219 ಪೌರಕಾರ್ಮಿಕರಿಗೆ ಕಾಯಂ ಆದೇಶ ಪತ್ರ ವಿತರಣೆ

ಸಂಜೆವಾಣಿ ನ್ಯೂಸ್
ಮೈಸೂರು: ಜೂ.21:-
ದುಡಿಮೆಯ ಫಲ ಬೇರೆ ಯಾರ ಪಾಲೋ ಆಗುವ ಪದ್ಧತಿಯನ್ನು ತಪ್ಪಿಸಿ, ನೌಕರಿಯನ್ನು ಕಾಯಂಗೊಳಿಸಲಾಗಿದೆ. ಪೌರಕಾರ್ಮಿಕರು ಈಗ ಸರ್ಕಾರಿ ನೌಕರರು. ಸರ್ಕಾರದಿಂದ ನೌಕರರಿಗೆ ಸಿಗಬೇಕಾದ ಎಲ್ಲ ಸೌಲಭ್ಯಗಳು ಇನ್ನು ನಗರದ ಸ್ವಚ್ಛ ಕಾಯುವ ಸಿಗಲಿವೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.

ನಗರದ ಕೆಎಸ್‍ಒಯು ಘಟಿಕೋತ್ಸವ ಭವನದಲ್ಲಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲಿಕೆಯ 219 ಪೌರಕಾರ್ಮಿಕರಿಗೆ ನೌಕರಿಯ ಕಾಯಂ ಆದೇಶ ಪತ್ರ ವಿತರಿಸಿ ಮಾತನಾಡಿದ ಅವರು, ಪೌರಕಾರ್ಮಿಕರು ನಗರದ ಸ್ವಚ್ಛತೆಗೆ ಹಗಲಿರುಳೆನ್ನದೆ ದುಡಿಯುತ್ತಾರೆ. ಅವರಿಗೆ ಸೂಕ್ತ ಸೌಲಭ್ಯ ನೀಡುವುದು ನಮ್ಮ ಕರ್ತವ್ಯ. ಹೀಗಾಗಿ ಅವರಿಗೆ ಸರ್ಕಾರಿ ನೌಕರರು ಪಡೆಯುವ ಸೌಲಭ್ಯ ನೀಡಲಾಗುವುದು ಎಂದರು.

ನಾರಾಯಣ ಅವರು ಹಲವು ದಶಕದಿಂದ ಕಾಯಂ ನೌಕರಿಗೆ ಹೋರಾಟ ನಡೆಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ 32 ಸಾವಿರ ಪೌರಕಾರ್ಮಿಕರು, 8 ಸಾವಿರ ಸಫಾಯಿ ಕರ್ಮಚಾರಿಗಳಿಗೆ ಗುತ್ತಿಗೆ ನೇಮಕಾತಿ ನಿಲ್ಲಿಸಿ, ಕಾಯಂಗೊಳಿಸಿದ್ದಾರೆ. ಇಡೀ ದೇಶದಲ್ಲಿ 14 ಲಕ್ಷ ಪೌರಕಾರ್ಮಿಕರಿದ್ದು, ಕರ್ನಾಟಕ ಹೊರತು ಪಡಿಸಿ, ಬೇರೆ ಯಾವ ರಾಜ್ಯವೂ ಸರ್ಕಾರಿ ನೌಕರರೆಂದು ಪರಿಗಣಿಸಿಲ್ಲ ಎಂದು ಹೇಳಿದರು.

28 ಕೋಟಿ ವೆಚ್ಚದಲ್ಲಿ ಮನೆ ಕಟ್ಟಲಾಗಿದ್ದು, 150 ಮಂದಿಗೆ ಸೂರು ಹಂಚಿಕೆ ಮಾಡಲಾಗುವುದು. ತಲಾ ಒಂದು ಮನೆಯನ್ನು 21 ಲಕ್ಷ ವೆಚ್ಚದಲ್ಲಿ ಕಟ್ಟಲಾಗಿದೆ. 3 ಲಕ್ಷ ಭರಿಸಿದರೆ, ಮನೆಯ ಮಾಲೀಕತ್ವ ಸಿಗಲಿದೆ. 21 ಲಕ್ಷ ವೆಚ್ಚದ ಮನೆಯಲ್ಲಿ ಪೌರಕಾರ್ಮಿಕರು ಇರುತ್ತಾರೆಂದರೆ, ಅಂಬೇಡ್ಕರ್ ಎಷ್ಟು ಖುಷಿ ಪಡಬಹುದು ಎಂದರು.
89 ಪೌರಕಾರ್ಮಿಕರು ಕರ್ತವ್ಯದ ವೇಳೆ ಮೃತಪಟ್ಟಿದ್ದು, ಅವರ ಕುಟುಂಬಗಳಿಗೂ ಪಾಲಿಕೆ ನೆರವು ನೀಡಲಿದೆ. ಸಮಾಜದ ಕಟ್ಟಕಡೆಯ ಮನುಷ್ಯನಿಗೆ ಮೊಟ್ಟಮೊದಲ ಆದ್ಯತೆ ನೀಡುವುದು ಸಂವಿಧಾನದ ಆಶಯವಾಗಿದೆ. ಪ್ರಜಾಪ್ರಭುತ್ವ ಗೆಲ್ಲಲು ಅಸಮಾನತೆ ಕಳೆಯಬೇಕಿದೆ. ಅದರಂತೆ ರಾಜ್ಯದ ಕಾಂಗ್ರೆಸ್ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕ ತನ್ವೀರ್ ಸೇಠ್, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತರೆಡ್ಡಿ, ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್, ಮುಖಂಡರಾದ ನಾರಾಯಣ, ಮಾರ, ಶ್ರೀನಿವಾಸ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕೆ.ನಾಗಪ್ಪ, ಗೌರವ ಅಧ್ಯಕ್ಷರುಗಳಾದ ಡಾ.ಸಣ್ಣವೀರಣ್ಣ ದೊಡ್ಡಮನಿ, ಪಿ.ರಾಮಯ್ಯ, ಮಹೆಂದರ್ ರಾವ್ ಸಾಸನಿಕ್, ಮುಖಂಡರಾದ ವಿಲಾಸ್ ಕುಮಾರ್ ಸಿಂಧೆ, ಪುಡ್ಲಿಕಪ್ಪ ಕಿಳ್ಳೇಕ್ಯಾತರ, ಹುಣಸೂರು ಸಣ್ಣಸ್ವಾಮಿ, ರಾಜಣ್ಣ, ಶಿವಣ್ಣ, ಅಣ್ಣಪ್ಪ ಸೇರಿದಂತೆ ಮುಂತಾದವರು ಹಾಜರಿದ್ದರು.