
ಚಿಕ್ಕಬಳ್ಳಾಪುರ : ಮೇ.೨೪-ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ ಹಿನ್ನೆಲೆಯಲ್ಲಿ ನಗರದ ವಿವಿಧ ಅಂಗಡಿಗಳ ಮೇಲೆ ನಗರಸಭೆ ಮತ್ತು ಪರಿಸರ ಇಲಾಖೆ ಅಧಿಕಾರಿ ಸಿಬ್ಬಂಧಿ ತಂಡ ಶುಕ್ರವಾರ ದಾಳಿ ನಡೆಸಿ ಅಂದಾಜು ೮೦೦ ಕೆ.ಜಿಗೂ ಅಧಿಕ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ನಿಷೇಧಿತ ಪ್ಲಾಸ್ಟಿಕ್ ನ್ನು ವಶಪಡಿಸಿಕೊಂಡ ನಗರಸಭೆ ಪರಿಸರ ಅಭಿಯಂತರ ಪತ್ರಿಕೆಯೊಂದಿಗೆ ಪ್ರತಿಕ್ರಿಯೆ ನೀಡಿ, ನಗರದ ಸಂತೆ ಮಾರುಕಟ್ಟೆಯ ಬಾಲಾಜಿ ಪೇಪರ್ಸ್ ಹಾಗೂ ಭಾಗ್ಯಲಕ್ಷ್ಮಿಸ್ಟೋರ್ಸ್ ಅಂಗಡಿಗಳಲ್ಲಿ ಶೇಖರಣೆ ಮಾಡಿ ಇಟ್ಟಿದ್ದ ೮೦೦ ಕೆಜಿಗೂ ಅಧಿಕ ನಿಷೇಧಿತ ಪ್ಲಾಸ್ಟಿಕ್ ಅನ್ನು ವಶಕ್ಕೆ ಪಡೆದಿದ್ದು, ಬಾಲಾಜಿ ಪೇಪರ್ಸ್ ಮಾಲಿಕ ರಾಣಾಪ್ರತಾಪ್ ಗೆ ೭೦ ಸಾವಿರ ಮತ್ತು ಭಾಗ್ಯಲಕ್ಷ್ಮಿಸ್ಟೋರ್ಸ್ ಮಾಲಿಕ ಪಾಪಟ್ ಲಾಲ್ ಗೆ ೫೦ ಸಾವಿರ ದಂಡ ವಿಧಿಸಿ, ಮುಚ್ಚಳಿಕೆ ಬರೆಸಿಕೊಂಡು, ಮತ್ತೆ ನಿಷೇಧಿತ ಪ್ಲಾಸ್ಟಿಕ್ ಮಾಡಿದರೆ ಪ್ರಕರಣ ದಾಖಲಿಸುವ ಕುರಿತಾಗಿ ಎಚ್ಚರಿಕೆ ನೀಡಿದರು.
ಪ್ಲಾಸ್ಟಿಕ್ ವಸ್ತುಗಳ ಬಳಕೆ ಹಾಗೂ ಮಾರಾಟ ಮಾಡುತ್ತಿದ್ದ ಅಂಗಡಿಯ ಮೇಲೆ ಕಾರ್ಯಾಚರಣೆ ನಡೆಸಿದ ನಗರಸಭೆ ಅಧಿಕಾರಿಗಳು ನಿಷೇದಿತ ಪ್ಲಾಸ್ಟಿಕ್, ಕ್ಯಾರಿಬ್ಯಾಗ್, ಇನ್ನಿತರ ಸಾಮಾಗ್ರಿಗಳನ್ನು ವಶಪಡಿಸಿಕೊಂಡರು.ಇದೇ ಸಂದರ್ಭದಲ್ಲಿ ಕೆಲ ಅಂಗಡಿಗಳು ಟ್ರೇಡ್ ಲೈಸನ್ಸ್ ಪಡೆಯದಿರುವ ಬಗ್ಗೆಯೂ ಪರಿಶೀಲಿಸಿದರು ಟ್ರೈಡ್ ಲೈಸನ್ಸ್ ಇಲ್ಲದ ಅಂಗಡಿಗಳಿಗೆ ಕೂಡಲೇ ಲೈಸನ್ಸ್ ಪಡೆಯಲು ಅಧಿಕಾರಿಗಳು ನಿರ್ದೇಶನ ನೀಡಿದರು.
ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾರಾಟ ಮಾಡದಂತೆ ನಗರದ ಅಂಗಡಿ ಉದ್ದಿಮೆ ಮಾಲೀಕರಿಗೆ ಸಾಕಷ್ಟು ಬಾರಿ ಸೂಚನೆ ನೀಡಲಾಗಿದೆ . ಹೀಗಿದ್ದರೂ ಹಲವು ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾರಾಟ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ನಿರಂತರವಾಗಿ ದಾಳಿ ನಡೆಸಲಾಗುತ್ತಿದೆ. ದಾಳಿಯ ಸಂದರ್ಭದಲ್ಲಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಕ್ಕೆ ಪಡೆದಿದ್ದೇವೆ ಎಂದರು. ಪ್ಲಾಸ್ಟಿಕ್ ಮಾರಾಟ ವಿರುದ್ದ ಕಾರ್ಯಾಚರಣೆ ಸಂದರ್ಭದಲ್ಲಿ ಅಂಗಡಿ ಮಾಲೀಕರಿಗೆ ಪ್ಲಾಸ್ಟಿಕ್ ನಿಷೇಧ ಇರುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಪ್ಲಾಸ್ಟಿಕ್ ಮುಕ್ತ ನಗರವನ್ನು ಹಾಕಿ ಮಾಡುವ ದೆಸೆಯಲ್ಲಿ ನಿರಂತರವಾಗಿ ನಿಷೇಧಿತ ಪ್ಲಾಸ್ಟಿಕ್ ಅಂಗಡಿಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗುವುದು ಎಂದು ಇದೆ ವೇಳೆ ತಿಳಿಸಿದರು.
ಪ್ಲಾಸ್ಟಿಕ್ ತಯಾರಿಕೆ, ಆಮದು, ಸಂಗ್ರಹಣೆ, ವಿತರಣೆ, ಮಾರಾಟ, ಬಳಕೆ ಸಂಬಂಧ ಜಾರಿಯಲ್ಲಿರುವ ನಿಯಮಗಳನ್ನು ಎಲ್ಲರಿಗೂ ಮನದಟ್ಟು ಮಾಡಿಕೊಡಲಾಗುತ್ತಿದೆ. ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಸಾರ್ವಜನಿಕರ ಸಹಕಾರ ಕೋರಲಾಗುತ್ತಿದೆ ಎಂದೂ ಸಹ ತಿಳಿಸಿದರು.
ಕಾರ್ಯಾಚರಣೆಯಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸಹಾಯಕಿ ರಂಜಿತಾ, ರವಿಗೌಡ, ನಗರಸಭೆ ಮೇಸ್ತ್ರಿ ಸೀನಪ್ಪ, ಪೌರಕಾರ್ಮಿಕರು ಇದ್ದರು.