Home ಜಿಲ್ಲೆ 40ನೇ ಪತ್ರಕರ್ತರ ಸಮ್ಮೇಳನ: ಸಾರಿಗೆ ಸಮಿತಿ ವತಿಯಿಂದ ಲೋಗೋ ಬಿಡುಗಡೆಬರುವ ಪತ್ರಕರ್ತರಿಗೆ ಸಾರಿಗೆ ವ್ಯವಸ್ಥೆ ಅಚ್ಚುಕಟ್ಟಾಗಿರಲಿ:...

40ನೇ ಪತ್ರಕರ್ತರ ಸಮ್ಮೇಳನ: ಸಾರಿಗೆ ಸಮಿತಿ ವತಿಯಿಂದ ಲೋಗೋ ಬಿಡುಗಡೆಬರುವ ಪತ್ರಕರ್ತರಿಗೆ ಸಾರಿಗೆ ವ್ಯವಸ್ಥೆ ಅಚ್ಚುಕಟ್ಟಾಗಿರಲಿ: ಶಿವಾನಂದ ತಗಡೂರು

ಬೀದರ:ಏ.7: 40ನೇ ರಾಜ್ಯಮಟ್ಟದ ಕಾರ್ಯನಿರತ ಪತ್ರಕರ್ತರ ಸಮ್ಮೇಳನದಲ್ಲಿ ಭಾಗವಹಿಸಲು ಬೀದರ ನಗರಕ್ಕೆ ಆಗಮಿಸುವ ಪತ್ರಕರ್ತರಿಗೆ ಅನುಕೂಲವಾಗಲು ಸಾರಿಗೆ ಸಮಿತಿ ವತಿಯಿಂದ ಲೋಗೋ ಬಿಡುಗಡೆ ಮಾಡಿದ್ದು ಸಂತಸ ತಂದಿದೆ. ಇದೊಂದು ವಿನೂತನ ಪ್ರಯೋಗವಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಜರುಗಿದ ಸಾರಿಗೆ ಸಮಿತಿಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸುಮಾರು 20 ವರ್ಷಗಳ ನಂತರ ಬೀದರನಲ್ಲಿ ಪತ್ರಕರ್ತರ ಸಮ್ಮೇಳನ ಜರುಗುತ್ತಿದೆ. ವಿವಿಧ ಜಿಲ್ಲೆಗಳಿಂದ ಆಗಮಿಸುವ ಪತ್ರಕರ್ತರಿಗೆ ಜಿಲ್ಲಾಧ್ಯಕ್ಷರ ಮಾರ್ಗದರ್ಶನದಲ್ಲಿ ಸಾರಿಗೆ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಬೇಕೆಂದು ಸಲಹೆ ನೀಡಿದರು. ಯಾವ ವಸತಿ ಸ್ಥಳಕ್ಕೆ ಯಾವ ಬಸ್ ತೆಗೆದುಕೊಂಡು ಹೋಗಬೇಕೆಂದು ಮೊದಲೇ ನಿಗದಿಗೊಳಿಸಬೇಕು. ನಂತರ ವಸತಿ ಸ್ಥಳದಿಂದ ಸಮ್ಮೇಳನ ನಡೆಯುವ ಸ್ಥಳಕ್ಕೆ ಕರೆದುಕೊಂಡು ಹೋಗುವ ವ್ಯವಸ್ಥೆ ಸಮಿತಿ ವತಿಯಿಂದ ಚಾಚೂತಪ್ಪದೇ ಮಾಡಬೇಕೆಂದು ಪ್ರತಿಪಾದಿಸಿದರು. ಪತ್ರಕರ್ತರ ಸಾಂಘಿಕ ಶಕ್ತಿ ಸಮ್ಮೇಳನದ ಯಶಸ್ವಿ ಮೂಲಕ ತೋರಿಸಬೇಕಾಗಿದೆ. ಸಮ್ಮೇಳನಕ್ಕೆ ಸಿಎಂ, ಡಿಸಿಎಂ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹಿಂಖಾನ್ ಸೇರಿದಂತೆ ಹಲವು ಮಂತ್ರಿಗಳು ಆಗಮಿಸುತಿದ್ದು, ಸಮ್ಮೇಳನವನ್ನು ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ಯಶಸ್ವಿ ಮಾಡಿ ತೋರಿಸುವ ಜವಾಬ್ದಾರಿ ಎಲ್ಲಾ ಸಮಿತಿಗಳ ಮೇಲಿದೆ ಎಂದರು.
ಸಭೀಕರಿಗೂ ಸ್ವಾಗತ ಕೋರಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಾರಿಗೆ ಸಮಿತಿಯ ಪ್ರಧಾನ ಸಂಚಾಲಕ ಪೃಥ್ವಿರಾಜ್ ಎಸ್. ಮಾತನಾಡಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ವಿಮಾನ ನಿಲ್ದಾಣಗಳ ಮೂಲಕ ಆಗಮಿಸುವ ಪತ್ರಕರ್ತರಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಕಲ್ಯಾಣ ನಾಡಿಗೆ ಆಗಮಿಸುವ ಪತ್ರಕರ್ತ ಆಗಮನವೇ ನಮಗೆ ಪ್ರಾಣ ಜೀವಾಳವಾದ್ದರಿಂದ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಸಾರಿಗೆ ಸಮಿತಿ ವತಿಯಿಂದ ಲೋಗೋ ಬಿಡುಗಡೆ ಮಾಡುವ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷರಾದ ಆನಂದ ದೇವಪ್ಪ, ಮಾಜಿ ಅಧ್ಯಕ್ಷ ಬಸವರಾಜ ಕಾಮಶೆಟ್ಟಿ, ಅಶೋಕಕುಮಾರ ಕರಂಜಿ, ಮಾಜಿ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಸಾರಿಗೆ ಸಮಿತಿಯ ಸಂಚಾಲಕ ಸುನೀಲಕುಮಾರ ಕುಲಕರ್ಣಿ, ಸಹ ಸಂಚಾಲಕ ಸುನೀಲ ಚಿಲ್ಲರ್ಗಿ, ಪ್ರಮುಖರಾದ ಮಾಣಿಕೇಶ ಪಾಟೀಲ, ಅನೀಲ ಪಾಟೀಲ, ರಿಯಾಜಪಾಶಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.