
ವಿಜಯಪುರ .ಫೆ೨೮: ಸ್ಥಳೀಯ ರಾಜಕೀಯದಲ್ಲಿ ಭಾರೀ ಬೆಳವಣಿಗೆಯೊಂದು ನಡೆದಿದ್ದು, ಪಕ್ಷದ ವಿಪ್ ಉಲ್ಲಂಘಿಸಿ ಮತ ಚಲಾಯಿಸಿದ ಆರೋಪದ ಮೇಲೆ ವಿಜಯಪುರ ಪಟ್ಟಣದ ಪುರಸಭೆಯ ಏಳು ಮಂದಿ ಜೆಡಿಎಸ್ ಸದಸ್ಯರನ್ನು ವರ್ಗಾವಣೆಗೊಂಡ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಬಸವರಾಜು ಅವರು ಸದಸ್ಯತ್ವ ಸ್ಥಾನದಿಂದ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.

ಘಟನೆಯ ಹಿನ್ನೆಲೆ:ಕಳೆದ ೧೦.೦೩.೨೦೨೫ ರಂದು ಪುರಸಭೆಯ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಈ ಬೆಳವಣಿಗೆ ಸಂಭವಿಸಿತ್ತು. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್‌ನ ಈ ೭ ಸದಸ್ಯರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಮತ ನೀಡಿದ್ದರು. ಇದರಿಂದಾಗಿ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾಗಿದ್ದರೆ, ಉಪಾಧ್ಯಕ್ಷ ಸ್ಥಾನ ಜೆಡಿಎಸ್‌ಗೆ ದಕ್ಕಿತ್ತು.
ಪಕ್ಷದ ನಿರ್ದೇಶನ (ವಿಪ್) ಮೀರಿ ವರ್ತಿಸಿದ ಈ ಏಳು ಸದಸ್ಯರ ವಿರುದ್ಧ ಅಂದಿನ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿದ್ದ ಮುನೇಗೌಡ ಅವರು ೨೭.೦೩.೨೦೨೫ ರಂದು ಪುರಸಭೆ ಮುಖ್ಯ ಅಧಿಕಾರಿಗೆ ದೂರು ನೀಡಿದ್ದರು. ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಜಿಲ್ಲಾಧಿಕಾರಿಗಳ ನ್ಯಾಯಾಲಯವು, ’ಕರ್ನಾಟಕ ಸ್ಥಳೀಯ ಸಂಸ್ಥೆಗಳ ಪಕ್ಷಾಂತರ ನಿಷೇಧ ಕಾಯ್ದೆ’ಯಡಿ ಫೆಬ್ರವರಿ ೨೬ರಂದು ಇವರ ಸದಸ್ಯತ್ವವನ್ನು ರದ್ದುಗೊಳಿಸಿ ತೀರ್ಪು ನೀಡಿದೆ.
ಕುತೂಹಲ ಕೆರಳಿಸಿದ ಉಪಾಧ್ಯಕ್ಷ ಸ್ಥಾನದ ಭವಿಷ್ಯ:
ವಜಾಗೊಂಡವರ ಪಟ್ಟಿಯಲ್ಲಿ ಹಾಲಿ ಉಪಾಧ್ಯಕ್ಷೆ ತಾಜುನ್ನಿಸಾ ಮಹಬೂಬ್ ಪಾಷಾ ಅವರ ಹೆಸರೂ ಇರುವುದರಿಂದ, ಅವರ ಉಪಾಧ್ಯಕ್ಷ ಸ್ಥಾನ ಈಗ ಸಂಕಷ್ಟಕ್ಕೀಡಾಗಿದೆ. ಸದಸ್ಯತ್ವವೇ ರದ್ದಾಗಿರುವುದರಿಂದ ಅವರು ಅಧಿಕಾರದಲ್ಲಿ ಮುಂದುವರಿಯುವುದು ಅನುಮಾನ ಎನ್ನಲಾಗುತ್ತಿದೆ.
ಹೈಕೋರ್ಟ್ ಮೆಟ್ಟಿಲೇರಲಿರುವ ಸದಸ್ಯರು:ಈ ಆದೇಶದ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಅಧ್ಯಕ್ಷೆ ರಾಜೇಶ್ವರಿ ಭಾಸ್ಕರ್, “ಜಿಲ್ಲಾಧಿಕಾರಿಗಳ ಆದೇಶ ಈಗಷ್ಟೇ ಕೈ ಸೇರಿದೆ. ನಾವು ಇದರ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುತ್ತೇವೆ. ಪ್ರಾಮಾಣಿಕ ಕಾರ್ಯಕರ್ತರಿಗೆ ನ್ಯಾಯ ಸಿಕ್ಕೇ ಸಿಗುತ್ತದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾರಾಯಣಸ್ವಾಮಿ ಆಕ್ರೋಶ:ಜೆಡಿಎಸ್ ಟೌನ್ ಅಧ್ಯಕ್ಷ ಸಿ. ನಾರಾಯಣಸ್ವಾಮಿ ಮಾತನಾಡಿ, “೨೦೨೧ರಲ್ಲಿ ಕೇವಲ ಒಂದು ಸ್ಥಾನದಲ್ಲಿದ್ದ ಪಕ್ಷವನ್ನು ನಾವು ೧೩ ಸ್ಥಾನಕ್ಕೆ ಬೆಳೆಸಿದ್ದೇವೆ. ಅಂದಿನ ಜಿಲ್ಲಾಧ್ಯಕ್ಷರಿಗೆ ವಾಸ್ತವ ತಿಳಿದಿದ್ದರೂ ಕೆಲವು ’ಬ್ಲ್ಯಾಕ್ ಮೇಲ್ ಕಾರ್ಯಕರ್ತರ ಒತ್ತಡಕ್ಕೆ ಮಣಿದು ದೂರು ನೀಡಿದ್ದರು. ಈಗ ದೂರು ನೀಡಿದವರೇ ಅಧ್ಯಕ್ಷ ಸ್ಥಾನದಲ್ಲಿ ಇಲ್ಲದಿರುವುದು ವಿಪರ್ಯಾಸ. ರೋಟರಿ ಶಾಲಾ ಮಕ್ಕಳ ಹಿತಾಸಕ್ತಿ ಬಲಿ ಕೊಟ್ಟವರ ವಿರುದ್ಧ ನಮ್ಮ ಹೋರಾಟವಿದ್ದು, ಮುಂದಿನ ದಿನಗಳಲ್ಲಿ ಜನರೇ ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ,” ಎಂದು ಕಿಡಿಕಾರಿದರು.
ಒಟ್ಟಾರೆಯಾಗಿ, ಜಿಲ್ಲಾಧಿಕಾರಿಗಳ ಈ ಆದೇಶವು ವಿಜಯಪುರ ಪುರಸಭೆಯಲ್ಲಿ ಹೊಸ ರಾಜಕೀಯ ಸಮೀಕರಣಗಳಿಗೆ ನಾಂದಿ ಹಾಡಿದ್ದು, ಕಾನೂನು ಹೋರಾಟ ಯಾವ ತಿರುವು ಪಡೆಯಲಿದೆ ಎಂಬುದು ಕುತೂಹಲಕಾರಿಯಾಗಿದೆ.



























