ಕೃಷ್ಣ ಸತ್ಸಂಗವಾಣಿ ಸಂಘದಿಂದ 6ನೇ ವಾರ್ಷಿಕ ಸತ್ಸಂಗ, ಉಪನ್ಯಾಸ ಹಾಗೂ ಸಂಗೀತ

ಬೀದರ್:ಜ.30:ಶಾಸ್ತ್ರಬದ್ಧ ವಿಹಿತ ಕರ್ಮಗಳನ್ನು ನೆರವೇರಿಸುವುದರಿಂದ ಮಾನವರಿಗೆ ಪುಣ್ಯ ಲಭಿಸುತ್ತದೆ ಎಂದು ಶ್ರೀಮತಿ ಮಂಗಲಾ ಭಾಗವತ್ ಅವರು ಹೇಳಿದರು.

ನಗರದ ಶಿವಾಜಿ ಬಡಾವಣೆಯ ರಘುನಾಥರಾವ ಪಂಚಾಳ ಅವರ ಗಂಧರ್ವ ನಿಲಯದಲ್ಲಿ ಶ್ರೀ ಕೃಷ್ಣ ಸತ್ಸಂಗವಾಣಿ, ಭಜನೆ ಹಾಗೂ ಸಾಂಸ್ಕøತಿಕ ಸೇವಾ ಸಂಘ, ಬೀದರ್ ವತಿಯಿಂದ ಆಯೋಜಿಸಲಾದ 6ನೇ ವಾರ್ಷಿಕ ಸತ್ಸಂಗ, ಉಪನ್ಯಾಸ, ಸಂಗೀತ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಅವರು ಮಾತನಾಡಿದರು. ಭಗವದ್ಗೀತೆಯ 16ನೇ ಅಧ್ಯಾಯವನ್ನು ಉಲ್ಲೇಖಿಸಿ, ಶಾಸ್ತ್ರಸಮ್ಮತ ಜೀವನ ನಡೆಸುವುದರಿಂದ ಆತ್ಮಶುದ್ಧಿ ಮತ್ತು ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಶ್ವ ಹಿಂದು ಪರಿಷತ್ ಉತ್ತರ ಕರ್ನಾಟಕ ಸಂಚಾಲಕ ರಾಮಕೃಷ್ಣ ಸಾಳೆ ಅವರು, ಹಿರಿಯರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಮೂಲಕ ಅವರ ಜೀವನ ಗುಣಮಟ್ಟವನ್ನು ಸುಧಾರಿಸಬೇಕು ಎಂದು ಸಲಹೆ ನೀಡಿದರು. ಸತ್ಸಂಗವಾಣಿ ಸಂಘವು ನಿರಂತರವಾಗಿ ಸಂಸ್ಕಾರಯುಕ್ತ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯವೆಂದು ಹೇಳಿದರು.

ಪೆÇ್ರ. ಎಸ್.ವಿ. ಕಲ್ಮಠ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾನವರಿಗೆ ಆಯುರಾರೋಗ್ಯವನ್ನು ಪರಮಾತ್ಮನು ಉತ್ತಮ ಕಾರ್ಯಗಳನ್ನು ನೆರವೇರಿಸಲು ನೀಡಿದ್ದಾನೆ. ಲೌಕಿಕ ಸುಖಕ್ಕಾಗಿ ಪಾರಮಾರ್ಥಿಕ ಸುಖವನ್ನು ಕಳೆದುಕೊಳ್ಳಬಾರದು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಪೀರಪ್ಪ ನ್ಯಾಯವಾದಿಗಳು ಮುಖ್ಯ ಅತಿಥಿಗಳಾಗಿದ್ದರು. ವೇದಿಕೆಯಲ್ಲಿ ವಿದ್ಯಾವತಿ ಲದ್ದೆ, ಚಂದ್ರಕಾಂತ ಪಂಚಾಳ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ರಘುನಾಥರಾವ ಪಂಚಾಳ ಅವರು ಪ್ರತಿ ತಿಂಗಳು ವಿಭಿನ್ನ ಮನೆಗಳಲ್ಲಿ ಸತ್ಸಂಗ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಜಗನ್ನಾಥ ವಿಶ್ವಕರ್ಮ, ಸೂರ್ಯಕಾಂತ ಹಾಗೂ ವಿಶ್ವನಾಥ ವಿಶ್ವಕರ್ಮ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಚಂದಯ್ಯ ಹಿರೇಮಠ ಕಾರ್ಯಕ್ರಮ ಸಂಯೋಜನೆ ಮಾಡಿದರು. ಬಲರಾಮ ಪಂಚಾಳ ಸ್ವಾಗತಿಸಿದರು, ಪ್ರಾಣೇಶ್ ವಂದಿಸಿದರು ಹಾಗೂ ಧನರಾಜ ಅಣಕಲೆ ನಿರೂಪಿಸಿದರು.

ಸತ್ಸಂಗ ಕಾರ್ಯಕ್ರಮದಲ್ಲಿ ಮಹಿಳೆಯರು, ಮಕ್ಕಳು, ಗಣ್ಯರು ಹಾಗೂ ನೂರಾರು ಭಕ್ತರು ಭಾಗವಹಿಸಿದ್ದರು. ಕಾರ್ಯಕ್ರಮದ ಅಂತ್ಯದಲ್ಲಿ ಎಲ್ಲರಿಗೂ ಪ್ರಸಾದ ವಿತರಿಸಲಾಯಿತು.