
ಬೀದರ್:ಜ.3:ಬಿ. ಶಾಮಸುಂದರ ವೇದಿಕೆಯ ಆಶ್ರಯದಲ್ಲಿ ಭೀಮಾ ಕೋರೆಗಾಂವದ 208ನೇ ವಿಜಯೋತ್ಸವವನ್ನು ಜನವರಿ 1ರಂದು ಸಂಜೆ 5.30ಕ್ಕೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಭೀಮಾ ಕೋರೆಗಾಂವ ಸೇನಾ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ರವಿ ಬಿ. ಚಿದ್ರಿ ಅವರ ನೇತ್ರತ್ವದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಸೋಮಶೇಖರ ಬಿರಾದಾರ ಚಿದ್ರಿ ಅವರು ಉದ್ಘಾಟಿಸಿದ್ದರು.
ಮುಖ್ಯ ಭಾಷಣಗಾರರಾಗಿ ಸಂಶೋಧಕ ಬರಹಗಾರರಾದ ಡಾ. ವಿಠಲ್ ವಗ್ಗನ (ಕಲಬುರಗಿ) ಅವರು ಮಾತನಾಡಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು 01-01-1927ರಂದು ಮೊದಲ ಬಾರಿಗೆ ತಮ್ಮ ಅನುಯಾಯಿಗಳೊಂದಿಗೆ ವಿಜಯಸ್ಥಂಭಕ್ಕೆ ಗೌರವ ಸಲ್ಲಿಸುವ ಮೂಲಕ ದಲಿತರ ಶೌರ್ಯವನ್ನು ಜಗತ್ತಿಗೆ ಪರಿಚಯಿಸಿದರು. ನಂತರ ತಮ್ಮ ಜೀವಿತಾವಧಿಯವರೆಗೂ ಪ್ರತಿವರ್ಷ ಜನವರಿ 1ರಂದು ಕೋರೆಗಾಂವಕ್ಕೆ ಭೇಟಿ ನೀಡಿ ವಿಜಯಸ್ಥಂಭಕ್ಕೆ ನಮನ ಸಲ್ಲಿಸುತ್ತಾ ಬಂದರು.
ಅಂಬೇಡ್ಕರ್ ಅವರ ಕರೆಯಂತೆ ಭೀಮಾ ಕೋರೆಗಾಂವ ವಿಜಯೋತ್ಸವವನ್ನು ದಲಿತರ ಸಾಧನೆ ಹಾಗೂ ಸ್ವಾಭಿಮಾನದ ದಿನವಾಗಿ ಆಚರಿಸಲಾಗುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಆಣದೂರ ಬುದ್ಧ ವಿಹಾರದ ಪೂಜ್ಯ ಭಂತೆ ಜ್ಞಾನ ಸಾಗರ ಹಾಗೂ ಪೂಜ್ಯ ಭಂತೆ ಸಂಘರಕ್ಷಿತರು, ವಹಿಸಿದ್ದರು.
ಗೌರವ ಅಧ್ಯಕ್ಷತೆಯನ್ನು ಜೆಡಿಎಸ್ ಎಸ್.ಸಿ. ವಿಭಾಗದ ಜಿಲ್ಲಾ ಅಧ್ಯಕ್ಷ ಆಯು. ದೇವೇಂದ್ರ ಆರ್. ಸೋನಿ, ಹಿರಿಯ ಮುಖಂಡರಾದ ವೈಜಿನಾಥ ಸೂರ್ಯವಂಶಿ, ಅಜೀಜ ಖಾನ, ಶಶಿಕಾಂತ ಚೌಳಿ, ತುಕಾರಾಮ ಕರಾಟೆ, ಸೂರ್ಯಕಾಂತ ಭಾವಿದೊಡ್ಡಿ, ಸಂಗಮ ಚಿದ್ರಿ, ಗೌತಮ ಸೇರಿದಂತೆ ಗಣ್ಯರು, ಮಹಿಳಾ ಪ್ರತಿನಿಧಿಗಳು ಮತ್ತು ಯುವ ಮುಖಂಡರು ಭಾಗವಹಿಸಿದ್ದರು.























