Home ಸುದ್ದಿ ರಾಷ್ಟ್ರೀಯ ಮಹಾಜನ್ ಹೇಳಿಕೆ ತಮಿಳುನಾಡು ರಾಜಕೀಯಕ್ಕೆ ಸಾಮ್ಯತೆ

ಮಹಾಜನ್ ಹೇಳಿಕೆ ತಮಿಳುನಾಡು ರಾಜಕೀಯಕ್ಕೆ ಸಾಮ್ಯತೆ

ನವದೆಹಲಿ,ಮೇ.೯- ಸಂಸತ್‌ನಲ್ಲಿ ನಮ್ಮದು ಏಕೈಕ ದೊಡ್ಡ ಪಕ್ಷವಾಗಿದೆ, ಹೀಗಿದ್ದರೂ ನಾವು ವಿರೋಧ ಪಕ್ಷದಲ್ಲಿ ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿಯ ಹಿರಿಯ ನಾಯಕರಾಗಿದ್ದ ಪ್ರಮೋದ್ ಮಹಾಜನ್ ಅವರ ಹೇಳಿಕೆ ಇದೀಗ ತಮಿಳುನಾಡು ರಾಜಕೀಯದೊಂದಿಗೆ ಸಾಮ್ಯತೆ ಮಾಡುವ ವಿಡಿಯೋ ವೈರಲ್ ಆಗಿದೆ.


೧೯೯೭ರಲ್ಲಿ ಎಚ್.ಡಿ ದೇವೇಗೌಡ ನೇತೃತ್ವದ ಯುನೈಟೆಡ್ ಫ್ರಂಟ್ ಸರ್ಕಾರದ ಉಳಿವಿನ ಚರ್ಚೆಯಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಮೋದ್ ಮಹಾಜನ್ ಅವರ ಭಾಷಣವನ್ನು ತಮಿಳುನಾಡಿನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿರುವ ನಟ ವಿಜಯ್ ನೇತೃತ್ವದ ಟಿವಿಕೆಗೆ ಹೋಲಿಸಲಾಗಿದ್ದು ಆ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.


ಪ್ರಮೋದ್ ಮಹಾಜನ್ ಅವರು ತಮ್ಮ ಭಾಷಣದಲ್ಲಿ ಬಿಜೆಪಿ, ಸಂಸತ್ತಿನಲ್ಲಿ ಏಕೈಕ ದೊಡ್ಡ ಪಕ್ಷವಾಗಿದೆ, ಆದರೂ ವಿರೋಧ ಪಕ್ಷದಲ್ಲಿ ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡನೇ ಅತಿದೊಡ್ಡ ರಾಜಕೀಯ ಪಕ್ಷ, ಸರ್ಕಾರದಿಂದ ಹೊರಗಿನಿಂದ ಬೆಂಬಲ ನೀಡಿದೆ, ಮೂರನೇ ಅತಿದೊಡ್ಡ ರಾಜಕೀಯ ಪಕ್ಷ, ಮೈತ್ರಿಕೂಟದ ಒಳಗಿದೆ.ಆದರೆ ಸರ್ಕಾರದಿಂದ ಹೊರಗಿದೆ. ಒಬ್ಬನೇ ಒಬ್ಬ ಲೋಕಸಭಾ ಸದಸ್ಯ ಹೊಂದಿರುವ ಪಕ್ಷ ಈಗ ಸರ್ಕಾರದ ಭಾಗವಾಗಿದ್ದಾರೆ ಎಂದಿದ್ದರು.


“ಇದು ವಿಚಿತ್ರ ವಿವಾಹವಾಗಿದ್ದು, ವರ (ಎಚ್.ಡಿ ದೇವೇಗೌಡ) ಮತ್ತು ವಧುವಿನ ತಂದೆ (ಕಾಂಗ್ರೆಸ್ ಅಧ್ಯಕ್ಷ ಸೀತಾರಾಮ್ ಕೇಸರಿ) ಮೊದಲ ದಿನದಿಂದಲೂ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಹನಿಮೂನ್ ಇನ್ನೂ ಪ್ರಾರಂಭವಾಗಿಲ್ಲ, ಮತ್ತು ಅವರು ವಿಚ್ಛೇದನದ ಅಂಚಿನಲ್ಲಿದ್ದಾರೆ” ಎನ್ನುತ್ತಿದ್ದಂತೆ ಇಡೀ ಸದನ ನಗುವಿಲ್ಲಿ ತೇಲಿಹೋಗಿತ್ತು


ಪ್ರಮೋದ್ ಮಹಾಜನ್ ಅವರು ವಿಡಿಯೋ ಇದೀಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಸುಮಾರು ಮೂರು ದಶಕಗಳ ಹಿಂದೆ ಪ್ರಮೋದ್ ಮಹಾಜನ್ ಮಾಡಿದ ಭಾಷಣ, ತಮಿಳುನಾಡು ಅತಂತ್ರ ವಿಧಾನಸಭೆಯ ನಂತರದ ಪರಿಣಾಮ ಎದುರಿಸುತ್ತಿರುವ ಕ್ಷಣದಲ್ಲಿ ವೈರಲ್ ಆಗಿದೆ.


ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಟಿವಿಕೆ ಹೊರಹೊಮ್ಮಿದೆ. ಹೀಗಿದ್ದರೂ ರಾಜ್ಯಪಾಲರು ಮೊದಲ ಎರಡು ಬಾರಿ ಮನವಿಯಲ್ಲಿ ವಿಜಯ್ ಅವರನ್ನು ಸರ್ಕಾರ ರಚನೆಗೆ ಆಹ್ವಾನಿಸದೆ ಬಹುಮತದ ಸಂಖ್ಯೆ ತೋರಿಸಿ ಎಂದು ಸರ್ಕಾರ ರಚನೆಗೆ ಆಹ್ವಾನ ನೀಡಿರಲಿಲ್ಲ.


ಹೀಗಾಗಿ ತಲಾ ಒಂದು ಅಥವಾ ಎರಡು ಸ್ಥಾನಗಳನ್ನು ಹೊಂದಿರುವ ಸಣ್ಣ ಪಕ್ಷಗಳಿಂದ ಬೆಂಬಲ ಬಯಸುತ್ತಿದೆ. ಎರಡನೇ ಅತಿದೊಡ್ಡ ಪಕ್ಷ ಸರ್ಕಾರದ ಹೊರಗೆ ಉಳಿದಿದೆ. ಮೂರನೇ ಅತಿದೊಡ್ಡ ಪಕ್ಷ, ಒಕ್ಕೂಟದ ಭಾಗವಾಗಿದ್ದರೆ, ಚಿಕ್ಕ ಪಕ್ಷ ಸರ್ಕಾರದಲ್ಲಿ ಸ್ಥಾನವನ್ನು ಹೊಂದಿದೆ ಎಂದು ಹೇಳಿದ್ದ ಭಾಷಣ ಇದಾಗಿದೆ.


ಈ ಹಿನ್ನೆಲೆಯಲ್ಲಿ, ವೀಕ್ಷಕರು ೧೯೯೭ ರಲ್ಲಿ ಮಾಜಿ ಬಿಜೆಪಿ ನಾಯಕ ಪ್ರಮೋದ್ ಮಹಾಜನ್ ಅವರ ಭಾಷಣವನ್ನು ನೆನಪಿಸಿಕೊಳ್ಳುತ್ತಿದ್ದಾರೆ, ಅವರು ಲೋಕಸಭೆಯಲ್ಲಿ ವಿಶ್ವಾಸ ಮತಯಾಚನೆಯ ಚರ್ಚೆಯ ಸಮಯದಲ್ಲಿ ಸಮ್ಮಿಶ್ರ ರಾಜಕೀಯದ ವಿರೋಧಾಭಾಸಗಳ ಕುರಿತು ನೀಡಿದ ಹೇಳಿಕೆಗಳು.


ತಮಿಳುನಾಡಿನಲ್ಲಿ ಪರಮಶತ್ರುಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಹೊಂದಾಣಿಕೆ ಮಾಡಿಕೊಳ್ಳಲಿದ್ದಾರೆ ಎನ್ನುವ ಗುಸು ಗುಸು ಆರಂಭವಾದ ನಂತರ ಈ ವಿಡಿಯೋ ವೈರಲ್ ಆಗಿದೆ
೧೯೯೬ ರ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷ ಸಂಪೂರ್ಣ ಬಹುಮತವನ್ನು ಗಳಿಸಲಿಲ್ಲ. ಬಿಜೆಪಿ ೧೬೧ ಸ್ಥಾನಗಳೊಂದಿಗೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ರಾಷ್ಟ್ರಪರಿ ಶಂಕರ್ ದಯಾಳ್ ಶರ್ಮಾ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸಿದ್ದರು.


ಶಿವಸೇನೆ ಸೇರಿದಂತೆ ಅದರ ಅಸ್ತಿತ್ವದಲ್ಲಿರುವ ಮಿತ್ರಪಕ್ಷಗಳೊಂದಿಗೆ, ಬಿಜೆಪಿ ಸುಮಾರು ೧೯೪ ಸ್ಥಾನಗಳೊಂದಿಗೆ ಸರ್ಕಾರ ರಚಿಸಿತ್ತು. ಬಹುಮತಕ್ಕೆ ಅಗತ್ಯವಿದ್ದ ಸಂಖ್ಯೆ ಪಡೆಯಲು ಎಬಿ ವಾಜಪೇಯಿ ಅವರು ಟಿಡಿಪಿ, ಡಿಎಂಕೆ ಅಥವಾ ಎಜಿಪಿಯಂತಹ ಪ್ರಾದೇಶಿಕ ಪಕ್ಷಗಳಿಂದ ಹೆಚ್ಚುವರಿ ಬೆಂಬಲ ನೀರೀಕ್ಷೆ ಮಾಡಿದ್ದರು.ಆದರೂ ಈ ಪಕ್ಷಗಳು ಬಿಜೆಪಿ ವಿರುದ್ಧದ ತಮ್ಮ ಒಗ್ಗಟ್ಟಿಗೆ ಜಾತ್ಯತೀತತೆ ಕಾರಣವೆಂದು ಉಲ್ಲೇಖಿಸಿ ಬೆಂಬಲ ನೀಡಲು ನಿರಾಕರಿಸಿದ್ದರು ೧೩ ದಿನಗಳ ಆಡಳಿತ ನಡೆಸಿ ವಾಜಪೇಯಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು

ಬಿಜೆಪಿಯೇತರ ಮತ್ತು ಕಾಂಗ್ರೆಸ್ಸೇತರ ಪಕ್ಷಗಳು ಯುನೈಟೆಡ್ ಫ್ರಂಟ್ ಅನ್ನು ರಚಿಸಿದವು. ೧೪೦ ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್ ಹೊರಗಿನಿಂದ ಬೆಂಬಲ ನೀಡಲು ಆಯ್ಕೆ ಮಾಡಿತು. ಯುನೈಟೆಡ್ ಫ್ರಂಟ್ ಸುಮಾರು ೧೯೦ ಸ್ಥಾನಗಳನ್ನು ಹೊಂದಿತ್ತು. ಕಾಂಗ್ರೆಸ್ ಬೆಂಬಲದೊಂದಿಗೆ, ದೇವೇಗೌಡರು ಬಹುಮತ ಗಳಿಸಿದರು ಮತ್ತು ಜೂನ್ ೧, ೧೯೯೬ ರಂದು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.


ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸೀತಾರಾಮ್ ಕೇಸರಿ ಅವರು ದೇವೇಗೌಡರು ತಮಗೆ ಸಾಕಷ್ಟು ಪ್ರಾಮುಖ್ಯತೆ ನೀಡುತ್ತಿಲ್ಲ ಎಂದು ಮಾರ್ಚ್ ೩೦, ೧೯೯೭ ರಂದು, ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿ ಬೆಂಬಲವನ್ನು ಹಿಂತೆಗೆದುಕೊಂಡರು. ನಂತರ ವಿಶ್ವಾಸಮತ ಯಾಚನೆ ಮಂಡಿಸಲಾಯಿತು. ೧೯೯೭ರ ಏಪ್ರಿಲ್ ೧೧, ರಂದು, ಯುನೈಟೆಡ್ ಫ್ರಂಟ್ ೧೯೦ ಮತಗಳನ್ನು ಪಡೆದರೆ, ವಿರೋಧ ಪಕ್ಷಗಳು ೨೯೨ ಮತಗಳನ್ನು ಗಳಿಸಿದವು. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಸರ್ಕಾರದ ವಿರುದ್ಧ ಮತ ಚಲಾಯಿಸಿದವು ದೇವೇಗೌಡರು ಅಧಿಕಾರ ಕಳೆದುಕೊಂಡು ನಂತರದ ಬೆಳವಣಿಗೆಯಲ್ಲಿ ಐಕೆ ಗುಜ್ರಾಲ್ ಪ್ರಧಾನಿಯಾಗಿದ್ದರು