
ವಾಷಿಂಗ್ಟನ್/ತೆಹ್ರಾನ್:ಮೇ.೨೪- ಅಮೆರಿಕ ಮತ್ತು ಇರಾನ್ ನಡುವೆ ಕಳೆದ ಮೂರು ತಿಂಗಳಿನಿಂದ ನಡೆಯುತ್ತಿರುವ ಭೀಕರ ಯುದ್ಧಕ್ಕೆ ತೆರೆ ಎಳೆಯುವ ನಿಟ್ಟಿನಲ್ಲಿ ಪ್ರಮುಖ ಬೆಳವಣಿಗೆಯಾಗಿದೆ. ಉಭಯ ದೇಶಗಳ ನಡುವಿನ ಶಾಂತಿ ಒಪ್ಪಂದವು “ಬಹುತೇಕ ಅಂತಿಮ ಹಂತಕ್ಕೆ ತಲುಪಿದೆ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಘೋಷಿಸಿದ್ದಾರೆ.
ತಮ್ಮ ‘ಟ್ರುತ್ ಸೋಶಿಯಲ್’ ಜಾಲತಾಣದಲ್ಲಿ ಈ ಕುರಿತು ಬರೆದುಕೊಂಡಿರುವ ಟ್ರಂಪ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೋರ್ಡಾನ್, ಯುಎಇ, ಈಜಿಪ್ಟ್ ಟರ್ಕಿ ಮತ್ತು ಪಾಕಿಸ್ತಾನದ ಮಿತ್ರರಾಷ್ಟ್ರಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದ ಬಳಿಕ ಈ ಒಪ್ಪಂದದ ಕರಡು ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.
ಅಮೆರಿಕ, ಇರಾನ್ ಮತ್ತು ಇತರ ಪಾಲುದಾರ ರಾಷ್ಟ್ರಗಳ ನಡುವೆ ಶಾಂತಿಗೆ ಸಂಬಂಧಿಸಿದಂತೆ ತಿಳುವಳಿಕಾ ಪತ್ರ ಬಹುತೇಕ ಸಿದ್ಧಗೊಂಡಿದೆ. ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರೊಂದಿಗೆ ನಡೆಸಿದ ದೂರವಾಣಿ ಸಂಭಾಷಣೆ ಯಶಸ್ವಿಯಾಗಿದೆ. ಒಪ್ಪಂದದ ಅಂತಿಮ ಹಂತದ ಚರ್ಚೆಗಳು ನಡೆಯುತ್ತಿದ್ದು, ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳಲಿದೆ.
ವಿಶ್ವದ ಪ್ರಮುಖ ತೈಲ ಸಾಗಣೆಯ ಮಾರ್ಗವಾಗಿರುವ ಹೊರ್ಮುಜ್ ಜಲಸಂಧಿಯನ್ನು ಈ ಒಪ್ಪಂದದ ಭಾಗವಾಗಿ ಮತ್ತೆ ಸಂಚಾರ ಮುಕ್ತಗೊಳಿಸಲಾಗುವುದು ಎಂದು ಟ್ರಂಪ್ ಹೇಳಿದ್ದಾರೆ.
ಆದರೆ ಇರಾನ್ ಇದನ್ನು ತಕ್ಷಣವೇ ನಿರಾಕರಿಸಿದೆ.ಜಲಸಂಧಿಯ ಮೇಲಿನ ಸಂಪೂರ್ಣ ನಿಯಂತ್ರಣ ಇರಾನ್ ಬಳಿಯೇ ಇರಲಿದ್ದು, ಯುದ್ಧಕ್ಕೂ ಮುನ್ನ ಇದ್ದಷ್ಟು ಹಡಗುಗಳ ಸಂಚಾರಕ್ಕೆ ಮಾತ್ರ ತಾನು ಅವಕಾಶ ನೀಡುವುದಾಗಿ ಇರಾನ್ ಸ್ಪಷ್ಟಪಡಿಸಿದೆ. ಇದು ಯಾವುದೇ ಕಾರಣಕ್ಕೂ ’ಮುಕ್ತ ಸಂಚಾರ’ ಅಲ್ಲ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮೇಲ್ ಬಘೇಯ್ ಮಾತನಾಡಿ, “ಸದ್ಯಕ್ಕೆ ಯುದ್ಧ ನಿಲ್ಲಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ನಾವು ೧೪ ವಿಧಿಗಳನ್ನು ಒಳಗೊಂಡ ತಿಳುವಳಿಕಾ ಪತ್ರದ ಬಗ್ಗೆ ಚರ್ಚಿಸುತ್ತಿದ್ದೇವೆ. ಲೆಬನಾನ್ ಸೇರಿದಂತೆ ಎಲ್ಲಾ ರಂಗಗಳಲ್ಲಿ ಯುದ್ಧ ನಿಲ್ಲಿಸುವುದು, ಅಮೆರಿಕದ ನೌಕಾ ದಿಗ್ಬಂಧನವನ್ನು ಹಿಂಪಡೆಯುವುದು ಮತ್ತು ಜಪ್ತಿ ಮಾಡಲಾಗಿರುವ ಇರಾನ್‌ನ ಆಸ್ತಿಯನ್ನು ಮುಕ್ತಗೊಳಿಸುವುದು ನಮ್ಮ ಮುಖ್ಯ ಬೇಡಿಕೆಗಳಾಗಿವೆ” ಎಂದಿದ್ದಾರೆ.
ಪರಮಾಣು ಒಪ್ಪಂದದ ಬಗ್ಗೆ ಮೌನವಿಶೇಷವೆಂದರೆ, ಇರಾನ್‌ನ ಪರಮಾಣು ಕಾರ್ಯಕ್ರಮದ ಬಗ್ಗೆ ಈ ಒಪ್ಪಂದದಲ್ಲಿ ಯಾವುದೇ ಪ್ರಸ್ತಾಪವಾಗಿಲ್ಲ. ಇರಾನ್‌ನ ಕ್ರಾಂತಿಕಾರಿ ಗಾರ್ಡ್ಸ್ ಟ್ರಂಪ್ ಅವರ ಪೋಸ್ಟ್ ಅನ್ನು ಕೇವಲ “ಪ್ರಚಾರದ ತಂತ್ರ” ಎಂದು ಕರೆದಿದ್ದು, ಪರಮಾಣು ವಿಷಯದ ಬಗ್ಗೆ ನಾವು ಯಾವುದೇ ಬದ್ಧತೆ ಪ್ರದರ್ಶಿಸಿಲ್ಲ ಎಂದು ಸ್ಪಷ್ಟಪಡಿಸಿದೆ.
ಮಧ್ಯಸ್ಥಿಕೆಗೆ ಪಾಕಿಸ್ತಾನ ಉತ್ಸುಕಈ ಮಧ್ಯೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಶಾಂತಿ ಪ್ರಕ್ರಿಯೆಯನ್ನು ಸ್ವಾಗತಿಸಿದ್ದು, ಅಮೆರಿಕ ಮತ್ತು ಇರಾನ್ ನಡುವಿನ ಮುಂದಿನ ಸುತ್ತಿನ ಶಾಂತಿ ಮಾತುಕತೆಗೆ ಆತಿಥ್ಯ ವಹಿಸಲು ಪಾಕಿಸ್ತಾನ ಸಿದ್ಧವಿದೆ ಎಂದು ತಿಳಿಸಿದ್ದಾರೆ. ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರು ಈಗಾಗಲೇ ಟ್ರಂಪ್ ಅವರೊಂದಿಗೆ ಈ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
























