
ಬೆಂಗಳೂರು,ಜ.೨೦-ಮಾದಕ ವಸ್ತು ಮಾರಾಟ ಜಾಲದ ಪತ್ತೆಹಚ್ಚಿರುವ ಸಿಸಿಬಿ ಪೊಲೀಸರು ವಿದೇಶಿ ಪ್ರಜೆಯೊಬ್ಬನನ್ನು ಬಂಧಿಸಿ ೫.೧೫ ಕೋಟಿ ಮೌಲ್ಯದ ೨ ಕೆ.ಜಿ ೫೦೦ ಗ್ರಾಂ ಎಂಡಿಎಂಎ ಹಾಗೂ ೩೦೦ ಎಕ್ಸ್‌ಟೆಸಿ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ.
ವಿದೇಶಿ ಮೂಲದ ಮಾರುತಹಳ್ಳಿಯ ಮುನೇಕೊಳಲುವಿನ ಎರ್ ನೆಶ್ಟ್ ಉಗ(೪೫)ಬಂಧಿತ ಡ್ರಗ್ಸ್ ಪೆಡ್ಲರ್ ಆಗಿದ್ದಾನೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಿಸಿಬಿಯ ಆಂಟಿನಾರ್ಕೋಟಿಕ್ಸ್ ವಿಂಗ್ ತಂಡವು ಕಾರ್ಯಾಚರಣೆ ನಡೆಸಿ, ಮಾರತ್ತಹಳ್ಳಿಯ ಮುನೇಕೊಳಲು ಪ್ರದೇಶದಬಾಡಿಗೆ ಮನೆಯಿಂದ ವಿದೇಶಿ ಪ್ರಜೆಯನ್ನು ವಶಕ್ಕೆ ಪಡೆದು, ವಿಚಾರಣೆ ಮಾಡಲಾಗಿ, ಆತನು ವಾಸವಿರುವ ಮನೆಯಿಂದಲೇ ತನ್ನ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿರುವುದಾಗಿ ತಿಳಿಸಿರುತ್ತಾನೆ.
ಆತನ ವಶದಲ್ಲಿದ್ದ ೫.೧೫ ಕೋಟಿ ಮೌಲ್ಯದ
೨ ಕೆ.ಜಿ ೫೦೦ ಗ್ರಾಂ ಎಂಡಿಎಂಎ ಮತ್ತು ೩೦೦ ಎಕ್ಸ್‌ಟೆಸಿ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯ ವಿರುದ್ಧ ಈ ಹಿಂದೆ ಹೆಣ್ಣೂರು ಪೊಲೀಸ್ ಠಾಣೆ, ಕಾಡುಗೋಡಿ ಪೊಲೀಸ್ ಠಾಣೆಗಳಲ್ಲಿ ಮಾದಕ ವಸ್ತು ಮಾರಾಟಕ್ಕೆ ಸಂಬಂಧಿಸಿದಂತೆ ಎರಡು ಅಪರಾಧ ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದೆ.
ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾದ ಬಳಿಕ, ಆತನು ಪುನಃ ತನ್ನ ಅಕ್ರಮ ಚಟುವಟಿಕೆಗಳನ್ನು ಆರಂಭಿಸಿರುತ್ತಾನೆ. ಸಿಸಿಬಿ ಎಎನ್‌ಡಬ್ಲ್ಯೂ ಅಧಿಕಾರಿಗಳು ಅವನ ಚಲನವಲನಗಳ ಮೇಲೆ ನಿಗಾ ವಹಿಸಿ, ಮತ್ತೆ ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದಾಗ ಬಂಧಿಸಿದ್ದಾರೆ.
ಈ ಸಂಬಂಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಮಾದಕ ವಸ್ತುಗಳ ಮೂಲ ಪತ್ತೆ, ಹಿಂದಿನ ಹಾಗೂ ಮುಂದಿನ ಸಂಪರ್ಕ ಕೊಂಡಿಗಳನ್ನು ಗುರುತಿಸುವುದು ಮತ್ತು ಜಾಲದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳನ್ನು ಪತ್ತೆಹಚ್ಚುವ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಹೇಳಿದರು.
ಮಾದಕ ವಸ್ತು ಸಾಗಣೆ ಮತ್ತು ಮಾರಾಟದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ಹಾಗೂ ನಾಗರಿಕರ ಸುರಕ್ಷತೆ ಮತ್ತು ಕಲ್ಯಾಣವನ್ನು ಕಾಪಾಡುವಲ್ಲಿ ಬೆಂಗಳೂರು ನಗರ ಪೊಲೀಸ್ ಇಲಾಖೆ ತನ್ನ ದೃಢ ಬದ್ಧತೆಯನ್ನು ಪುನರುಚ್ಚರಿಸಿದೆ.
ಈ ಪ್ರಕರಣವನ್ನು ಎಸಿಪಿ ಮಹಾನಂದ ಇನ್‌ಪೆಕ್ಟರ್ ಶಿವರಾಜ್ ಮತ್ತು ಸಿಬ್ಬಂದಿಗಳ ನೇತೃತ್ವದ ತನಿಖಾ ತಂಡವು ಯಶಸ್ವಿಯಾಗಿ ಬೇಧಿಸಿದೆ ಎಂದು ತಿಳಿಸಿದರು.



























