Home ಮುಖಪುಟ ಸುದ್ದಿ ಮೋದಿ ರಾಜಕೀಯ ಜೀವನಕ್ಕೆ ೨೫ ವರ್ಷ: ವಿನಾಯಕನಿಗೆ ವಿಶೇಷ ಪೂಜೆ

ಮೋದಿ ರಾಜಕೀಯ ಜೀವನಕ್ಕೆ ೨೫ ವರ್ಷ: ವಿನಾಯಕನಿಗೆ ವಿಶೇಷ ಪೂಜೆ

ನವದೆಹಲಿ, ಆ.೭-ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಾರ್ವಜನಿಕ ರಾಜಕೀಯ ಪ್ರವೇಶಿಸಿ ೨೫ ವರ್ಷಗಳ ನಾಯಕತ್ವವನ್ನು ಪೂರೈಸಿದ ಹಿನ್ನೆಲೆಯಲ್ಲಿ ಬಿಜೆಪಿ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ.


ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಸರ್ಕಾರದ ಮುಖ್ಯಸ್ಥರಾಗಿ ತಮ್ಮ ರಾಜಕೀಯ ಪಯಣವನ್ನು ಆರಂಭಿಸಿದ್ದರು. ಇದೀಗ ೨೫ ವರ್ಷಗಳ ಬಳಿಕವೂ ಅವರು ದೇಶದ ರಾಜಕೀಯದ ಕೇಂದ್ರಬಿಂದುವಾಗಿದ್ದಾರೆ.

ಈ ಮಹತ್ದಿವದ ದಿನದಂದು ಮೋದಿ ಅವರು ದೆಹಲಿಯ ಸರೋಜಿನಿ ನಗರದಲ್ಲಿರುವ ವಿನಾಯಕ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ಆರತಿ ನೆರವೇರಿಸಿದರು.
ದೇಶದ ೧೪೦ ಕೋಟಿ ಜನರ ಒಳಿತಿಗಾಗಿ ಪ್ರಾರ್ಥಿಸಿದ ಅವರು, ರಾಷ್ಟ್ರ ಸೇವೆಯನ್ನು ಅತ್ಯಂತ ಸಮರ್ಪಣಾಭಾವದಿಂದ ಮುಂದುವರಿಸುವ ಸಂಕಲ್ಪ ಮಾಡಿದರು.


ಗುಜರಾತ್‌ನಿಂದ ದೆಹಲಿವರೆಗೆ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ೧೨ ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದರು. ನಂತರ ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಮುನ್ನಡೆಸಿದರು. ಬಿಜೆಪಿ ಬಹುಮತ ಪಡೆದು ಕೇಂದ್ರದಲ್ಲಿ ಸರ್ಕಾರ ರಚಿಸಿದ ಬಳಿಕ ಅವರು ಪ್ರಧಾನಮಂತ್ರಿಯಾದರು.


೨೦೧೯ ಮತ್ತು ೨೦೨೪ರ ಲೋಕಸಭಾ ಚುನಾವಣೆಗಳಲ್ಲೂ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಮರಳಿತು. ಇದರೊಂದಿಗೆ ಜವಾಹರಲಾಲ್ ನೆಹರು ಬಳಿಕ ಸತತ ಮೂರು ಅವಧಿಗೆ ಪ್ರಧಾನಮಂತ್ರಿಯಾಗಿ ಸರ್ಕಾರ ಮುನ್ನಡೆಸಿದ ಮೊದಲ ಪ್ರಧಾನಿ ಎಂಬ ದಾಖಲೆಯನ್ನು ಮೋದಿ ಪಡೆದರು.


ಬಿಜೆಪಿ ಆಯೋಜಿಸಿರುವ ೨೫ ವರ್ಷಗಳ ಆಚರಣೆಯು ಮೋದಿ ಅವರ ಗುಜರಾತ್ ಆಡಳಿತದಿಂದ ಕೇಂದ್ರ ಸರ್ಕಾರದವರೆಗಿನ ಪಯಣವನ್ನು ಜನರಿಗೆ ಪರಿಚಯಿಸುವ ಉದ್ದೇಶ ಹೊಂದಿದೆ.


ಕೇಂದ್ರ ಸಚಿವ ಸಂಪುಟವು ಮೋದಿ ಅವರ “ಅಸಾಧಾರಣ ಪಯಣ”ವನ್ನು ಸ್ಮರಿಸಿದ್ದು, ಗುಜರಾತ್‌ನಲ್ಲಿ ಆರಂಭವಾದ ಕೆಲವು ಆಡಳಿತಾತ್ಮಕ ಕ್ರಮಗಳು ನಂತರ ರಾಷ್ಟ್ರಮಟ್ಟದಲ್ಲಿ ವಿಸ್ತರಿಸಲ್ಪಟ್ಟವು ಎಂದು ಉಲ್ಲೇಖಿಸಿದೆ.


ಅವುಗಳಲ್ಲಿ ಸ್ವಾಗತ್ ದೂರು ಪರಿಹಾರ ವ್ಯವಸ್ಥೆ ಮತ್ತು ಜ್ಯೋತಿಗ್ರಾಮ ಯೋಜನೆ ಪ್ರಮುಖವಾಗಿವೆ. ನಾಗರಿಕರ ಕುಂದುಕೊರತೆ ಗಳನ್ನು ನೇರವಾಗಿ ಪರಿಶೀಲಿಸುವ ಸ್ವಾಗತ್ ವ್ಯವಸ್ಥೆಗೆ ೨೦೧೦ರಲ್ಲಿ ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ಪ್ರಶಸ್ತಿ ದೊರೆತಿತ್ತು.


ಇದೇ ರೀತಿಯ ಆಡಳಿತಾತ್ಮಕ ವಿಧಾನವು ನಂತರ ಕೇಂದ್ರದ ಪ್ರಗತಿ ವೇದಿಕೆಗೆ ಪ್ರೇರಣೆಯಾಯಿತು.


ದೇಶಾದ್ಯಂತ ಸೇವಾ ಕಾರ್ಯಕ್ರಮಗಳು


ಮೋದಿ ಅವರ ೨೫ ವರ್ಷಗಳ ಸಾರ್ವಜನಿಕ ಜೀವನವನ್ನು ಗುರುತಿಸುವ ಸಲುವಾಗಿ ಬಿಜೆಪಿ ಸೆಪ್ಟೆಂಬರ್ ೧೭ರಿಂದ ಅವರ ಜನ್ಮದಿನದಿಂದ ‘ಸೇವಾ ಸಂಕಲ್ಪ ಅಭಿಯಾನ’ ನಡೆಸುತ್ತಿದೆ.


ಈ ಅಭಿಯಾನದಡಿ ರಕ್ತದಾನ ಶಿಬಿರಗಳು, ಸ್ವಚ್ಛತಾ ಕಾರ್ಯಕ್ರಮಗಳು, ಜನ ಕಲ್ಯಾಣ ಚಟುವಟಿಕೆಗಳು, ಪ್ರದರ್ಶನಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.


ಬುಧವಾರ ದೇಶದ ವಿವಿಧ ರಾಜ್ಯಗಳಲ್ಲಿ ಟಾರ್ಚ್ ಮೆರವಣಿಗೆ, ಬೈಕ್ ಮತ್ತು ಸೈಕಲ್ ರ?ಯಾಲಿ, ಪ್ರದರ್ಶನಗಳು ಹಾಗೂ ಸಾರ್ವಜನಿಕ ಕಾರ್ಯಕ್ರಮಗಳು ನಡೆದವು.