2025 ನೈವೇದ್ಯ ಸಮರ್ಪಣೆಯ ವಿಶ್ವ ದಾಖಲೆ

ಸಂಜೆವಾಣಿ ನ್ಯೂಸ್
ಮೈಸೂರು: ನ.12:-
ಕಷ್ಟ ಭಂಜನ (ಕಷ್ಟನಾಶಕ) ಭೈರವ ದೇವರಿಗೆ 2025 ಪ್ರಕಾರದ ಮಿಷ್ಠಾನ ನೈವೇದ್ಯ ಸಮರ್ಪಣೆಯ ವಿಶ್ವ ದಾಖಲೆ ಕಾರ್ಯಕ್ರಮ ಇಂದು ನಡೆಯಲಿದೆ.
ನಗರದ ಪುರಭವನ ಆವರಣದಲ್ಲಿ ಭೈರವ ಜನ್ಮಾಷ್ಟಮಿ ಪ್ರಯುಕ್ತ ನ.5ರಿಂದ 12ರವರೆಗೆ ಕೃಷ್ಣಗಿರಿ ಪೀಠಾಧಿಪತಿ ಜಗದ್ಗುರು 1008 ಆಚಾರ್ಯ ವಸಂತ ವಿಜಯಾನಂದ ಗಿರಿಜೇ ಮಹಾರಾಜ್ ಅವರ ಸಾನಿಧ್ಯದಲ್ಲಿ ಕಷ್ಟ ಭಂಜನ ಭೈರವ ಜನ್ಮಾಷ್ಟಮಿ ಕಾರ್ಯಕ್ರಮ ನಡೆಯುತ್ತಿದ್ದು, ನ.12ರ ಬುಧವಾರ ಸಂಜೆ 4 ಗಂಟೆಗೆ 2025 ಪ್ರಕಾರದ ಮಿಷ್ಠಾನ ನೈವೇದ್ಯ ಸಮರ್ಪಣೆಯ ವಿಶ್ವ ದಾಖಲೆ ಕಾರ್ಯಕ್ರಮ ನಡೆಯಲಿದೆ ಎಂದು ಬಿ.ಎ.ಕೈಲಾಶ್‍ಚಂದ್ ಜೈನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಕಳೆದ ವರ್ಷ 2024 ನೈವೇದ್ಯಗಳನ್ನು ಸಮರ್ಪಿಸಿ, ಏಷ್ಯಾ ಬುಕ್ಸ್ ಆಫ್ ರೆಕಾರ್ಡ್ಸ್, ಇಂಡಿಯಾ ಬುಕ್ಸ್ ಆಫ್ ರೆಕಾರ್ಡ್ಸ್ ಸೇರಿದಂತೆ 40 ದಾಖಲೆ ಮಾಡಲಾಗಿತ್ತು. ಈಗಾಗಲೇ 600ಕ್ಕೂ ಹೆಚ್ಚು ವಿಶ್ವ ದಾಖಲೆ ಮಾಡಿರುವ ಕೃಷ್ಣಗಿರಿ ಪೀಠಾಧೀಶ್ವರ ಜಗದ್ಗುರು 1008 ಆಚಾರ್ಯ ವಸಂತ ವಿಜಯಾನಂದ ಗಿರಿಜಿ ಮಹಾರಾಜ ಅವರು ಮತ್ತೊಂದು ವಿಶ್ವ ದಾಖಲೆ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.


ಕಳೆದ 8 ದಿನಗಳಿಂದ ಪ್ರತಿದಿನ ಬೆಳಗ್ಗೆ ವಿಶೇಷ ಭೈರವ ಆರಾಧನೆ, ಕಷ್ಟಭಂಜನ ಮಹಾಯಜ್ಞ, ಭೈರವ ಮಹಾಪುರಾಣ ಮಹಾಕಥ ಕಾರ್ಯಕ್ರಮಗಳು ಜರುಗಿವೆ. ಭೈರವ ಮಹೋತ್ಸವದ ಐದನೇ ದಿವಸ ಭಾನುವಾರ ಭೈರವ ಮಹಾಯಜ್ಞದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಗಣೇಶ ಪೂಜೆ, ಮಹಾಲಕ್ಷ್ಮಿ ಪೂಜೆ, ಸರಸ್ವತಿ ಪೂಜೆ, ಚಾಮುಂಡೇಶ್ವರಿ ಪೂಜೆ, ಧನವಂತ್ರಿ ಪೂಜೆ, ಹನುಮಂತನ ಪೂಜೆ ನೆರವೇರಿಸಿದ್ದಾರೆ. ಕಡೆಯ ದಿನವಾದ ಬುಧವಾರ ಬೆಳಗ್ಗೆ 10.30ರಿಂದ ವಿಶೇಷ ಭೈರವ ಸಾಧನ, ಮಧ್ಯಾಹ್ನ 3.30ರಿಂದ ಕಷ್ಟ ಭಂಜನ ಮಹಾಯಜ್ಞ ಹಾಗೂ 2025 ವ್ಯಂಜನೆಗಳ ಸಮರ್ಪಣೆ ಮಾಡಲಾಗುವುದು. ಈ ಕಾರ್ಯಕ್ರಮದಲ್ಲಿ ವಿವಿಧ ರಾಜ್ಯಗಳ ಸಾವಿರಾರು ಭಕ್ತರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಗೋಷ್ಠಿಯಲ್ಲಿ ದೀಪಕ್ ಕುಮಾರ್ ಜೈನ್, ಕೃಷ್ಣ ಶಕ್ತಿಪೀಠದ ಡಾ.ಬಿ.ಕೆ.ಅಜಯ್‍ಕುಮಾರ್ ಜೈನ್, ಸಂಕೇಶ್ ಇದ್ದರು.