29ನೇ ದಿನಕ್ಕೆ ಕಾಲಿಟ್ಟ ರೈತರ ಆಹೋರಾತ್ರಿ ಧರಣಿ ಪ್ರತಿಭಟನೆ

ಸಂಜೆವಾಣಿ ವಾರ್ತೆ
ಹನೂರು ನ 24 :-
ತಾಲೂಕಿನ ಕುರಟ್ಟಿ ಹೊಸೂರು ಪಂಚಾಯಿತಿ, ಶೆಟ್ಟಹಳ್ಳಿ ಪಂಚಾಯಿತಿ, ಮಾರ್ಟಳ್ಳಿ ಪಂಚಾಯಿತಿ ವ್ಯಾಪ್ತಿಗಳ ಅಂತರ್ಜಲ ಅಭಿವೃದ್ಧಿಗಾಗಿ ದಂಟಳ್ಳಿ ಮಾರ್ಗವಾಗಿ ಏತನೀರಾವರಿ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ದಂಟಳ್ಳಿ ಏತ ನೀರಾವರಿ ಹೋರಾಟ ಸಮಿತಿ ರೈತ ಸಂಘಟನೆ ಪ್ರತಿಭಟನೆ ನಡೆಸಿದರು.
ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಮುಖ್ಯ ರಸ್ತೆಯ ವಡಕೆಹಳ್ಳ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಮತ್ತು ದಂಟಳ್ಳಿ ಏತನೀರಾವರಿ ಹೋರಾಟ ಸಮಿತಿ ಹಮ್ಮಿಕೊಂಡಿರುವ ಆಹೋರಾತ್ರಿ ಧರಣಿ ಪ್ರತಿಭಟನೆ 28 ನೇ ದಿನಗಳನ್ನು ಪೂರೈಸಿ 29 ನೇ ದಿನ ಸೋಮವಾರಕ್ಕೆ ಕಾಲಿಟ್ಟಿದೆ.


ಪ್ರತಿಭಟನೆಯಲ್ಲಿ ಕಾವೇರಿ ನದಿಯಿಂದ ದಂಟಳ್ಳಿ ಏತನೀರಾವರಿ ಯೋಜನೆಗೆ ಡಿ.ಪಿ.ಆರ್ ಮಾಡಿಸುವಂತೆ ಆಗ್ರಹಿಸಿ ದಿನಾಂಕ 27-10-2025 ರಿಂದ ನಡೆಯುತ್ತಿರುವ ಪ್ರತಿಭಟನೆಯ ಜೊತೆಗೆ ಹಲವು ಪ್ರಮುಖ ಸಮಸ್ಯೆಗಳನ್ನು ಬಗೆಹರಿಸದ ಸರ್ಕಾರ ಆಡಳಿತ ಅಧಿಕಾರಿಗಳ ನಡೆಯನ್ನು ಖಂಡಿಸಿ ದಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.


ಮಾರ್ಟಳ್ಳಿ ಭಾಗದ ರೈತ ಸಂಘದ ಅಧ್ಯಕ್ಷ ಆರ್ ಅರ್ಪುದ ರಾಜ್ ಮಾತನಾಡಿ ಡಾ.ಬಿ.ಆರ್ ಅಂಬೇಡ್ಕರ್ ರವರು ಭಾರತದ ನಾಗರೀಕರಿಗೋಸ್ಕರ ಬೃಹತ್ ಸಂವಿಧಾನ ರಚನೆ ಮಾಡಿ ಅನೇಕ ರೀತಿಯ ಮೂಲಭೂತ ಸೌಕರ್ಯಗಳನ್ನು ನೀಡುವಂತೆ ತಿಳಿಸಿರುತ್ತಾರೆ ಆದರೆ ಸರ್ಕಾರಗಳು ಮೂಲಭೂತ ಸೌಕರ್ಯ ಕಲ್ಪಿಸಿಲ್ಲ. ಅಹೋರಾತ್ರಿ ಧರಣಿ ನಡೆಸುತ್ತಿದ್ದು ಸರ್ಕಾರ 28 ದಿನ ಕಳೆದರೂ ಕ ಭಾಗದ ಸಮಸ್ಯೆ ಬಗೆಹರಿಸಲು ವಿಫಲವಾಗಿದೆ.


ಆದ್ದರಿಂದ ದಿನಾಂಕ 26-11-2025 ರಂದು ಸಂವಿಧಾನ ದಿನಾಚರಣೆ ದಿನ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ತಲೆಗಳಿಗೆ ಕಪ್ಪು ಬಟ್ಟೆಗಳನ್ನು ಕಟ್ಟಿಕೊಂಡು ಮೌನಾಚರಣೆ ಮೂಲಕ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎಂದು ತಿಳಿಸಿರುತ್ತಾರೆ ಆ ದಿವಸ ಕೊಳ್ಳೇಗಾಲ ತಾಲ್ಲೂಕಿನ ಗ್ರಾಮ ಘಟಕಗಳ ಕಾರ್ಯಕರ್ತರು ಕೂಡ ಭಾಗವಹಿಸುತ್ತಾರೆ ಎಂದು ತಿಳಿಸಿದರು.
ಧರಣಿ ಪ್ರತಿಭಟನೆಯಲ್ಲಿ ಪುಟ್ಟಸ್ವಾಮಿ, ಪೀಟರ್ , ಜೋಸೆಫ್, ಲೂಯಿಸ್, ಶಿವಣ್ಣ ಶಿವಮೂರ್ತಿ, ಧರ್ಮರಾಜು, ಲಾಸರ್, ಸೂಳ್ವಾಡಿ ಜೋಸೆಫ್, ಜಪಮಾಲೆ, ಸೇಸು ,ಕ್ರಿಷ್ಟ, ಮಾದಮ್ಮ, ಚಿನ್ನಾತಾ, ಪೆರಿಯ ನಾಯಗಮ್ಮ ,ಅಭಿನಯ ,ಕ್ರಿಷ್ಟಯಮ್ಮ, ರೆಜಿನಾ ಮೇರಿ, ಮುಂತಾದವರು ಭಾಗವಹಿಸಿದ್ದರು.