
ಬೆಂಗಳೂರು,ಜ.೬-ಮಾದಕ ವಸ್ತುಗಳ ದಂಧೆ ವಿರುದ್ಧ ಸಾರಿರುವ ನಗರ ಪೊಲೀಸರು ಸ್ಮಶಾನದ ಸಮಾಧಿಯೊಂದರ ಪಕ್ಕ ಡ್ರಗ್ಸ್ ಅಡಗಿಸಿಟ್ಟಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಸೇರಿ ಇಬ್ಬರು ಡ್ರಗ್ ಫೆಡ್ಲರ್ ಗಳನ್ನು ಬಂಧಿಸಿ ಡ್ರಗ್ಸ್ ಸೇರಿ ೩.೫ ಕೋಟಿ ಮೌಲ್ಯದ ಎಂಡಿಎಂಎ ಕ್ರಿಸ್ಟೆಲ್ ವಶಪಡಿಸಿಕೊಂಡಿದ್ದಾರೆ.
ಚಿಕ್ಕ ಬಾಣಸವಾಡಿಯ ಸಾಫ್ಟ್‌ವೇರ್ ಇಂಜಿನಿಯರ್ ತಾರಿಕ್ ಇಕ್ಬಾಲ್(೩೩)ಹಾಗೂ ಕಾಡುಗೋಡಿ ಸಿಗೇಹಳ್ಳಿಯ ಮೊಹಮ್ಮದ್ ಅಬ್ರಾಜ್(೨೯)ಬಂಧಿತ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಂಧಿತ ಆರೋಪಿಗಳಿಂದ ೩.೫ ಕೋಟಿ ಮೌಲ್ಯದ ೩ ಕೆಜಿ ೨೦೦ ಗ್ರಾಂ ಎಂಡಿಎಂಎ ಕ್ರಿಸ್ಟೆಲ್,ಸ್ಕೂಟರ್, ಮೊಬೈಲ್ ಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಹೊಸವರ್ಷದ ವರ್ಷಾಚರಣೆಯ ಸಮಯದಲ್ಲಿ ಯುವಕರಿಗೆ ನಿಷೇದಿತ ಎಂಡಿಎಂಎ ಕ್ರಿಸ್ಟಲ್‌ಅನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಮಾಹಿತಿಯನ್ನು ಆಧರಿಸಿದ ಆಶೋಕನಗರ ಪೊಲೀಸರು ಹೊಸೂರು ರಸ್ತೆಯ ಹಿಂದೂ ಸ್ಮಶಾನದ ಬಳಿ ಸಾಫ್ಟ್‌ವೇರ್ ಇಂಜಿನಿಯರ್ ತಾರಿಕ್ ಇಕ್ಬಾಲ್ ನನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಯು ಮೊಹಮ್ಮದ್ ಅಬ್ರಾಜ್ ನಿಂದ ಡ್ರಗ್ಸ್ ಎಂಡಿಎಂಎ ಕ್ರಿಸ್ಟಲ್ ಅನ್ನು ಮತ್ತೋರ್ವ ಸಹಚರನೊಂದಿಗೆ ಸೇರಿಕೊಂಡು ಕಡಿಮೆ ಬೆಲೆಗೆ ಖರೀದಿಸಿ ಹೊಸ ವರ್ಷಾಚರಣೆಯ ಸಮಯದಲ್ಲಿ ಮಾರಾಟ ಮಾಡಿ ಹೆಚ್ಚಿನ ಹಣಗಳಿಸಲು ಕೃತ್ಯ ನಡೆಸಿರುವುದನ್ನು ತಪ್ಪೊಪ್ಪಿಕೊಂಡಿದ್ದಾನೆ ಎಂದು ಹೇಳಿದರು.
ಆರೋಪಿಯು ಸ್ಮಶಾನದಲ್ಲಿರುವ ಸಮಾಧಿಯೊಂದರ ಪಕ್ಕದಲ್ಲಿ ಅಡಗಿಸಿಟ್ಟ ೨ ಕೆ.ಜಿ ೪೮೦ ಗ್ರಾಂ ಎಂಡಿಎಂಎ ಕ್ರಿಸ್ಟಲ್, ಸ್ಕೂಟರ್ ನ್ನು ವಶಪಡಿಸಿಕೊಳ್ಳಲಾಗಿದೆ.
ಮತ್ತೊಬ್ಬ ಆರೋಪಿ ತಾರಿಕ್ ಇಕ್ಬಾಲ್ ನನ್ನು
ಬೈಯಪ್ಪನಹಳ್ಳಿಯ ಮಲ್ಲೇಶ್ ಪಾಳ್ಯದಲ್ಲಿ ಬಂಧಿಸಿ ಆತ ಕಾಡುಗೋಡಿಯ ಸೀಗೇಹಳ್ಳಿಯ ವಾಸದ ಮನೆಯಲ್ಲಿಟ್ಟಿದ್ದ ೭೨೦ ಗ್ರಾಂ ಎಂಡಿಎಂಎ ಕ್ರಿಸ್ಟಲ್‌ನ್ನು ವಶಪಡಿಸಿಕೊಳ್ಳಲಾಗಿದೆ.
ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಎಂ ಹಾಕೆ ಮಾರ್ಗದರ್ಶನದಲ್ಲಿ ಅಶೋಕನಗರ ಪೊಲೀಸ್ ಇನ್ಸ್ ಪೆಕ್ಟರ್ ರವಿ.ಕೆ.ಬಿ, ಮತ್ತವರ ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.


























