ಅಗ್ನಿ ಶಾಮಕ ಠಾಣೆಗೆ ೩ ಎಕರೆ ಜಾಗ

ಬೀದರ್:ಡಿ.೧೭: ಬೀದರ್ ದಕ್ಷಿಣ ವಿಧಾನಸಭೆ ಕ್ಷೇತ್ರದ ಮನ್ನಾಎಖ್ಖೆಳ್ಳಿ ಹತ್ತಿರ ಮೊಗದಾಳ ಗ್ರಾಮದ ಬಳಿ ಅಗ್ನಿ ಶಾಮಕ ಠಾಣೆ ನಿರ್ಮಿಸಲು ೩ ಎಕರೆ ಜಾಗ ಗುರುತಿಸಲಾಗಿದೆ. ಜಿಲ್ಲಾಡಳಿತ ಗೃಹ ಇಲಾಖೆಗೆ ಜಾಗ ಹಸ್ತಾಂತರಿಸಿದ ಬೆನ್ನಲ್ಲೇ ಅಗತ್ಯ ಅನುದಾನ ಒದಗಿಸಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ಮಂಗಳವಾರ ಚುಕ್ಕೆ ಗುರುತಿನ ಪ್ರಶ್ನೆ ವೇಳೆಯಲ್ಲಿ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರು ಈ ವಿಷಯವನ್ನು ಮತ್ತೆ ಪ್ರಸ್ತಾಪಿಸಿ ಸದನದ ಗಮನ ಸೆಳೆದರು. ಜನರ ಆಸ್ತಿ ಹಾಗೂ ಜೀವ ರಕ್ಷಣೆಯ ಮಹತ್ವದ ಈ ವಿಷಯವನ್ನು ನಾನು ಕಳೆದ ಎರಡೂವರೆ ವರ್ಷದಿಂದ ಸತತ ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ. ಸರ್ಕಾರಕ್ಕೆ ಜಾಗ ಕೊಡಿಸುವುದು ಏಕೆ ಆಗುತ್ತಿಲ್ಲ? ಸರ್ಕಾರದ ನಿರ್ಲಕ್ಷ್ಯ ಧೋರಣೆ ಅತಿಯಾಗಿದೆ ಎಂದು ಅತೃಪ್ತಿ ವ್ಯಕ್ತಪಡಿಸಿ ಎಷ್ಟು ತಿಂಗಳಲ್ಲಿ ಅಗ್ನಿ ಶಾಮಕ ಠಾಣೆ ನಿರ್ಮಿಸಲಾಗುವುದು ಎಂದು ಕಾಲಮಿತಿ ತಿಳಿಸಿ ಎಂದು ಪಟ್ಟು ಹಿಡಿದರು ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಜಾಗದ ಸಮಸ್ಯೆ ಬಗೆಹರಿದಿದೆ.
ಕೆಲಸ ಬೇಗ ಆರಂಭಿಸಲು ಆದ್ಯತೆ ನೀಡುವೆ ಎಂದು ಅಭಯ ನೀಡಿದರು.
ಮನ್ನಾಎಖ್ಖೆಳ್ಳಿಯ ಮೊಗದಳ್ ಬಳಿ ಸರ್ವೆ ನಂಬರ್ ೯೫ರಲ್ಲಿ ಲಭ್ಯವಿರುವ ೧೦ ಎಕರೆ ಜಾಗದಲ್ಲಿ ಅಗ್ನಿ ಶಾಮಕ ಠಾಣೆಗೆ ೩ ಎಕರೆ ಒದಗಿಸಲು ಈಗಾಗಲೇ ತಹಸೀಲ್ದಾರರು ಸಹಾಯಕ ಆಯುಕ್ತರಿಗೆ ಶಿಫಾರಸ್ಸು ಮಾಡಿದ್ದಾರೆ. ಇವರು ಪರಿಶೀಲಿಸಿದ ಬಳಿಕ ಡಿಸಿಗೆ ಕಳಿಸುತ್ತಾರೆ. ಡಿಸಿಯವರು ಅಂತಿಮಗೊಳಿಸಿ ಜಾಗ ಗೃಹ ಇಲಾಖೆಗೆ ಹಸ್ತಾಂತರಿಸಿದ ತಕ್ಷಣ ಮಂಜೂರಿ ನೀಡಿ ಮುಂದಿನ ಪ್ರಕ್ರಿಯೆ ಆರಂಭಿಸಲಾಗುವುದು. ಜಾಗದ ಬಗ್ಗೆ ಯಾವುದೇ ಸಮಸ್ಯೆ ಇಲ್ಲ. ವಕ್ಫ್ ಮಂಡಳಿಯಿAದಲೂ ನಿರಪೇಕ್ಷಣಾ ಪತ್ರ( ಎನ್ ಓಸಿ) ಬಂದಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಕೇಂದ್ರ ಸರ್ಕಾರ ಅಗ್ನಿ ಅವಘಡ ಕುರಿತ ಸಲಹಾ ಸಮಿತಿಯು ಕೆಲವು ಮಾನದಂಡ ವಿಧಿಸಿದೆ. ನಗರದಲ್ಲಿ ೧೦ ಕಿಮೀ, ಗ್ರಾಮೀಣದಲ್ಲಿ ೫೦ ಕಿಮೀ ವ್ಯಾಪ್ತಿಗೆ ಒಂದು ಅಗ್ನಿ ಶಾಮಕ ಠಾಣೆ ಇರಬೇಕು. ಮನ್ನಾಎಖ್ಖೆಳ್ಳಿಯಿಂದ ಚಿಟಗುಪ್ಪ ಅಗ್ನಿಶಾಮಕ ಠಾಣೆ ೨೪ ಕಿಮೀ, ಹುಮನಾಬಾದ್, ಬೀದರ್ ೩೦ ಕಿಮೀ ದೂರದಲ್ಲಿವೆ. ಇದರ ಪ್ರಕಾರ ಇಲ್ಲಿ ಅಗ್ನಿ ಶಾಮಕ ಠಾಣೆ ಮಂಜೂರಿ ಮಾಡಲು ಬರುವುದಿಲ್ಲ. ಆದರೆ ಇಲ್ಲಿ ಆಗುತ್ತಿರುವ ಹೆಚ್ಚಿನ ಅನಾಹುತ, ಇತ್ತೀಚಿನ ವರ್ಷಗಳಲ್ಲಿ ಸುಮಾರು ೧೫.೭೫ ಕೋಟಿ ರೂ. ಆಸ್ತಿಪಾಸ್ತಿ ಬೆಂಕಿಗಾಹುತಿ ಪ್ರಕರಣ, ಶಾಸಕರ ಮನವಿ ಹಾಗೂ ಇಲಾಖೆ ಅಧಿಕಾರಿಗಳ ವರದಿ ಗಣನೆಗೆ ತೆಗೆದುಕೊಂಡು ಸರ್ಕಾರ ಇಲ್ಲಿ ಅಗ್ನಿ ಶಾಮಕ ಠಾಣೆ ಮಂಜೂರಿ ಮಾಡುತ್ತಿದೆ. ಮುಂದಿನ ಬಜೆಟ್ ನಲ್ಲಿ ಇದಕ್ಕೆ ಅಗತ್ಯ ಅನುದಾನ ಸಹ ಕೊಡುವುದಾಗಿ ಹೇಳಿದರು.
ಜಿಲ್ಲಾಡಳಿತಕ್ಕೆ ಹಲವು ಸಲ ಪತ್ರ ಬರೆದ ಬಳಿಕ ಇದೀಗ ಜಾಗ ಕೊಡುವ ಪ್ರಕ್ರಿಯೆ ಶುರುವಾಗಿದೆ. ಈ ವಿಷಯದಲ್ಲಿ ಸಾಕಷ್ಟು ವಿಳಂಬವಾಗಿದೆ. ತಾವು ಈ ಬಗ್ಗೆ ಜನಹಿತದಿಂದ ಸಾಕಷ್ಟು ಪ್ರಯತ್ನ ಮಾಡುತ್ತಿದ್ದು, ಮತ್ತೆ ಡಿಸಿ ಅವರಿಗೆ ಭೇಟಿಯಾಗಿ ಬೇಗ ಈ ಜಮೀನನ್ನು ಗೃಹ ಇಲಾಖೆಗೆ ಹಸ್ತಾಂತರಿಸುವAತೆ ನೋಡಿಕೊಳ್ಳಿ. ಮುಂದಿನ ಕೆಲಸ ನಾನು ಮಾಡಿಕೊಡುವೆ ಎಂದು ಸಚಿವರು ಶಾಸಕರಿಗೆ ಸಲಹೆ ನೀಡಿದರು. ಈ ಮಾತಿನಿಂದ ಸಂತುಷ್ಟರಾದ ಶಾಸಕ ಬೆಲ್ದಾಳೆ, ಸಚಿವರಿಗೆ ಕ್ಷೇತ್ರದ ಜನರ ಪರವಾಗಿ ಧನ್ಯವಾದ ಹೇಳಿದರು.


ಆಸ್ತಿಪಾಸ್ತಿ, ಜೀವಹಾನಿ ತಡೆಯಿರಿ

ದಕ್ಷಿಣ ಕ್ಷೇತ್ರದಲ್ಲಿ ೧೨೫ಕ್ಕೂ ಹೆಚ್ಚು ಹಳ್ಳಿ, ತಾಂಡಾಗಳಿವೆ. ಎಲ್ಲಾದರೂ ಅಗ್ನಿ ದುರಂತ ಸಂಭವಿಸಿದರೆ ಅಗ್ನಿ ಶಾಮಕ ವಾಹನ ೩೦-೪೦ ಕಿಮೀ ದೂರದಿಂದ ಬರಬೇಕು. ಅವು ಬರುವಷ್ಟರೊಳಗೆ ಬಹಳ ವಿಳಂಬವಾಗುವ ಕಾರಣ ಅಪಾರ ಹಾನಿಯಾಗುತ್ತಿದೆ. ಜನರ ಜೀವವೂ ಹೋಗುತ್ತಿವೆ. ಕಳೆದ ವಾರವೇ ರೇಕುಳಗಿಯಲ್ಲಿ೧೬ಎಕರೆಗೂ ಹೆಚ್ಚು ಬೆಳೆ ಸುಟ್ಟಿದೆ. ಬೆಂಕಿ ನಂದಿಸಲು ಯತ್ನಿಸಿದ ರೈತ ನಾಗಪ್ಪ ಸಿಂದೋಲ್ ಕಾಲು ಸಂಪೂರ್ಣ ಸುಟ್ಟಿದೆ ಎಂದು ಶಾಸಕ ಬೆಲ್ದಾಳೆ ಫೋಟೋ ಪ್ರದರ್ಶಿಸಿ ಸದನದ ಗಮನ ಸೆಳೆದರು. ಕ್ಷೇತ್ರದಲ್ಲಿ ೩೦ ಕಿಮೀ ರಾಷ್ಟ್ರೀಯ ಹೆದ್ದಾರಿ ಇದೆ. ಬೆಂಗಳೂರು-ಹೈದರಾಬಾದ್-ಪುಣೆ- ಮುಂಬೈ ಸಂಪರ್ಕಿಸುವ ದೇಶದ ಪ್ರಮುಖ ಚತುಷ್ಪಥ ಹೆದ್ದಾರಿಯಾಗಿದೆ. ನಿತ್ಯ ಸಹಸ್ರಾರು ವಾಹನಗಳ ಓಡಾಟವಿದೆ. ಆಗಾಗ್ಗೆ ಇಲ್ಲಿ ಅಪಘಾತ ಆಗುತ್ತವೆ. ಕೆಲವು ಸಂದರ್ಭಗಳಲ್ಲಿ ಅಪಘಾತದ ಬಳಿಕ ವಾಹನಕ್ಕೆ ಬೆಂಕಿ ಹೊತ್ತಿಕೊಂಡು ಆಸ್ತಿ ಜೊತೆಗೆ ಜೀವಹಾನಿಯೂ ಆಗುತ್ತಿವೆ. ಇವೆಲ್ಲ ಕಾರಣಗಳಿಂದ ಮನ್ನಾಎಖ್ಖೆಳ್ಳಿ ಹತ್ತಿರ ಅಗ್ನಿ ಶಾಮಕ ಠಾಣೆ ಸ್ಥಾಪಿಸುವುದು ಅಗತ್ಯವಿದೆ ಎಂದು ಮನವಿ ಮಾಡಿದರು. ಇದಕ್ಕೆ ಗೃಹ ಸಚಿವರು ಸಕಾರಾತ್ಮಕ ಸ್ಪಂದನೆ ನೀಡಿದರು.