ಡಿಸಿಸಿ ಬ್ಯಾಂಕಿನಲ್ಲಿ ೫೦೦ ಕಡತ ನಾಪತ್ತೆ ; ಮಂಜುನಾಥ್ ಆರೋಪ

ಕೋಲಾರ,ನ,೨೧- ಡಿಸಿಸಿ ಬ್ಯಾಂಕಿನಲ್ಲಿ ಸಾಲ ವಿತರಿಸಿದ ೫೦೦ ಕಡತಗಳೇ ನಾಪತ್ತೆಯಾಗಿದೆ, ರೈತರು,ಬಡ ಮಹಿಳೆಯರ ಹೆಸರಿನಲ್ಲಿ ಯಾರೇ ಹಣ ನುಂಗಿದವರಿಗೆ ಬರಬಾರದ ರೋಗ ಬರಲಿ,ಬ್ಯಾಂಕನ್ನು ಸರಿಪಡಿಸುವ ಪ್ರಯತ್ನ ನಾನು ಪ್ರಾಮಾಣಿಕವಾಗಿ ಮಾಡುವೆ ಎಂದು ಶಾಸಕ ಕೊತ್ತುರು ಮಂಜುನಾಥ್ ತಿಳಿಸಿದರು.


ನಗರದ ಪತ್ರಕರ್ತರ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ, ಡಿಸಿಸಿ ಬ್ಯಾಂಕ್,ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘ, ಸಹಕಾರ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ೭೨ನೇ ಅಖಿಲಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.


ರೈತರು,ತಾಯಂದಿರಿಗೆ ಮೋಸ ಮಾಡಿದವರಿಗೆ ಒಳ್ಳೆಯದಾಗುವುದಿಲ್ಲ, ಬ್ಯಾಂಕ್ ಉಳಿಸಲು ಸರ್ಕಾರದಿಂದ ೧೦ ಕೋಟಿ ಕೊಡಿಸಿದ್ದೆ, ಬ್ಯಾಂಕ್ ಚೆನ್ನಾಗಿಯೇ ನಡೆಯುತ್ತಿತ್ತು ಎಂದ ಅವರು, ಕಡತ ಕೇಳಿದರೆ ಬ್ಯಾಂಕಿನ ಸಿಬ್ಬಂದಿಯೊಬ್ಬ ರಜೆ ಮೇಲೆ ತೆರಳಿದ್ದಾನೆ ಎಂದು ಕಿಡಿಕಾರಿದರು.


ತಮ್ಮ ಬೆವರಿನಲ್ಲಿಯೇ ಸ್ನಾನ ಮಾಡಿ ಜನತೆಗೆ ಅನ್ನ ಕೊಡುವ ವ್ಯಕ್ತಿ ಯಾರಾದರೂ ಇದ್ದರೆ ಅದು ರೈತ ಮಾತ್ರ ಎಂದ ಅವರು, ಸಮಾಜದ ಪ್ರತಿಯೊಬ್ಬರಿಗೂ ಸಹಕಾರಿ ಸದಸ್ಯತ್ವ ಸಿಗಬೇಕು, ಈ ಕುರಿತು ಸಹಕಾರ ಕಾಯಿದೆಗೆ ತಿದ್ದುಪಡಿ ತರುವಂತೆ ಸರ್ಕಾರದ ಮೇಲೆ ಒತ್ತಡ ಹಾಕುವ ಕಾರ್ಯಕ್ಕೆ ತಮ್ಮ ಬೆಂಬಲವೂ ಇದೆ ಎಂದರು.
ಸಹಕಾರಿ ಸಂಸ್ಥೆಗಳಲ್ಲಿ ಬೇರೆಯವರಿಗೆ ಪ್ರವೇಶ ನೀಡದೇ ಮಾಫಿಯಾ ಮಾದರಿ ಕೆಲಸ ಮಾಡುತ್ತಿದೆ, ಇಂತಹ ಅಡ್ಡೆಗಳಿಗೆ ಕೊನೆಯಾಡಬೇಕು, ಇದು ಬದಲಾಗಬೇಕು, ಪ್ರತಿಯೊಬ್ಬರಿಗೂ ಸದಸ್ಯತ್ವ ಸಿಗುವಂತೆ ಆಗಬೇಕು, ಈ ನಿಟ್ಟಿನಲ್ಲಿ ಮುಳಬಾಗಿಲು ಟಿಎಪಿಸಿಎಂಎಸ್ ಬದಲಾವಣೆಯಾಗಲು ತಾವು ಪಟ್ಟ ಪ್ರಯತ್ನದ ಕುರಿತು ಮಾಹಿತಿ ನೀಡಿದರು.


ಕೋಲಾರ ವಿಧಾನಸಭಾ ಕ್ಷೇತ್ರದ ಅಭಿವೃದ್ದಿಗೆ ನನ್ನ ಅವಧಿಯಲ್ಲಿ ೧೬೦೦ ಕೋಟಿ ತಂದಿರುವೆ, ಸಾವಿರ ಕೋಟಿ ಕೆಲಸ ಪ್ರಗತಿಯಲ್ಲಿದೆ, ೬೦೦ ಕೋಟಿ ಕೆಲಸಕ್ಕೆ ಟೆಂಡರ್ ಆಗಬೇಕಾಗಿದೆ ಎಂದು ತಿಳಿಸಿದರು.


ವಿಧಾನಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಡಿಸಿಸಿ ಬ್ಯಾಂಕ್ ೪೦೦ ಮಹಿಳಾ ಸಂಘಗಳಿಗೆ ಸಾಲ ನೀಡಲಾಗಿದೆ ಎಂದು ಹೇಳುತ್ತಾರೆ ಆದರೆ ೩೦೦ ಸಂಘಗಳು ದಾಖಲೆಗಳೇ ಇಲ್ಲ, ಸಾಲ ವಸೂಲಿಯೇ ಆಗಿಲ್ಲ ಎಂದು ಕಿಡಿಕಾರಿದರು.


ಸಹಕಾರಿ ಸಂಸ್ಥೆಗಳಲ್ಲಿ ಮೀಸಲಾತಿ ನೀಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಿತಿ ರಚಿಸಿದ್ದು, ವರದಿ ಪಡೆದುಕೊಂಡಿದ್ದಾರೆ, ಅದಷ್ಟು ಶೀಘ್ರ ಕಾಯಿದೆ ಜಾರಿಗೆ ಬರಲಿದೆ ಎಂದು ತಿಳಿಸಿದರು.


ರಾಜಕೀಯ, ಸಹಕಾರ ಒಂದೇ ನಾಣ್ಯದ ಎರಡು ಮುಖಗಳು, ಸ್ವಾರ್ಥದಿಂದಾಗಿ ಕಳೆದ ೩ ವರ್ಷಗಳಿಂದ ಜಿಲ್ಲೆಯ ರೈತರು,ಮಹಿಳೆಯರಿಗೆ ಸಾಲ ಸಿಗುತ್ತಿಲ್ಲ, ಇದನ್ನು ಸರಿಪಡಿಸುವ ಪ್ರಯತ್ನವಾಗಲಿ,ವೈಯುಕ್ತಿಕ ಮುನಿಸುಗಳಿಗೆ ಡಿಸಿಸಿ ಬ್ಯಾಂಕ್ ಬಲಿಯಾಗದಿರಲಿ ಎಂದರು.


ಕೋಚಿಮುಲ್ ನಿರ್ದೇಶಕ ಚೆಂಜಿಮಲೆ ರಮೇಶ್ ಮಾತನಾಡಿ ಎಂಪಿಸಿಎಸ್‌ಗಳಲ್ಲಿ ಡಿಜಟಲೀಕರಣಕ್ಕೆ ಒತ್ತು ನೀಡಲಾಗಿದೆ, ರೈತರು ಹಾಕುವ ಹಾಲಿನ ಗುಣಮಟ್ಟಕ್ಕೆ ತಕ್ಕಂತೆ ಹಣ ಪಾವತಿಯಾಗುತ್ತಿದೆ ಎಂದರು.


ಪತ್ರಕರ್ತರ ಸಹಕಾರ ಸಂಘದ ಉಪಾಧ್ಯಕ್ಷ ಅಬ್ಬಣಿ ಶಂಕರ್ ಮಾತನಾಡಿ ಕೆಲವರ ಸ್ವಾರ್ಥಕ್ಕೆ ಸಹಕಾರ ರಂಗ ಬಲಿಕೊಡದಿರಿ, ಸಹಕಾರ ಸೋತಿದೆ, ಅನುದಾನವಿದ್ದರೂ ಅನುಷ್ಟಾನದ ಕೊರತೆ ಇದೆ, ಈಗಾಗಲೇ ಕೇಂದ್ರ ಸಚಿವ ಅಮಿತ್ ಷಾ ಸಹಕಾರ ಸಂಸ್ಥೆಗಳ ಗಣಕೀಕರಣಕ್ಕೆ ಒತ್ತು ನೀಡಿದ್ದಾರೆ, ಇಂತಹ ಕಾರ್ಯಕ್ರಮಕ್ಕೆ ಸಂಸದರನ್ನು ಕರೆಯಬೇಕಾಗಿತ್ತು ಎಂದರು.