೭೦ನೇ ಕನ್ನಡ ರಾಜ್ಯೋತ್ಸವ ಆಚರಣೆ

ಕೋಲಾರ,ನ.೪- ಬಂಗಾರಪೇಟೆ ತಾಲ್ಲೂಕಿನ ಹಂಚಾಳಗೇಟ್ ನಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ಸಮೂಹ ವಿದ್ಯಾಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ೭೦ನೇ ವರ್ಷದ ಕನ್ನಡರಾಜ್ಯೋತ್ಸವ ಕಾರ್ಯಕ್ರಮವನ್ನು ಜ್ಯೋತಿಬೆಳಗಿಸಿ, ತಾಯಿ ಭುವನೇಶ್ವರಿದೇವಿಗೆ ಪುಷ್ಪನಮನವನ್ನು ಸಲ್ಲಿಸುವುದರ ಮುಖೇನ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಚಂದ್ರಶೇಖರ್ ರವರು ಶುಭಾಶಯಗಳನ್ನು ಹಂಚಿಕೊಂಡರು.


ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ನಮ್ಮ ರಾಜ್ಯದಲ್ಲಿ ಅಲ್ಲದೇ ವಿಶ್ವದಾದ್ಯಂತ ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸುವುದೇ ಕನ್ನಡರಾಜ್ಯೋತ್ಸವ ದಿನವಾಗಿದೆ. ಮೈಸೂರು ರಾಜ್ಯ ೧೯೫೬ರ ನವೆಂಬರ್ ೧ ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಪ್ರತಿ ವರ್ಷ ನವೆಂಬರ್ ೧ ರಂದು ಆಚರಿಸಲಾಗುತ್ತದೆ.


ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟರಾಯರು ೧೯೦೫ರಲ್ಲಿ ಕರ್ನಾಟಕ ಏಕೀಕರಣ ಚಳುವಳಿಯನ್ನು ಪ್ರಾರಂಭಿಸಿದರು. ೧೯೫೦ ರಲ್ಲಿ ಭಾರತ ಗಣರಾಜ್ಯವಾದ ನಂತರ ಭಾಷೆಗಳ ಆಧಾರದ ಮೇಲೆ ವಿವಿಧ ಪ್ರಾಂತ್ಯಗಳು ರೂಪುಗೊಂಡಿದ್ದವು. ೧೯೫೬ರ ನವೆಂಬರ್ ೧ ರಂದು ಭಾಷಾವಾರು ಪ್ರಾಂತ್ಯಗಳ ಆಧಾರದ ಮೇಲೆ ಮದ್ರಾಸ್, ಮುಂಬೈ ಮತ್ತು ಹೈದರಾಬಾದ್ ಪ್ರಾಂತ್ಯದ ಕನ್ನಡಭಾಷೆ ಮಾತನಾಡುವ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು. ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೆಮೈಸೂರು ಎಂಬುದಾಗಿ ಹೊಸದಾಗಿ ರೂಪುಗೊಂಡು ಮೈಸೂರು ರಾಜ್ಯವನ್ನು ೩ ಪ್ರದೇಶಗಳಲ್ಲಿ ಗುರುತಿಸಲಾಯಿತು. ಏಕೀಕರಣ ಆರಂಭದ ಮುಂಚಿನ ರಾಜ್ಯದ ಹೆಸರು ಇರಲೆಂದು ಮೈಸೂರು ಹೆಸರನ್ನು ಉಳಿಸಿಕೊಂಡರು. ತದನಂತರ ಮೈಸೂರು ಸಂಸ್ಥಾನದ ಹೆಸರನ್ನು ನವೆಂಬರ್ ೧-೧೯೭೩ ರಂದು ಕರ್ನಾಟಕ ಎಂದು ನಾಮಕರಣ ಮಾಡಲಾಯಿತು. ನಾವು ಹಾರಿಸುವ ಕನ್ನಡದ ಬಾವುಟವು ಹಳದಿ ಮತ್ತು ಕೆಂಪು ಬಣ್ಣಗಳ ದ್ವಿವರ್ಣದ ಬಾವುಟವಾಗಿದ್ದು, ಹಳದಿಬಣ್ಣವು ಶಾಂತಿಯನ್ನು. ಕೆಂಪುಬಣ್ಣವು ಧೈರ್ಯವನ್ನು ಸೂಚಿಸುತ್ತದೆ. ಜೊತೆಗೆ ಇವುಗಳನ್ನು ಅರಿಶಿನ ಮತ್ತು ಕುಂಕುಮದ ಸಂಕೇತವಾಗಿ ಪರಿಗಣಿಸಲಾಗಿದೆ. ಧ್ವಜವನ್ನು ೧೯೬೫ ರಲ್ಲಿ ಎಂ.ರಾಮಮೂರ್ತಿಯವರು ತಯಾರಿಸಿದರು. ಈ ನಿಟ್ಟಿನಲ್ಲಿ ನೀವು ಹಾಡಿದ ಕನ್ನಡ ನಾಡಗೀತೆಯಾದ “ಜಯಭಾರತ ಜನನಿಯ ತನುಜಾತೆ” ಹಾಡು ಚೆನ್ನಾಗಿ ಮೂಡಿಬಂದಿತು. ಕನ್ನಡ ನಾಡು, ನುಡಿ, ಜಲ ಮತ್ತು ಸಂಸ್ಕೃತಿಯನ್ನು ರಕ್ಷಿಸಬೇಕು. ಕನ್ನಡಭಾಷೆಯನ್ನು ಹೆಚ್ಚು ಬಳಕೆಮಾಡಬೇಕು ಹಾಗೆಯೇ ಬೇರೆ ಭಾಷೆಗಳನ್ನೂ ಗೌರವಿಸಬೇಕೆಂದು ತಿಳಿಸಿದರು.


ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ.ಎಂ.ವಿ.ವಿಜಯಕುಮಾರ್, ಕನ್ನಡಭಾಷೆ ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡವಾಗಿ ರೂಪಾಂತರವಾಗಿದ್ದರು ಭಾಷೆಗೆ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಭಾಷಾಪ್ರಪಂಚದಲ್ಲಿ ಕನ್ನಡಭಾಷೆಗೆ ಪ್ರಮುಖ ಸ್ಥಾನಮಾನ ದೊರೆತಿದೆ. ವಿದ್ಯಾರ್ಥಿಗಳಾದ ನೀವುಗಳು ಮಾತೃಭಾಷೆಯನ್ನು ಹೆಚ್ಚಾಗಿ ಬಳಸುವುದರ ಮುಖೇನ ಭಾಷೆಯನ್ನು ಗಟ್ಟಿಗೊಳಿಸಬೇಕೆಂದು ಕೋರುತ್ತಾ ಶುಭಾಷಯಗಳನ್ನು ಹಂಚಿಕೊಂಡರು. ಶಿಕ್ಷಕ ಆದಿಬಯ್ಯಪ್ಪ ರವರು ನುಡಿಗಳನ್ನು ನುಡಿದರು. ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಗಳಲ್ಲಿ ಅನೇಕ ವಿದ್ಯಾರ್ಥಿಗಳು ನೃತ್ಯ ರೂಪಕಗಳನ್ನು ನೀಡಿದರು. ಇದರಿಂದ ಕಲಾಪೋಷಣೆಗೆ ಹೆಚ್ಚು ಒತ್ತು ನೀಡಬೇಕೆಂದು ಶಿಕ್ಷಣ ಮತ್ತು ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಚಂದ್ರಶೇಖರ್.ಡಿ.ಲಿಟ್ ರವರು ವಿದ್ಯಾರ್ಥಿಗಳಿಗೆ ತಲಾ ೫೦೦ ರೂಗಳ ನಗದು ಬಹುಮಾನವನ್ನು ನೀಡುವುದರ ಮುಖೇನ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಮತ್ತಷ್ಟು ಬಳಸಿಕೊಳ್ಳಬೇಕೆಂದು ಕರೆ ನೀಡಿದರು.


ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ಕಾರ್ಯದರ್ಶಿ ಸಿ.ಅಮರ್‌ನಾಥ್, ಮುಖ್ಯ ಆಡಳಿತಾಧಿಕಾರಿ ಎಂ.ವಿ.ವಿಜಯ್‌ಕುಮಾರ್, ಆಡಳಿತಾಧಿಕಾರಿ ಎಸ್.ಲಕ್ಷ್ಮೀನಾರಾಯಣ ರೆಡ್ಡಿ, ಎಲ್ಲಾ ವಿಭಾಗಗಳ ಪ್ರಾಂಶುಪಾಲರು ಗಳು, ಮುಖ್ಯೋಪಾಧ್ಯಾಯರಾದ ಎಂ.ಪಾಪಣ್ಣ, ಸಿ.ಎಸ್.ಸತೀಶ್ ಮತ್ತು ಸಿಬ್ಬಂಧಿ ವರ್ಗ ಹಾಜರಾಗಿದ್ದರು.

ಕುಮಾರಿ ಸೃಷ್ಟಿ ಪ್ರಾರ್ಥಿಸಿ, ಶಿಕ್ಷಕಿಯಾದ ವಿ.ಸ್ವರ್ಣಲತ ನಿರೂಪಿಸಿ, ವಂದಿಸಿದರು.