
ಬೆಂಗಳೂರು.ಮೇ೨೪: ಪಶ್ಚಿಮ ಬಂಗಾಳ ಚುನಾವಣೆಯ ಭರ್ಜರಿ ಗೆಲುವಿನ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ಇದೀಗ ದಕ್ಷಿಣದ ಹೆಬ್ಬಾಗಿಲು ಕರ್ನಾಟಕದತ್ತ ಸಂಪೂರ್ಣ ಗಮನ ಹರಿಸಿದೆ. ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ ಪಕ್ಷದ ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸುವ ಮಾಸ್ಟರ್ ಪ್ಲಾನ್ನೊಂದಿಗೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನಬಿನ್ ಅವರು ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದ್ದು, ರಾಜ್ಯ ರಾಜಕೀಯದಲ್ಲಿ ಭಾರಿ ಕುತೂಹಲ ಮೂಡಿಸಿದೆ.
ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ರಾಜಧಾನಿ ಬೆಂಗಳೂರಿಗೆ ಆಗಮಿಸಿದ ನಿತಿನ್ ನಬಿನ್ ಅವರಿಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು.
ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ
ನಿನ್ನೆ ರಾತ್ರಿ ೧೦:೫೦ಕ್ಕೆ ಬೆಂಗಳೂರಿಗೆ ಆಗಮಿಸಿದ ರಾಷ್ಟ್ರಾಧ್ಯಕ್ಷರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಸಹ-ಉಸ್ತುವಾರಿ ಸುಧಾಕರ್ ರೆಡ್ಡಿ, ವಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡ ಹೆಚ್. ಪಾಟೀಲ್, ಎನ್. ರವಿಕುಮಾರ್ ಹಾಗೂ ಮಾಜಿ ಸಚಿವ ಪ್ರಭು ಚೌಹಾಣ್ ಸೇರಿದಂತೆ ಹಲವು ಪ್ರಮುಖ ಮುಖಂಡರು ಉಪಸ್ಥಿತರಿದ್ದರು. ವಿಮಾನ ನಿಲ್ದಾಣದಿಂದ ನೇರವಾಗಿ ತೆರಳಿದ ನಬಿನ್, ಯಲಹಂಕದಲ್ಲಿರುವ ತಮ್ಮ ಸಹೋದರಿಯ ನಿವಾಸದಲ್ಲಿ ರಾತ್ರಿ ವಾಸ್ತವ್ಯ ಹೂಡಿದರು.
ಇಂದು ಮುಂಜಾನೆ ೯ ಗಂಟೆಗೆ ನಿತಿನ್ ನಬಿನ್ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧಿಕೃತ ನಿವಾಸ ’ಧವಳಗಿರಿ’ಗೆ ಭೇಟಿ ನೀಡಿದರು. ಈ ವೇಳೆ ಯಡಿಯೂರಪ್ಪ ಅವರ ಪುತ್ರಿ ಅರುಣಾ ಅವರು ರಾಷ್ಟ್ರಾಧ್ಯಕ್ಷರಿಗೆ ಆರತಿ ಬೆಳಗಿ ಸಾಂಪ್ರದಾಯಿಕ ಸ್ವಾಗತ ಕೋರಿದರೆ, ಎಂಎಲ್ಸಿ ಸಿ.ಟಿ. ರವಿ ಅವರು ’ಶ್ರೀರಾಮಚರಿತಾ ಮಾನಸ’ ಪುಸ್ತಕವನ್ನು ನೀಡಿ ಗೌರವಿಸಿದರು.
ಮಹತ್ವದ ರಾಜಕೀಯ ಚರ್ಚೆ: ಯಡಿಯೂರಪ್ಪ ಅವರ ಜೊತೆಗಿನ ಉಪಾಹಾರ ಕೂಟದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದ ಗೋವಿಂದ ಕಾರಜೋಳ, ಮುಖಂಡರಾದ ಶ್ರೀರಾಮುಲು, ಡಾ. ಸಿ.ಎನ್. ಅಶ್ವಥ್ ನಾರಾಯಣ, ಅರವಿಂದ್ ಲಿಂಬಾವಳಿ ಸೇರಿದಂತೆ ಹಲವು ಹಿರಿಯ ನಾಯಕರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ರಾಜ್ಯದ ಪ್ರಸ್ತುತ ರಾಜಕೀಯ ವಿದ್ಯಮಾನಗಳು ಹಾಗೂ ಚುನಾವಣಾ ತಂತ್ರಗಾರಿಕೆ ಕುರಿತು ಸುದೀರ್ಘ ಸಮಾಲೋಚನೆ ನಡೆಸಲಾಯಿತು.
ಕಾಡುಮಲ್ಲೇಶ್ವರನ ದರ್ಶನ ಪಡೆದ ರಾಷ್ಟ್ರಾಧ್ಯಕ್ಷರು
ರಾಜಕೀಯ ಸಭೆಗಳಿಗೂ ಮುನ್ನ ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ ನೀಡಿದ ನಿತಿನ್ ನಬಿನ್, ಮಲ್ಲೇಶ್ವರಂನಲ್ಲಿರುವ ಪ್ರಸಿದ್ಧ ಇತಿಹಾಸ ಪ್ರಸಿದ್ಧ ಕಾಡು ಮಲ್ಲೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದರು. ದೇವರಿಗೆ ವಿಶೇಷ ಪೂಜೆ ಹಾಗೂ ದರ್ಶನ ಪಡೆದ ಬಳಿಕ ಅವರು ಪಕ್ಷದ ಕಚೇರಿಯತ್ತ ಮುಖ ಮಾಡಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ಕ್ಕೆ ಆಗಮಿಸಿದ ರಾಷ್ಟ್ರೀಯ ಅಧ್ಯಕ್ಷರಿಗೆ ಪಕ್ಷದ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಭರ್ಜರಿ ಸ್ವಾಗತ ನೀಡಿದರು. ಇಂದು ದಿನಪೂರ್ತಿ ಸಭೆಗಳ ಸರಣಿಯೇ ಆಯೋಜನೆಗೊಂಡಿದ್ದು, ಸಂಸದರು, ಶಾಸಕರು, ಎಂಎಲ್ಸಿಗಳು ಹಾಗೂ ಜಿಲ್ಲಾ ಅಧ್ಯಕ್ಷರು ಒಳಗೊಂಡಂತೆ ಸುಮಾರು ೨೩೫ ಸದಸ್ಯರ ಬೃಹತ್ ಸಭೆಯಲ್ಲಿ ನಬಿನ್ ಪಾಲ್ಗೊಂಡಿದ್ದಾರೆ. ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲೂ ಭಾಗವಹಿಸಲಿರುವ ಅವರು ಮುಂದಿನ ಚುನಾವಣಾ ರೋಡ್ಮ್ಯಾಪ್ ಸಿದ್ಧಪಡಿಸಲಿದ್ದಾರೆ. ಬೆಂಗಳೂರು ಉತ್ತರ ಜಿಲ್ಲಾ ಪ್ರಶಿಕ್ಷಣ ವರ್ಗದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ರಾತ್ರಿಯಿಡೀ ರಹಸ್ಯ ಕಾರ್ಯತಂತ್ರ:
ಇಂದಿನ ವೇಳಾಪಟ್ಟಿಯಲ್ಲಿ ರಾತ್ರಿಯ ಸಮಯವನ್ನು ಸಂಪೂರ್ಣವಾಗಿ ಕಾಯ್ದಿರಿಸಲಾಗಿದ್ದು ಕೆಲವು ಅತ್ಯಂತ ಪ್ರಭಾವಿ ನಾಯಕರೊಂದಿಗೆ ರಹಸ್ಯ ಹಾಗೂ ಮಹತ್ವದ ಸಭೆಗಳು ನಡೆಯುವ ಸುಳಿವು ಸಿಕ್ಕಿದೆ. ದಿನಪೂರ್ತಿ ಹೈವೋಲ್ಟೇಜ್ ಸಭೆಗಳನ್ನು ಮುಗಿಸಲಿರುವ ನಿತಿನ್ ನಬಿನ್, ಇಂದು ರಾತ್ರಿ ೧೧ ಗಂಟೆಗೆ ಏರ್ ಇಂಡಿಯಾ ವಿಮಾನದ ಮೂಲಕ ಪುನಃ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.ಒಟ್ಟಾರೆ ನಿತಿನ್ ನಬಿನ್ ಅವರ ಈ ಒಂದು ದಿನದ ಬಿರುಗಾಳಿ ಪ್ರವಾಸ ಕರ್ನಾಟಕ ಬಿಜೆಪಿಯಲ್ಲಿ ಹೊಸ ಸಂಚಲನ ಮೂಡಿಸಿದೆ.
























