
ಬೀದರ್: ನ.27: ಈ ತಿಂಗಳ 29 ಹಾಗೂ 30ರಂದು ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ 46ನೇ ಶರಣ ಕಮ್ಮಟ ಅನುಭವ ಮಂಟಪ ಉತ್ಸವ ಜರುಗಲಿದೆ ಎಂದು ರಾಜ್ಯದ ಅರಣ್ಯ, ಪರಿಸರ ಹಾಗೂ ಜೀವಶಾಸ್ತ್ರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಈಶ್ವರ ಖಂಡ್ರೆ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ವಿಶ್ವ ಬಸವಧರ್ಮ ಅನುಭವ ಮಂಟಪ ಟ್ರಸ್ಟ್ನಿಂದ ಬಸವಕಲ್ಯಾಣದ ಅನುಭವ ಮಂಟಪ ಪರಿಸರದಲ್ಲಿ ಹಮ್ಮಿಕೊಂಡಿರುವ ಈ ಉತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಾಡಿನ ವಿವಿಧ ಮಠಾಶರು, ಜನಪ್ರತಿನಿಗಳು, ಸಾಹಿತಿಗಳು, ಚಿಂತಕರು, ಗಣ್ಯರು ಸೇರಿ ಅಪಾರ ಬಸವಭಕ್ತರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಎಂದರು.
ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ದಿವ್ಯ ಸಾನ್ನಿಧ್ಯದಲ್ಲಿ ಎರಡು ದಿನದ ಉತ್ಸವಕ್ಕಾಗಿ ಅನುಭವ ಮಂಟಪ ಹತ್ತಿರದ ವಿಶಾಲ ಮೈದಾನದಲ್ಲಿ ಬೃಹತ್ ಪೆಂಡಾಲ ಹಾಕುತ್ತಿದ್ದು, ಭವ್ಯ ವೇದಿಕೆ ತಲೆ ಎತ್ತುತ್ತಿದೆ. ಕಾರ್ಯಕ್ರಮದ ಉದ್ಘಾಟನೆ, ಸಮಾರೋಪ ಸೇರಿ ಮಹತ್ವದ ಗೋಷ್ಠಿ, ಚಿಂತನ-ಮಂಥನ, ಸಾಮೂಹಿಕ ಇಷ್ಟಲಿಂಗ ಪೂಜೆ, ಸಾಧಕರಿಗೆ ಪ್ರಶಸ್ತಿ ಪ್ರದಾನ, ಗ್ರಂಥ ಬಿಡುಗಡೆ ಇತರ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು.
ಬಸವಣ್ಣನವರ ತತ್ವ, ವಿಚಾರಗಳು ವಿಶ್ವವ್ಯಾಪಿ ಆಗಬೇಕು. ಮಾನವ ಕಲ್ಯಾಣಕ್ಕೆ ಆಧಾರವಾಗಿರುವ ವಚನ ಸಾಹಿತ್ಯ ಜಾಗತಿಕವಾಗಿ ಎಲ್ಲರಿಗೂ ಗೊತ್ತಾಗಲಿ ಎಂಬ ಸದಾಶಯದಿಂದ 46 ವರ್ಷಗಳಿಂದ ಅನುಭವ ಮಂಟಪ ಉತ್ಸವ, ಶರಣ ಕಮ್ಮಟವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಕರ್ನಾಟಕ ಅಲ್ಲದೆ ನೆರೆಯ ಮಹಾರಾಷ್ಟ್ರ, ತೆಲಂಗಾಣ ಸೇರಿ ನಾನಾ ಕಡೆಗಳಿಂದ ಸಹಸ್ರಾರು ಬಸವ ಭಕ್ತರು ಉತ್ಸವಕ್ಕೆ ಆಗಮಿಸಲಿದ್ದಾರೆ. ಎಲ್ಲರಿಗೂ ಊಟ, ವಸತಿ ಸೇರಿ ಅಗತ್ಯ ವ್ಯವಸ್ಥೆ ಮಾಡಿದ್ದು, ಇದಕ್ಕಾಗಿ ವಿವಿಧ ಸಮಿತಿಗಳು ಸಕ್ರಿಯ ಕೆಲಸ ಮಾಡುತ್ತಿವೆ ಎಂದರು.
ನ.29ರಂದು ಬೆಳಗ್ಗೆ 9.30ಕ್ಕೆ ಗುರುಬಸವ ಪೂಜೆ, ವಚನ ಪಠಣ ಹಾಗೂ ಷಟಸ್ಥಲ ಧ್ವಜಾರೋಹಣ ಕಾರ್ಯಕ್ರಮ ಜರುಗಲಿದೆ. ಬೆಳಗ್ಗೆ 11ರಂದು ಉತ್ಸವವನ್ನು ಆಂಧ್ರಪ್ರದೇಶ ರಾಜ್ಯಪಾಲ ಎಸ್. ಅಬ್ದುಲ್ ನಜೀರ್ ಉದ್ಘಾಟಿಸುವರು. ಪೂಜ್ಯ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಆದಿಚುಂಚನಗಿರಿ, ಡಾ.ಚನ್ನವೀರ ಶಿವಾಚಾರ್ಯರು ಹಾರಕೂಡ, ಡಾ.ಶಿವಾನಂದ ಸ್ವಾಮೀಜಿ ಹುಲಸೂರು, ಪೂಜ್ಯ ಡಾ.ಗಂಗಾಂಬಿಕೆ ಅಕ್ಕ ಸಾನ್ನಿಧ್ಯ ವಹಿಸುವರು. ಕೇಂದ್ರ ಸಚಿವ ವಿ.ಸೋಮಣ್ಣ ಗ್ರಂಥ ಲೋಕಾರ್ಪಣೆ ಮಾಡುವರು. ಪೌರಾಡಳಿತ ಸಚಿವ ರಹೀಮ್ ಖಾನ್, ಸಂಸದ ಸಾಗರ್ ಖಂಡ್ರೆ, ಶಾಸಕರಾದ ಶರಣು ಸಲಗರ, ಸಂಜಯ ಬನಸೋಡೆ, ಪಿ.ಸಂಜೀವರಡ್ಡಿ ಇತರರು ಪಾಲ್ಗೊಳ್ಳುವರು. ಕಾರ್ಯಕ್ರಮದಲ್ಲಿ ವಿವಿಧ ಪ್ರಶಸ್ತಿ ಪ್ರದಾನ ನಡೆಯಲಿದೆ. ಮಧ್ಯಾಹ್ನ 3ಕ್ಕೆ ಜಾಗತಿಕ ನೆಲೆಯಲ್ಲಿ ಬಸವ ತತ್ವದ ಪ್ರಸ್ತುತತೆ ಗೋಷ್ಠಿ, ಸಂಜೆ ಶಿವಯೋಗಿ ಸಿದ್ದರಾಮೇಶ್ವರ ನಾಟಕ ಪ್ರದರ್ಶನ ಇದೆ ಎಂದು ತಿಳಿಸಿದರು.
ನ.30ರಂದು ಬೆಳಗ್ಗೆ 6ಕ್ಕೆ ನಗೆಯೋಗ ಕೂಟ, ಬೆಳಗ್ಗೆ 7.30ಕ್ಕೆ ಸಾಮೂಹಿಕ ಇಷ್ಟಲಿಂಗ ಪೂಜಾ, ಬೆಳಗ್ಗೆ 10ಕ್ಕೆ ಲಿಂಗಾಯತ ಹೋರಾಟ ಮತ್ತು ರಾಷ್ಟ್ರೀಯತೆ ಗೋಷ್ಠಿ ಇದೆ. ಮಧ್ಯಾಹ್ನ 1ಕ್ಕೆ ಸಮಾರೋಪ ಸಮಾರಂಭ ಜರುಗಲಿದೆ. ಗುರುಬಸವ ಪಟ್ಟದ್ದೇವರು ಸಾನ್ನಿಧ್ಯ, ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ ಅಧ್ಯಕ್ಷತೆ ವಹಿಸುವರು. ಶಾಸಕರಾದ ಪ್ರಭು ಚವ್ಹಾಣ್, ಡಾ.ಶೈಲೇಂದ್ರ ಬೆಲ್ದಾಳೆ, ಡಾ.ಸಿದ್ದಲಿಂಗಪ್ಪ ಪಾಟೀಲ್, ಮಾಜಿ ಸಚಿವ ರಾಜಶೇಖರ ಪಾಟೀಲ್, ತೆಲಂಗಾಣ ಮಾಜಿ ಸಂಸದ ಸುರೇಶ ಶೆಟಕಾರ, ವಿಧಾನ ಪರಿಷತ್ ಸದಸ್ಯರಾದ ಎಂ.ಜಿ. ಮೂಳೆ, ತಿಪ್ಪಣ್ಣ ಕಮಕನೂರು, ಡಾ.ಚಂದ್ರಶೇಖರ ಪಾಟೀಲ್, ಮಾಜಿ ವಿಧಾನ ಪರಿಷತ್ ಸದಸ್ಯರಾದÀ ವಿಜಯಸಿಂಗ್, ಮಾಜಿ ಶಾಸಕ ಪ್ರಕಾಶ ಖಂಡ್ರೆ, ಮಲ್ಲಿಕಾಜರ್ ಖೂಬಾ, ಮೀನುಗಾರಿಕೆ ನಿಗಮದ ಅಧ್ಯಕ್ಷೆ ಮಾಲಾ ನಾರಾ ನಾರಾಯಣರಾವ, ಪ್ರಮುಖರಾದ ಗುರುನಾಥ ಕೊಳ್ಳುರ್, ಎಸ್.ದಿವಾಕರ, ಬಾಬು ವಾಲಿ ಇತರರು ಭಾಗವಹಿಸುವರು ಎಂದು ಹೇಳಿದರು.
ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಪ್ರತಿ ವರ್ಷ ಈ ಶರಣ ಕಮ್ಮಟ ಅನುಭವ ಮಂಟಪ ಉತ್ಸವ ವ್ಯಾಪಕವಾಗಿ ಬೆಳೆಯುತ್ತಿದ್ದು, ಮುಂದೊಂದು ದಿನ ಇದು ರಾಷ್ಟ್ರ ಮಟ್ಟದ ಕಾರ್ಯಕ್ರಮವಾಗಿ ಹೊರಹೊಮ್ಮಲಿದೆ. ನಿತ್ಯ ಸಾಮೂಹಿಕ ಯೋಗಾಭ್ಯಾಸ, ಸಾಮೂಹಿಕ ವಚನ ಪಾರಾಯಣ, ಪರಿಸರ ಜಾಗೃತಿಗಾಗಿ ಸೈಕಲ್ ರ್ಯಾಲಿ ಇತ್ಯಾದಿ ವಿಭಿನ್ನ ಕಾರ್ಯಕ್ರಮಗಳು ಜರುಗಲಿವೆ. ಪ್ರಸಾದಕ್ಕಾಗಿ ಹುಮನಾಬಾದ್‍ದಿಂದ ಈಗಾಗಲೆ 50 ಸಾವಿರ ಶೆಂಗಾ ಹೋಳಿಗೆ ಬಂದಿವೆ. ಶೆಂಗಾ ಚಟ್ನಿ, ಇತ್ಯಾದಿ ತಿನಿಸು ಪದಾರ್ಥಗಳು ತಲುಪಿವೆ ಎಂದವರು ತಿಳಿಸಿದರು.
ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಪೂಜ್ಯ ಗುರುಬಸವ ಪಟ್ಟದೇವರು, ಭಾರತೀಯ ಬಸವ ಬಳಗದ ರಾಜ್ಯಾಧ್ಯಕ್ಷ ಬಾಬು ವಾಲಿ, ಪ್ರಮುಖರಾದ ಆನಂದ ದೇವಪ್ಪ, ಶಕುಂತಲಾ ಬೆಲ್ದಾಳೆ, ಬಸವರಾಜ ಧನ್ನೂರ, ಜಯರಾಜ ಖಂಡ್ರೆ, ಹಾವಶೆಟ್ಟಿ ಪಾಟೀಲ್, ಚಂದ್ರಶೇಖರ ಹೆಬ್ಬಾಳೆ, ಶಶಿಕಾಂತ ದುರ್ಗೆ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.
ಬಾಕ್ಸ್ ಸುದ್ದಿ
2026ರ ಅಂತ್ಯದೊಳಗೆ ಅನುಭವ ಮಂಟಪ ನೂತನ ಕಟ್ಟಡದ ಉದ್ಘಾಟನೆ: ಈಶ್ವರ್ ಖಂಡ್ರೆ
2026ರ ಅಂತ್ಯದೊಳಗೆ ನೂತನ ಅನುಭವ ಮಂಟಪದ ಕಟ್ಟಡ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೊಳ್ಲಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಇಶ್ವರ್ ಖಂಡ್ರೆ ತಿಳಿಸಿದರು.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, 742ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಭವ್ಯ ಹಾಗೂ ಈತಿಹಾಸಿಕ ಅನುಭವ ಮಂಟಪಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಮ್ಮ ಬಜೆಟ್‍ನಲ್ಲಿ ಘೋಷಿಸಿದ್ದರು. ಅದಕ್ಕೆ ಪ್ರತಿಯಾಗಿ 100 ಕೋಟಿ ನೀಡಿದ್ದರು. ನಮ್ಮ ಸರ್ಕಾರ ಬಂದ ಬಳಿಕ ಇಲ್ಲಿಯ ವರೆಗೆ 200 ಕೋಟಿ ನೀಡಿದ್ದು, ಉಳಿದ ಕಾಮಗಾರಿ ಗುಣಮಟ್ಟದಿಂದ ಪೂರ್ತಿಯಾಗಲು ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ. ಒಟ್ಟಾರೆ ಈ ಅನುಭವ ಮಂಟಪ ವಿಶ್ವದ ಒಂದು ಪಾರಂಪರಿಕ ತಾಣವಾಗಿ ನಿಲ್ಲಲಿದೆ ಎಂದು ಖಂಡ್ರೆ ಹೇಳಿದರು.



























