
ನವದೆಹಲಿ,ನ.೨೬- ದೇಶದ ಎಲ್ಲಾ ವಿಚಾರಣಾ ನ್ಯಾಯಾಲಯಗಳು, ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ಗಳಲ್ಲಿ ಒಟ್ಟಾರೆಯಾಗಿ ೫.೪ ಕೋಟಿ ಪ್ರಕರಣಗಳು ಬಾಕಿ ಇವೆ ಎಂದು ಸುಪ್ರೀಂಕೋರ್ಟ್‌ನ ನೂತನ ಮುಖ್ಯನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದ್ದಾರೆ.
“ನ್ಯಾಯಾಂಗದ ಎಲ್ಲಾ ಹಂತಗಳಲ್ಲಿ ಬಾಕಿ ಇರುವ ಪ್ರಕರಣಗಳ ಸವಾಲನ್ನು ಎದುರಿಸಲು ವೈಜ್ಞಾನಿಕ ಮತ್ತು ಸಮಗ್ರ ವಿಧಾನ ಅತ್ಯಗತ್ಯ” ಎಂದು ತಿಳಿಸಿದ್ದಾರೆ.
ಮುಖ್ಯನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ಬಳಿಕ ಪ್ರತಿಕ್ರಿಯೆ ನೀಡಿದ ಅವರು ವಿಚಾರಣಾ ನ್ಯಾಯಾಲಯಗಳಲ್ಲಿ ೪.೮ ಕೋಟಿ ಪ್ರಕರಣಗಳು, ಹೈಕೋರ್ಟ್‌ಗಳಲ್ಲಿ ೬೩.೮ ಲಕ್ಷ ಪ್ರಕರಣಗಳು ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ೯೦,೦೦೦ ಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಉಳಿದಿವೆ ಎಂದಿದ್ದಾರೆ.
ನಾಗರಿಕರ ಕುಂದುಕೊರತೆಗಳನ್ನು ತ್ವರಿತವಾಗಿ ಪರಿಹರಿಸುವ ಆರೋಗ್ಯಕರ ಮೂರು ಹಂತದ ನ್ಯಾಯಾಂಗಕ್ಕಾಗಿ ಕೆಲಸ ಮಾಡುವುದು ಅಗತ್ಯವಾಗಿದೆ. ನ್ಯಾಯಾಂಗ ವ್ಯವಸ್ಥೆಯು ಸಮಗ್ರವಾಗಿ ಕಾರ್ಯನಿರ್ವಹಿಸುತ್ತದೆ, ಪ್ರತಿಯೊಂದು ಹಂ ನಿರ್ಣಾಯಕ ಉದ್ದೇಶ ಪೂರೈಸುತ್ತದೆ. ಪ್ರಜಾಪ್ರಭುತ್ವದ ಪರಿಣಾಮಕಾರಿತ್ವ ನ್ಯಾಯಾಂಗದ ಎಲ್ಲಾ ಮೂರು ಹಂತಗಳನ್ನು ಒಳಗೊಂಡಿದೆ ಎಂದಿದ್ದಾರೆ.
ಮಹಿಳಾ ಪ್ರಾತಿನಿಧ್ಯ ಮತ್ತು ಸುಪ್ರೀಂಕೋರ್ಟ್ ನ್ಯಾಯಾಧೀಶರಲ್ಲಿ ಪ್ರಾದೇಶಿಕ ಪ್ರಾತಿನಿಧ್ಯ ಖಚಿತಪಡಿಸಿಕೊಳ್ಳಲು ತಮ್ಮ ಪ್ರಯತ್ನಗಳ ಬಗ್ಗೆ ಹಾಗೂ ಸರ್ಕಾರದಿಂದ ನೇಮಕಾತಿ ಮತ್ತು ವರ್ಗಾವಣೆಗಳಿಗೆ ಕೊಲಿಜಿಯಂ ಶಿಫಾರಸುಗಳ ಆಯ್ದ ಅನುಷ್ಠಾನದ ವಿಷಯದ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ.
“ಸರ್ಕಾರ ಮತ್ತು ನ್ಯಾಯಾಂಗದ ಸಂಘಟಿತ ಪ್ರಯತ್ನದ ಅಗತ್ಯವಿದೆ. ತುರ್ತಾಗಿ ಮಾಡಬೇಕಾದ ಕೆಲಸವೆಂದರೆ – ನ್ಯಾಯಾಲಯಗಳಿಗೆ ಭೂಮಿ ಮತ್ತು ಸಂಪನ್ಮೂಲಗಳನ್ನು ಸಕಾಲಿಕವಾಗಿ ಗುರುತಿಸುವುದು, ಅಗತ್ಯ ಸೌಲಭ್ಯಗಳೊಂದಿಗೆ ಅವುಗಳನ್ನು ಸಜ್ಜುಗೊಳಿಸುವುದು ಮತ್ತು ನ್ಯಾಯಾಂಗ ಮೂಲಸೌಕರ್ಯ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವುದು” ಅಗತ್ಯವಾಗಿದೆ ಎಂದಿದ್ದಾರೆ.
ಮಧ್ಯಸ್ಥಿಕೆ ಮತ್ತು ಪರ್ಯಾಯ ವಿವಾದ ಪರಿಹಾರ ಕಾರ್ಯವಿಧಾನಗಳಿಗೆ ಒತ್ತು ನೀಡುವುದರಿಂದ ಭವಿಷ್ಯದಲ್ಲಿ ನ್ಯಾಯಾಲಯಗಳ ಮೇಲಿನ ಹೊರೆ ಕಡಿಮೆಯಾಗುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ಹೇಳಿದ್ದಾರೆ.
ನ್ಯಾಯಾಂಗದ ಕಡೆಯಿಂದ ಸುಪ್ರೀಂ ಕೋರ್ಟ್‌ನ ‘ದೊಡ್ಡಣ್ಣ’ನಾಗಿ ಕೆಲಸ ಮಾಡಲಿದೆ. ಹೈಕೋರ್ಟ್ ನ್ಯಾಯಾಧೀಶರಲ್ಲಿ ಹೆಚ್ಚುತ್ತಿರುವ ನಿರಾಶೆಯ ಭಾವನೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು “ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್ ನಡುವಿನ ಸಂಬಂಧ ಸ್ಪರ್ಧೆಯಲ್ಲ, ಸಾಂವಿಧಾನಿಕ ಪೂರಕ ಸಂಬಂಧವಾಗಿದೆ” ಎಂದು ತಿಳಿಸಿದ್ದಾರೆ.
ಆರ್ಟಿಕಲ್ ೨೨೫ ಹೈಕೋರ್ಟ್‌ಗಳ ನ್ಯಾಯವ್ಯಾಪ್ತಿ ಅಡಿಯಲ್ಲಿ ಹೈಕೋರ್ಟ್‌ನ ಅಧಿಕಾರ ಆರ್ಟಿಕಲ್ ೩೨ ಸಾಂವಿಧಾನಿಕ ಪರಿಹಾರಗಳ ಹಕ್ಕು ಅಡಿಯಲ್ಲಿ ಸುಪ್ರೀಂ ಕೋರ್ಟ್‌ನ ಅಧಿಕಾರಕ್ಕಿಂತ ಹಲವು ಅಂಶಗಳಲ್ಲಿ ವಿಶಾಲವಾಗಿದೆ. ಅನೇಕ ಸಂದರ್ಭಗಳಲ್ಲಿ, ಸುಪ್ರೀಂ ಕೋರ್ಟ್ ದಾವೆದಾರರು ತಮ್ಮ ಕುಂದುಕೊರತೆ ತಿಳಿಸಲು ಮೊದಲು ಹೈಕೋರ್ಟ್‌ಗಳನ್ನು ಸಂಪರ್ಕಿಸುವಂತೆ ಕೇಳಿಕೊಂಡಿದೆ ಎಂದಿದ್ದಾರೆ.




























