
ಬೆಂಗಳೂರು,ಮಾ.೬-ಧನಶೀಲ ಮನಶೀಲ ತನುಶೀಲ, ಸರ್ವಮಯ ದೃಕ್ಕಿಂಗೆ ಕಾಂಬುದೆಲ್ಲವು ಶೀಲ, ಇಂತೀ ವ್ರತಸಂಪದವೆಲ್ಲವೂ, ಅದಾರ ಕುರಿತು ಮಾಡುವ ನೇಮ ಎಂಬುದ ತಾನರಿಯಬೇಕು’ ಎನ್ನುವ ವಚನಕಾರ್ತಿ ಅಕ್ಕಮ್ಮನವರ ವಚನವನ್ನು ಉಲ್ಲೇಖಿಸಿ ಬಜೆಟ್ ನಲ್ಲಿ ಉಲ್ಲೇಖಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ೧೮೪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢ ಶಾಲೆಗಳನ್ನಾಗಿ ಹಾಗೂ ೫೦ ಪ್ರೌಢ ಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸಲಾಗುವುದು ಎಂದು ತಿಳಿಸಿದ್ದಾರೆ.
ಹೆಚ್ಚಿನ ಬೇಡಿಕೆ ಇರುವ ಜಿಲ್ಲೆಗಳಲ್ಲಿ ನೂರೈವತ್ತು ಸಂಖ್ಯಾಬಲದ ೨೫ ಹೊಸ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಪ್ರಾರಂಭಿಸಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ೨೫ ವಿದ್ಯಾರ್ಥಿ ನಿಲಯಗಳಲ್ಲಿ ೫೦ ವಿದ್ಯಾರ್ಥಿಗಳ ಸಂಖ್ಯಾಬಲವನ್ನು ಹೆಚ್ಚಿಸಲಾಗುವುದು ಎಂದು ಹೇಳಿದರು.
೨೦೨೫-೨೬ನೇ ಸಾಲಿನಲ್ಲಿ ೧೧೭ ಮೌಲಾನಾ ಆಜಾದ್ ಮಾದರಿ ಶಾಲೆಗಳು ಮತ್ತು ಉರ್ದು ಶಾಲೆಗಳನ್ನು ಕೆಪಿಎಸ್ ಮಾದರಿಯಲ್ಲಿ ೬೦೦ ಕೋಟಿ ರೂ ವೆಚ್ಚದಲ್ಲಿ ಉನ್ನತೀಕರಿಸಿ ಅಲ್ಪಸಂಖ್ಯಾತರ ವಸತಿ ಶಾಲೆಗಳಿಗೆ ಹೆಚ್ಚಿನ ಬೇಡಿಕೆ ಇರುವ ಕಾರಣ ಸಂತ ಶಿಶುನಾಳ ಶರೀಫರವರ ಹೆಸರಿನಲ್ಲಿ ೧೦ ಹೊಸ ವಸತಿ ಶಾಲೆಗಳನ್ನು ಸಿಬಿಎಸ್ ಸಿ ಪಠ್ಯಕ್ರಮದಡಿಯಲ್ಲಿ ಪ್ರಾರಂಭಿಸಲಾಗುವುದು ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ ೧೦ ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದು ಹೇಳಿದರು.
ಪ್ರಸಕ್ತ ಸಾಲಿನಲ್ಲಿ ಇನ್ನೂ ೧೦೦ ಶಾಲೆಗಳನ್ನು ೪೦೦ ಕೋಟಿ ರೂ.ಗಳ ವೆಚ್ಚದಲ್ಲಿ ಇದೇ ಮಾದರಿಯಲ್ಲಿ ಉನ್ನತೀಕರಿಸಲಾಗುವುದು. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪೈಕಿ ೨೫ ವಸತಿ ಶಾಲೆಗಳಲ್ಲಿ ಪಿ.ಯು.ಸಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳನ್ನು ಪ್ರಾರಂಭಿಸಲಾಗುವುದು.
೧೮ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಗಳಲ್ಲಿ ವಾಣಿಜ್ಯ ವಿಭಾಗವನ್ನು ಪ್ರಾರಂಭಿಸಲಾಗುವುದು. ಅಲ್ಪಸಂಖ್ಯಾತರ ವಸತಿ ಶಾಲೆಗಳಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರವೇಶ ಪರೀಕ್ಷೆಯ ಮೂಲಕ ಆಯ್ಕೆ ಮಾಡಿ, ಅವರಿಗೆ ಕೆಸೆಟ್ ಜೆಇಇ ನೀಟ್ ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿ ನೀಡಲು ನಾಲ್ಕು ವಸತಿ ಶಾಲೆಗಳನ್ನು ಸೆಂಟರ್ ಆಫ್ ಎಕ್ಸಲೆನ್ಸ್ ಗಳನ್ನಾಗಿ ಸ್ಥಾಪಿಸಲಾಗುವುದು. ಅಲ್ಲದೇ ೨೦ ವಸತಿ ಶಾಲೆಗಳಲ್ಲಿನ ಮಕ್ಕಳಿಗೆ ಸಿಇಟಿನ ಜೆಇಇ ನೀಟ್ ವಿಶೇಷ ತರಬೇತಿ ನೀಡಲಾಗುವುದು.
ಎಲ್ಲಾ ಸಮುದಾಯಗಳ ವಿದ್ಯಾರ್ಥಿಗಳಿಗೆ ನಿರಂತರ ಕಲಿಕಾ ಅವಕಾಶಗಳನ್ನು ಒದಗಿಸಲು ಮತ್ತು ಜ್ಞಾನವನ್ನು ವೃದ್ಧಿಸಲು ಆಯ್ದ ವಕ್ಫ್ ಆಸ್ತಿಗಳಲ್ಲಿ ಕಲಿಕಾ ಕೇಂದ್ರ ಹಾಗೂ ನಾಗರಿಕ ಸೇವಾ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು. ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯಗಳಿಗೆ ಹೆಚ್ಚಿನ ಬೇಡಿಕೆ ಇರುವ ಕಾರಣ ಬೆಂಗಳೂರಿನಲ್ಲಿ ೧೦೦ ಸಂಖ್ಯಾಬಲದ ಉದ್ಯೋಗಸ್ಥ ಮಹಿಳೆಯರ ನಾಲ್ಕು ವಸತಿನಿಲಯಗಳನ್ನು ಪ್ರಾರಂಭಿಸಲಾಗುವುದು. ಜೈನ, ಬೌದ್ಧ ಮತ್ತು ಸಿಖ್ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ ೧೦೦ ಕೋಟಿ ರೂ. ಅನುದಾನವನ್ನು ಮೀಸಲಿರಿಸಲಾಗಿದೆ ಬೌದ್ಧ ಧರ್ಮದ ಧಮ್ಮಾಚಾರಿಗಳಿಗೆ ೬ ಸಾವಿರ ರೂ.ಗಳ ಮಾಸಿಕ ಗೌರವಧನವನ್ನು ನೀಡಲಾಗುವುದು.
ಅಲ್ಪಸಂಖ್ಯಾತ ಸಮುದಾಯದ ನಿರ್ಗತಿಕ ಜನರಿಗೆ ೧೦೦ ಸಂಖ್ಯಾಬಲದ ಎರಡು ಮಹಿಳಾ ವೃದ್ಧಾಶ್ರಮಗಳನ್ನು ಪ್ರಾರಂಭಿಸುವುದಕ್ಕೆ ನೆರವು ನೀಡಲಾಗುವುದು. ಅಲ್ಪಸಂಖ್ಯಾತರ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ತಾಂತ್ರಿಕ ಹಾಗೂ ಉನ್ನತ ಮಟ್ಟದ ಡಿಜಿಟಲ್ ಶಿಕ್ಷಣವನ್ನು ಪ್ರೋತ್ಸಾಹಿಸಲು ೫,೦೦೦ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಖರೀದಿಗಾಗಿ ತಲಾ ೫೦,೦೦೦ ರೂ.ಗಳನ್ನು ನೀಡಲಾಗುವುದು. ಅಲ್ಪಸಂಖ್ಯಾತ ಸಮುದಾಯದ ನಿರುದ್ಯೋಗಿ ಯುವಕ/ ಯುವತಿಯರಿಗೆ ಫಾಸ್ಟ್ ಫುಡ್ ಟ್ರಕ್ ಟ್ರೈಲರ್/ ಮೊಬೈಲ್ ಕಿಚನ್ ಫುಡ್ ಕಿಯೋಸ್ಕ್ ಸೌಲಭ್ಯಗಳನ್ನು ನಿಗಮಗಳ ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯಡಿ ಘಟಕ ವೆಚ್ಚದ ಶೇ.೭೫ ರಷ್ಟು ಅಥವಾ ಗರಿಷ್ಠ ಮೂರು ಲಕ್ಷ ರೂ.ಗಳ ಸಹಾಯಧನ ನೀಡಲಾಗುವುದು.
ಹಿರಿಯ ನಾಗರೀಕರಿಗೆ ಆರೋಗ್ಯ ಮತ್ತು ಆರೈಕೆ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರೈಸ್ತ ಸಂಸ್ಥೆಗಳು ನಡೆಸುವ ೧೦ ವೃದ್ಧಾಶ್ರಮಗಳಲ್ಲಿ ಸಮಗ್ರ ಜೆರಿಯಾಟ್ರಿಕ್ ಪ್ಯಾಲಿಯೇಟಿವ್ ಕೇರ್ ಘಟಕಗಳನ್ನು ಸ್ಥಾಪಿಸಲು ತಲಾ ೫೦ ಲಕ್ಷ ರೂ.ಗಳಂತೆ ಒಟ್ಟಾರೆ ಐದು ಕೋಟಿ ರೂ. ಒದಗಿಸಲಾಗುವುದು. ಸಂವಿಧಾನ ಶಿಲ್ಪಿ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಇತರೆ ಸಮಾಜ ಸುಧಾರಕರ ಪುಸ್ತಕಗಳನ್ನು ಉರ್ದು ಭಾಷೆಯಲ್ಲಿ ಅನುವಾದಿಸಲಾಗುವುದು. ಹಜ್ ಯಾತ್ರಿಕರು ಹಾಗೂ ಅವರ ಸಂಬಂಧಿಕರಿಗೆ ಅಗತ್ಯ ಸೌಲಭ್ಯ ಮತ್ತು ಸೌಕರ್ಯಗಳನ್ನು ಒದಗಿಸಲು ಹುಬ್ಬಳ್ಳಿ ಮತ್ತು ಕಲಬುರಗಿಯಲ್ಲಿ ಹಜ್ ಭವನಗಳನ್ನು ನಿರ್ಮಾಣ ಮಾಡಲಾಗುವುದು. ವಕ್ಫ್ ಸಂಸ್ಥೆಗಳಲ್ಲಿನ ೩೧ ಮಹಿಳಾ ಪಿ.ಯು ಕಾಲೇಜುಗಳನ್ನು ಪದವಿ ಕಾಲೇಜುಗಳನ್ನಾಗಿ ಉನ್ನತೀಕರಿಸಲಾಗುವುದು. ಮುಂದುವರೆದು, ಸವಣೂರಿನಲ್ಲಿ ಒಂದು ಹೊಸ ಮಹಿಳಾ ಪಿಯು ಕಾಲೇಜನ್ನು ಪ್ರಾರಂಭಿಸಲಾಗುವುದು. ಎಂದು ವಿವರಿಸಿದರು























