರುದ್ಧ ಹೆಚ್ಚಾಗುತ್ತಿರುವ ಜನಾಂಗೀಯ ನಿಂದನೆ ಮತ್ತು ದಾಳಿಗಳ ಕುರಿತು ಪತ್ರಕರ್ತರೊಬ್ಬರು ಪ್ರಶ್ನಿಸಿದಾಗ ಉತ್ತರಿಸಿದ ಮಾರ್ಕೊ ರೂಬಿಯೋ, “ಪ್ರಪಂಚದ ಪ್ರತಿಯೊಂದು ದೇಶದಲ್ಲೂ ಮೂರ್ಖ ಜನರಿದ್ದಾರೆ. ಕೆಲವೇ ಕೆಲವು ಪ್ರತ್ಯೇಕ ಜನಾಂಗೀಯ ದ್ವೇಷದ ಘಟನೆಗಳನ್ನು ಇಟ್ಟುಕೊಂಡು ಇಡೀ ಅಮೆರಿಕ ಸಮಾಜವನ್ನು ಅಥವಾ ದೇಶವನ್ನು ನಿರ್ಣಯಿಸುವುದು ಸರಿಯಲ್ಲ,” ಎಂದು ಸ್ಪಷ್ಟಪಡಿಸಿದರು.

ಕೆಲವೇ ಕೆಲವು ಅಜ್ಞಾನಿ ಜನರ ಕೃತ್ಯಗಳು ಇಡೀ ದೇಶದ ಮನಸ್ಥಿತಿಯನ್ನು ಬಿಂಬಿಸುವುದಿಲ್ಲ ಎಂದ ಅವರು, ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಸಮುದಾಯದ ಯಶಸ್ಸನ್ನು ಈ ಘಟನೆಗಳು ಮರೆಮಾಚಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.


ಅಮೆರಿಕದ ಪ್ರಗತಿಯಲ್ಲಿ ಭಾರತೀಯ ಮೂಲದವರ ಕೊಡುಗೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ರೂಬಿಯೋ, “ಅಮೆರಿಕದಲ್ಲಿರುವ ಭಾರತೀಯ ಸಮುದಾಯವು ಅತ್ಯಂತ ಯಶಸ್ವಿ ಹಾಗೂ ಗೌರವಾನ್ವಿತ ಸಮುದಾಯಗಳಲ್ಲಿ ಒಂದಾಗಿದೆ. ವ್ಯಾಪಾರ, ತಂತ್ರಜ್ಞಾನ, ವೈದ್ಯಕೀಯ ಮತ್ತು ಸಾರ್ವಜನಿಕ ಸೇವೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಭಾರತೀಯರು ಮುಂಚೂಣಿಯಲ್ಲಿದ್ದಾರೆ,” ಎಂದರು. ಪ್ರತ್ಯೇಕ ಗುಂಪುಗಳ ನಡವಳಿಕೆಯಿಂದ ಉಭಯ ದೇಶಗಳ ಬಾಂಧವ್ಯಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಅವರು ಭರವಸೆ ನೀಡಿದರು.

ಗಮನ ಸೆಳೆದ ಜೈಶಂಕರ್ ಮಂದಹಾಸ
ಪತ್ರಕರ್ತರು ಅಮೆರಿಕದ ಜನಾಂಗೀಯ ದಾಳಿಗಳ ಬಗ್ಗೆ ಮಾರ್ಕೊ ರೂಬಿಯೋ ಅವರಿಗೆ ಪ್ರಶ್ನೆ ಕೇಳುತ್ತಿದ್ದಂತೆ, ವೇದಿಕೆಯಲ್ಲಿದ್ದ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಬೀರಿದ ಸಣ್ಣ ಮಂದಹಾಸ ಮಾಧ್ಯಮಗಳ ಗಮನ ಸೆಳೆಯಿತು. ಗಂಭೀರ ರಾಜತಾಂತ್ರಿಕ ಚರ್ಚೆಯ ನಡುವೆ ಜೈಶಂಕರ್ ಅವರ ಈ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ. ಆದರೆ ಈ ವಿಷಯದ ಕುರಿತು ಭಾರತೀಯ ನಿಯೋಗ ಜಂಟಿ ಸುದ್ದಿಗೋಷ್ಠಿಯಲ್ಲಿ ಯಾವುದೇ ನೇರ ಹೇಳಿಕೆ ನೀಡಲಿಲ್ಲ.