
ಅಹಮದಾಬಾದ್,ಜೂ.16-ಅಹಮದಾಬಾದ್ ವಿಮಾನ ಅಪಘಾತ ನಡೆದು ನಾಲ್ಕು ದಿನಗಳು ಕಳೆದಿವೆ. ಅಪಘಾತದಲ್ಲಿ 275 ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ.
ಇಲ್ಲಿಯವರೆಗೆ, ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತಪಟ್ಟ 80 ಜನರ ಡಿಎನ್‍ಎ ಮಾದರಿಗಳು ಪತ್ತೆಯಾಗಿವೆ. ಇದರಲ್ಲಿ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಮಾದರಿಯೂ ಸೇರಿದೆ. 33 ಮೃತದೇಹಗಳನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಈ ಮಾಹಿತಿಯನ್ನು ಅಹಮದಾಬಾದ್ ಸಿವಿಲ್ ಆಸ್ಪತ್ರೆಯ ಹೆಚ್ಚುವರಿ ಸೂಪರಿಂಟೆಂಡೆಂಟ್ ಡಾ. ರಜನೀಶ್ ಪಟೇಲ್ ಅವರು ರಾತ್ರಿ 10.15 ಕ್ಕೆ ಮಾಧ್ಯಮಗೋಷ್ಠಿಯಲ್ಲಿ ನೀಡಿದ್ದಾರೆ.
ರಾಜ್ಯ ಸರ್ಕಾರ ಮತ್ತು ಆಸ್ಪತ್ರೆ ಆಡಳಿತವು ಡಿಎನ್‍ಎ ಪರೀಕ್ಷೆಯ ಮೂಲಕ ಮೃತರನ್ನು ಗುರುತಿಸಲು ಪ್ರಯತ್ನಗಳನ್ನು ಮುಂದುವರೆಸಿದೆ. ಡಾ. ರಜನೀಶ್ ಪಟೇಲ್ ಮಾತನಾಡಿ,’ ಒಟ್ಟು ಹೊಂದಾಣಿಕೆಯಾಗುವ ಡಿಎನ್‍ಎ ಮಾದರಿಗಳ ಸಂಖ್ಯೆ 80 ತಲುಪಿದೆ. ಇವುಗಳಲ್ಲಿ 33 ಶವಗಳನ್ನು ಗೌರವಯುತವಾಗಿ ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿದ್ದಾರೆ.
ಸೋಮವಾರ ರಾತ್ರಿ ಇನ್ನಿಬ್ಬರು ಮೃತರ ಸಂಬಂಧಿಕರು ಆಗಮಿಸುವ ನಿರೀಕ್ಷೆಯಿದ್ದು, ಮಂಗಳವಾರ 13 ಕುಟುಂಬಗಳು ಮೃತದೇಹಗಳನ್ನು ಸಂಗ್ರಹಿಸಲಿವೆ ಎಂದು ಅವರು ಹೇಳಿದ್ದಾರೆ. 21 ಮೃತರ ಕುಟುಂಬ ಸದಸ್ಯರು ಹೆಚ್ಚಿನ ಸಮಾಲೋಚನೆಯ ನಂತರ ಮೃತದೇಹಗಳನ್ನು ಸಂಗ್ರಹಿಸಲಿದ್ದಾರೆ. 11 ಮೃತರ ಪ್ರಕರಣದಲ್ಲಿ, ಅವರ ಸಂಬಂಧಿಕರು ಕೂಡ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಉಳಿದ ಡಿಎನ್‍ಎ ಹೊಂದಾಣಿಕೆ ಪೂರ್ಣಗೊಂಡ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ಇವರಲ್ಲಿ ಅಹಮದಾಬಾದ್‍ನಿಂದ 12, ಬರೋಡಾದಿಂದ ಐದು, ಮೆಹ್ಸಾನಾದಿಂದ ನಾಲ್ಕು, ಆನಂದ್‍ನಿಂದ ನಾಲ್ಕು, ಖೇಡಾದಿಂದ ಎರಡು, ಭರೂಚ್‍ನಿಂದ ಎರಡು, ಉದಯಪುರದಿಂದ ಒಂದು, ಜೋಧ್‍ಪುರದಿಂದ ಒಂದು, ಬೋಟಾಡ್‍ನಿಂದ ಒಂದು ಮತ್ತು ಅರವಳ್ಳಿಯಿಂದ ಒಂದು ಸೇರಿವೆ.
ರಾಜ್ಯ ಸರ್ಕಾರವು ಪ್ರತಿಯೊಬ್ಬ ಮೃತರ ಕುಟುಂಬಕ್ಕಾಗಿ ವಿಶೇಷ ತಂಡವನ್ನು ನೇಮಿಸಿದೆ. ಇದು ಹಿರಿಯ ಅಧಿಕಾರಿ, ಪೆÇಲೀಸ್ ಅಧಿಕಾರಿ ಮತ್ತು ವೃತ್ತಿಪರ ಸಲಹೆಗಾರರನ್ನು ಒಳಗೊಂಡಿದೆ. ಗುರುತಿಸುವಿಕೆ ಮತ್ತು ವರ್ಗಾವಣೆ ಪ್ರಕ್ರಿಯೆಯಲ್ಲಿ ಕುಟುಂಬಗಳಿಗೆ ಭಾವನಾತ್ಮಕವಾಗಿ ಮತ್ತು ವ್ಯವಸ್ಥಿತವಾಗಿ ಬೆಂಬಲ ನೀಡುವ ಜವಾಬ್ದಾರಿಯನ್ನು ಈ ತಂಡಗಳು ಹೊಂದಿವೆ.
ಲಂಡನ್‍ಗೆ ತೆರಳುತ್ತಿದ್ದ ಬೋಯಿಂಗ್ 787-8 ಡ್ರೀಮ್‍ಲೈನರ್ ವಿಮಾನವು ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಸ್ವಲ್ಪ ಸಮಯದ ನಂತರ ಹಾಸ್ಟೆಲ್ ಆವರಣಕ್ಕೆ ಅಪ್ಪಳಿಸಿದೆ. ಇದರಲ್ಲಿ ಗುಜರಾತ್‍ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ 241 ಪ್ರಯಾಣಿಕರು ಮತ್ತು ಸಿಬ್ಬಂದಿ ಸಾವನ್ನಪ್ಪಿದ್ದಾರೆ.