
ಸಂಜೆವಾಣಿ ವಾರ್ತೆ,
ವಿಜಯಪುರ, ಸೆ. ೧೯: ನಗರದ ಡಾ. ಬಸವರಾಜ ನಾಗೂರ ಕಾಲೇಜು ಆವರಣದಲ್ಲಿ ಡಾ. ಬಿ.ಎನ್.ಎಂ.ಇ. ಟ್ರಸ್ಟ್ ಅಡಿಯಲ್ಲಿನ ಶಿಕ್ಷಣ ಸಂಸ್ಥೆಗಳು ಹಾಗೂ ವಿಜಯಪುರ ಜಿಲ್ಲಾ ೩೭೧(ಜೆ) ಹೋರಾಟ ಸಮಿತಿ ವತಿಯಿಂದ ೭೯ನೇ ಹೈದ್ರಾಬಾದ್ ವಿಮೋಚನಾ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿಮೋಚನಾ ಚಳುವಳಿಯ ಪ್ರಮುಖ ಹೋರಾಟಗಾರ ಡಾ. ಸರದಾರ ಬಸವರಾಜ ನಾಗೂರ ಅವರ ಪುತ್ಥಳಿಗೆ ಗೌರವ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲಾ ೩೭೧(ಜೆ) ಹೋರಾಟಗಾರ ವಿನೋದ ಖೇಡ ಮಾತನಾಡಿ, ಹೈದ್ರಾಬಾದ್ ಪ್ರಾಂತದ ವಿಮೋಚನಾ ಚಳುವಳಿಯ ಆರಂಭದಲ್ಲಿ ವಿಜಯಪುರ ಮಹತ್ವದ ಪಾತ್ರ ವಹಿಸಿತ್ತು. ಡಾ. ಸರದಾರ ಬಸವರಾಜ ನಾಗೂರ ಅವರು ಚಳುವಳಿಯ ಮುಂಚೂಣಿಯಲ್ಲಿ ನಿಂತು ನಾಯಕತ್ವ ವಹಿಸಿದ್ದರು. ಭಾರತದ ಅಖಂಡತೆ ಮತ್ತು ಏಕತೆಗಾಗಿ ಶ್ರಮಿಸಿದ ಅವರು ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಾಗಿದ್ದು, ಅವರ ತ್ಯಾಗ, ಹೋರಾಟ ಹಾಗೂ ಆದರ್ಶಗಳನ್ನು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದು ಹೇಳಿದರು.
ವಿಜಯಪುರ ಜಿಲ್ಲಾ ೩೭೧(ಜೆ) ಹೋರಾಟಗಾರ ಲಾಯಪ್ಪ ಇಂಗಳೆ ಮಾತನಾಡಿ, ಹೈದ್ರಾಬಾದ್ ವಿಮೋಚನಾ ಚಳುವಳಿಗಾಗಿ ಗಡಿಭಾಗದಲ್ಲಿ ಸ್ಥಾಪಿಸಲಾಗಿದ್ದ ಸಿಂದಗಿ ಮತ್ತು ಕಕ್ಕಳಮೇಲಿ ಶಿಬಿರಗಳಿಗೆ ಭಾರತ ಸರ್ಕಾರದಿಂದ ಬರುತ್ತಿದ್ದ ತುರ್ತು ಸಂದೇಶಗಳನ್ನು ಸರದಾರ ಶರಣಗೌಡ ಇನಾಮದಾರ ಅವರ ಮೂಲಕ ಸರದಾರ ಬಸವರಾಜ ನಾಗೂರ ಅವರು ತಲುಪಿಸುತ್ತಿದ್ದರು. ಹೋರಾಟಕ್ಕೆ ಅಗತ್ಯವಿದ್ದ ಮದ್ದು-ಗುಂಡುಗಳ ಸಾಗಾಟದ ಹೊಣೆಯನ್ನೂ ನಿರ್ವಹಿಸಿ, ವಿಮೋಚನಾ ಹೋರಾಟ ಯಶಸ್ವಿಯಾಗಲು ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ವಿಮೋಚನಾ ಚಳುವಳಿಯ ಸಂಪೂರ್ಣ ನೇತೃತ್ವವನ್ನು ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಜನಿಸಿದ ಸ್ವಾಮಿ ರಾಮಾನಂದ ತೀರ್ಥರು ವಹಿಸಿದ್ದರು. ಅವರೊಂದಿಗೆ ಸಿಂದಗಿಯ ಸಿದ್ದಗೊಂಡಪ್ಪಗೌಡ ಪಾಟೀಲ, ಮುಳಸಾವಳಗಿಯ ಸಂಗಯ್ಯ ಹಿರೇಮಠ ಸೇರಿದಂತೆ ಜಿಲ್ಲೆಯ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಹಗಲಿರುಳು ಶ್ರಮಿಸಿದ್ದರು. ಅವರ ತ್ಯಾಗ ಮತ್ತು ಹೋರಾಟದ ಫಲವಾಗಿ ಹೈದ್ರಾಬಾದ್ ಪ್ರಾಂತ ಭಾರತದ ಒಕ್ಕೂಟದ ಭಾಗವಾಯಿತು ಎಂದರು.
ಹೈದ್ರಾಬಾದ್ ಪ್ರಾಂತದ ತೆಲಂಗಾಣ, ಮರಾಠವಾಡ ಹಾಗೂ ಕರ್ನಾಟಕದ ಕಲಬುರಗಿ, ಬೀದರ್, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳಿಗೆ ದೊರೆಯುತ್ತಿರುವ ವಿಶೇಷ ಸೌಲಭ್ಯಗಳಿಂದ ವಿಜಯಪುರ ಜಿಲ್ಲೆಯನ್ನು ಹೊರಗಿಟ್ಟಿರುವುದು ಜಿಲ್ಲೆಯ ವಿಮೋಚನಾ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅನ್ಯಾಯವಾಗಿದೆ. ಸರ್ಕಾರ ಕೂಡಲೇ ವಿಜಯಪುರ ಜಿಲ್ಲೆಗೂ ೩೭೧(ಜೆ) ಸೌಲಭ್ಯ ಕಲ್ಪಿಸುವ ಮೂಲಕ ಹೋರಾಟಗಾರರಿಗೆ ನೈಜ ಗೌರವ ಸಲ್ಲಿಸಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಡಾ. ಬಿ.ಎನ್.ಎಂ.ಇ. ಟ್ರಸ್ಟ್ನ ವಿವಿಧ ಶಾಲಾ-ಕಾಲೇಜುಗಳ ಸಿಬ್ಬಂದಿಗಳಾದ ಡಾ. ಲಿಂಗಾರೆಡ್ಡಿ ಬಿರಾದಾರ, ಡಾ. ಪಿ.ಆರ್. ವಸ್ತ್ರದ, ಡಾ. ಬಸವರಾಜ ಭೀಗೆ, ಶ್ರೀಧರ ತೊನಶ್ಯಾಳಮಠ, ಉಮಾ ಭೈರಶೆಟ್ಟಿ, ಸೀಮಾ ಹಳ್ಳಿ, ಅನೀಲ ಹೊಸೂರ, ವಿಜಯಕುಮಾರ ಎಂ., ರಾಘವೇಂದ್ರ ಗೋದಿ, ಸತೀಶ ಪಾಟೀಲ, ಮಲ್ಲು ಪಾಟೀಲ, ಸುರೇಶ ಲೋಣಿ, ಸುಧಾಕರ ಎಂ., ಶಿವಾನಂದ ಕಾಖಂಡಕಿ, ಪ್ರಕಾಶ ಪಾಟೀಲ, ಉದಯಕುಮಾರ ರಜಪೂತ, ಪ್ರವೀಣ ಬಿರಾದಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಹೋರಾಟಗಾರರಾದ ಅನಿಲ ಇಕ್ಕಡೆ, ಮಲ್ಲಿಕಾರ್ಜುನ ಬಟಗಿ, ಕಲ್ಲಪ್ಪ ಶಿವಶರಣ, ಚಂದ್ರಶೇಖರ ಹೊಸಮನಿ, ಮಲ್ಲಿಕಾರ್ಜುನ ಲಂಗೋಟಿ, ಸಂತೋಷ ಕಲಗುಡಿ, ಅಂಬಣ್ಣ ಗುನ್ನಾಪೂರ, ನೀಲಾಂಬಿಕಾ ಬಿರಾದಾರ, ಅನೀಲ ಪವಾರ, ರಾಜು ಕುಮಟಗಿ, ಈಶ್ವರ ಚಂದ್ರ ಪಡಗಾನೂರ, ಶಂಕರ ಸಾತಪೋತೆ, ಶರಣಪ್ಪ ಕಟ್ಟಿ, ತಿಮ್ಮನಗೌಡ ಪಾಟೀಲ, ರಾಜಕುಮಾರ ಉಪ್ಪಾರ, ಚಿದಾನಂದ ಹಳ್ಳಿ, ವಿಠ್ಠಲ ಕರಿಗಾರ, ಉಮೇಶ ದೊಡಮನಿ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


























