
ಕೋಲಾರ:- ಜಿಲ್ಲೆಯಲ್ಲಿ ತಮ್ಮ ಹೆಜ್ಜೆ ಗುರುತು ಬಿಟ್ಟು ಹೋಗುತ್ತಿರುವ ಮತ್ತು ವೃತ್ತಿಯಲ್ಲಿ ಆಕರ್ಷಣೀಯ ವ್ಯಕ್ತಿತ್ವ ಹೊಂದಿದ ಸುನೀಲ್ ಎಸ್.ಹೊಸಮನಿ ೩ ವರ್ಷ ಅವಧಿಯಲ್ಲಿ ೭೨೫೦ಕ್ಕೂ ಹೆಚ್ಚು ಕಾನೂನು ಅರಿವು-ನೆರವು ಶಿಬಿರ ನಡೆಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಎ.ಮಂಜುನಾಥ್ ಶ್ಲಾಘಿಸಿದರು.
ಕೋಲಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾಗಿದ್ದು, ಇದೀಗ ತುಮಕೂರು ಜಿಲ್ಲೆಗೆ ಸಿಜೆಎಂ ಆಗಿ ವರ್ಗಾವಣೆಗೊಂಡಿರುವ ಹಿರಿಯ ಸಿವಿಲ್ ನ್ಯಾಯಾಧೀಶರೂ ಆದ ಸುನೀಲ ಎಸ್.ಹೊಸಮನಿ ಅವರನ್ನು ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಬೀಳ್ಕೊಟ್ಟು ಅವರು ಮಾತನಾಡಿದರು.
ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿ ಇಷ್ಟೊಂದು ಕ್ರಿಯಾಶೀಲರಾಗಿದ್ದ, ಸರಳ,ಸಜ್ಜನಿಕೆಯ ವ್ಯಕ್ತಿಯನ್ನು ನಾನು ಎಲ್ಲಿಯೂ ನೋಡಿಲ್ಲ ಎಂದ ಅವರು, ಒಂದೇ ದಿನ ನಾಲ್ಕೈದು ಕಾನೂನು ಶಿಬಿರದಲ್ಲಿ ಪಾಲ್ಗೊಂಡು ಅರಿವು ನೀಡುವ ಅವರ ಚಟುವಟಿಕೆ ಇತರರಿಗೆ ಆದರ್ಶವಾಗಿದೆ ಎಂದರು.
ಜೈಲಿನ ಖೈದಿಗಳು, ಜಿಲ್ಲೆಯ ಪ್ರತಿ ಶಾಲಾ,ಕಾಲೇಜು ವಿದ್ಯಾರ್ಥಿಗಳು, ನಗರ ಹಳ್ಳಿಗಳಲ್ಲಿ ಸುನಿಲ ಎಸ್.ಹೊಸಮನಿ ಅವರ ಹೆಸರು ಕೇಳಿ ಬರುತ್ತದೆ,ಯಾವುದೇ ವೃತ್ತಿಯನ್ನು ಇಷ್ಟಪಟ್ಟು ಮಾಡಿದರೆ ಸಿಗುವ ತೃಪ್ತಿ ಸಾಮಾನ್ಯವಲ್ಲ, ಅಂತಹ ಕೆಲವೇ ವ್ಯಕ್ತಿಗಳಲ್ಲಿ ಇವರು ಒಬ್ಬರಾಗಿದ್ದು, ಅವರಿಗೆ ಮತ್ತಷ್ಟು ಉನ್ನತ ಸ್ಥಾನ ಸಿಗಲಿ ಎಂದು ಹಾರೈಸಿದರು.
ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ನ್ಯಾಯಾಧೀಶರಾದ ಸುನಿಲ್ ಎಸ್.ಹೊಸಮನಿ, ಕೋಲಾರ ಜಿಲ್ಲೆಯಲ್ಲಿ ತಮ್ಮ ಕಾರ್ಯಕ್ಕೆ ಸಿಕ್ಕ ಸಹಕಾರ ನೆನೆದು ಭಾವುಕರಾಗಿ ಮಾತನಾಡಿ, ಇಲ್ಲಿ ಕೆಲಸ ಮಾಡಲು ಕೆಲವರಿಗೆ ಹೆದರಿಕೆ ಇದೆ ಆದರೆ ನನ್ನ ಅವಧಿಯಲ್ಲಿ ಇಲ್ಲಿನ ಜನತೆಯೊಂದಿಗೆ ಒಡನಾಟ, ವಕೀಲರ ಸಹಕಾರ, ಕಾನೂನು ಸ್ವಯಂಸೇವಕರ ತಂಡದ ನೆರವು, ಮಧ್ಯಸ್ತಗಾರರ ಕ್ರಿಯಾಶೀಲತೆ ಎಲ್ಲವೂ ನೆರವಿಗೆ ಬಂದಿದೆ ಎಂದು ಸ್ಮರಿಸಿದರು.
ಈ ಎಲ್ಲಾ ಕಾರಣಗಳಿಂದ ಮೂರು ವರ್ಷಗಳಲ್ಲಿ ೨.೮೮ ಲಕ್ಷ ವಾಜ್ಯಪೂರ್ವ ಹಾಗೂ ಚಾಲ್ತಿ ಪ್ರಕರಣಗಳನ್ನು ರಾಜೀ ಮೂಲಕ ಇತ್ಯರ್ಥಪಡಿಸಲು ಸಾಧ್ಯವಾಗಿದೆ, ಅದಾಲತ್‌ನಿಂದ ವಕೀಲರಿಗೆ ಕೇಸ್‌ಗಳು ಕಡಿಮೆಯಾಗುವ ಆತಂಕವಿತ್ತು ಆದರೆ ಭಯ ಬೇಕಿಲ್ಲ ಹೆಚ್ಚಾಗಿದೆ ಎಂದು ಅಂಕಿ ಅಂಶಗಳೊಂದಿಗೆ ವಿವರಿಸಿದರು.
ವ್ಯಸನಮುಕ್ತ, ಬಾಲ್ಯವಿವಾಹ, ಬಾಲಕಾರ್ಮಿಕತೆ ಮುಕ್ತ ಜಿಲ್ಲೆಯಾಗಿಸುವ ಪ್ರಯತ್ನ ಮಾಡಿದ್ದೇನೆ, ಪ್ಲಾಸ್ಟಿಕ್ ಮುಕ್ತ ಕರ್ನಾಟಕ ರಾಜ್ಯ ಕಾನೂನು ಪ್ರಾಧಿಕಾರದ ಈ ವರ್ಷದ ಧ್ಯೇಯವಾಗಿದೆ, ಅದು ಸಾಕಾರಗೊಳ್ಳಲಿ ಎಂದು ಆಶಿಸಿದರು.
ಕಿರಿಯ ವಕೀಲರಿಗೆ ಮತ್ತಷ್ಟು ಕಾರ್ಯಾಗಾರಗಳನ್ನು ನಡೆಸಿ ಸಿವಿಲ್ ನ್ಯಾಯಾಧೀಶರ ಪರೀಕ್ಷೆ ಎದುರಿಸಲು ಮಾರ್ಗದರ್ಶನ ನೀಡಿ ಎಂದು ವಕೀಲರ ಸಂಘಕ್ಕೆ ಸಲಹೆ ನೀಡಿದ ಅವರು, ನ್ಯಾಯ ನೀಡುವುದನ್ನು ವ್ರತದಂತೆ ಆಚರಿಸಬೇಕು, ಬಡ ಕಕ್ಷಿದಾರರಿಗೆ ನ್ಯಾಯ ಒದಗಿಸಬೇಕು ಎಂದು ಕರೆ ನೀಡಿದರು.
ಹಿರಿಯ ವಕೀಲ ಕೆ.ವಿ.ಶಂಕರಪ್ಪ ಮಾತನಾಡಿ, ಸರಳ,ಸಜ್ಜನಿಕೆ, ವೃತ್ತಿಪರತೆ, ಕರ್ತವ್ಯ ಪಾಲನೆ ಅವರಿಂದ ಕಲಿಯಬೇಕು, ನ್ಯಾಯಾಧೀಶರೆಂದರೆ ೪ ಗೋಡೆಗಳ ನಡುವೆ ಸೀಮಿತವೆಂಬ ಅಪವಾದದಿಂದ ಹೊರ ಬಂದು ಜನರಲ್ಲಿಗೆ ಹೋಗಿ ನ್ಯಾಯ ತಲುಪಿಸಿದ್ದಾರೆ ಅವರು ವಕೀಲರಿಗೆ ಮಾದರಿಯಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಬೈರಾರೆಡ್ಡಿ, ಉಪಾಧ್ಯಕ್ಷ ರವೀಂದ್ರಬಾಬು, ಖಜಾಂಚಿ ನವೀನ್ ಗೌಡ, ಹಿರಿಯ ವಕೀಲರಾದ ಬಿಸಪ್ಪಗೌಡ, ಕೋದಂಡಪ್ಪ, ಪಿಎನ್.ಕೃಷ್ಣಾರೆಡ್ಡಿ, ಜಿ.ಶ್ರೀಧರ್, ಎ.ವಿ.ಆನಂದ್, ಕೃಷ್ಣಪ್ಪ ಮತ್ತಿತರರಿದ್ದರು.