ಸಂಕ್ರಾತಿ ಬಳಿಕ ೨೦ ಸಾವಿರ ಹೆಲ್ಮೆಟ್ ವಿತರಣೆ

ಮುಳಬಾಗಿಲು,ಜ,೧೨- ಸಂಕ್ರಾಂತಿ ಹಬ್ಬದ ನಂತರ ತಾಲೂಕಿನ ಜನತೆಗೆ ೨೦ ಸಾವಿರ ಹೆಲ್ಮೆಟ್‌ಗಳನ್ನು ಆವಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಆದಿನಾರಾಯಣ ಉಚಿತವಾಗಿ ವಿತರಣೆ ಮಾಡುತ್ತಾರೆಂದು ಕೋಲಾರ ಶಾಸಕ ಕೊತ್ತೂರು ಜಿ.ಮಂಜುನಾಥ್ ತಿಳಿಸಿದರು.


ನಗರದ ನೇತಾಜಿ ಕ್ರೀಡಾಂಗಣದಲ್ಲಿ ಹೆಲ್ಮೆಟ್ ವಿತರಣೆ ಕಾರ್ಯಕ್ರಮ ನಡೆಸಲು ಸ್ಥಳ ಪರಿಶೀಲಿಸಿ ಮಾತನಾಡಿ, ಹಿಂದಿನ ಎಸ್‌ಪಿ ಬಿ.ನಿಖಿಲ್ ಡಿ.೧ರಿಂದ ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯ ಮಾಡಿರುವುದರಿಂದ ಎಲ್ಲಾ ತಾಲೂಕುಗಳಲ್ಲಿ ಈಗಾಗಲೇ ಹೆಲ್ಮೆಟ್‌ಗಳ ವಿತರಣೆ ಮಾಡಲಾಗುತ್ತಿದ್ದು, ಅದೇರೀತಿ ಮುಂದಿನ ೨೦೨೮ರ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ವಿ.ಆದಿನಾರಾಯಣ ಜನರ ಪ್ರಾಣ ಉಳಿಸಲು ಉಚಿತ ಹೆಲ್ಮೆಟ್ ವಿತರಣೆಗೆ ಮುಂದಾಗಿರುವುದು ಶ್ಲಾಘನೀಯ ಎಂದರು.


ಜೀವ ಸಂಜೀವಿನಿ ಆಗಿರುವ ಹೆಲ್ಮೆಟ್‌ಗಳನ್ನು ಪ್ರತಿಯೊಬ್ಬ ದ್ವಿಚಕ್ರವಾಹನ ಸವಾರರು ಕಡ್ಡಾಯವಾಗಿ ತಲೆಗೆ ಧರಿಸಿ ವಾಹನ ಚಾಲನೆ ಮಾಡಬೇಕು ತಮ್ಮ ತಮ್ಮ ಮನೆಗಳಲ್ಲಿ ಕುಟುಂಬ ಸದಸ್ಯರು ನಿಮ್ಮ ಮೇಲೆ ಆದಾರ ಪಟ್ಟಿರುತ್ತಾರೆ ಅವರಿಗೊಸ್ಕರವಾದರೂ ಹೆಲ್ಮೆಟ್‌ಗಳನ್ನು ಧರಿಸಬೇಕೆಂದು ಮನವಿ ಮಾಡಿದರು.


ಕರ್ನಾಟಕ ರಾಜ್ಯದ ರಾಜ್ಯಧಾನಿ ಬೆಂಗಳೂರಿಗೆ ಸಮೀಪದ ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗಳ ಅಭಿವೃದ್ದಿಯಂತೆ ಜಿಲ್ಲಾ ಕೇಂದ್ರವಾಗಿರುವ ಕೋಲಾರದಲ್ಲಿ ೨೫೦೦ ಕೋಟಿ ರೂಗಳ ವೆಚ್ಚದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ನಡೆಸಲಾಗುತಿದ್ದು, ಪ್ರತಿ ಹಳ್ಳಿ ಹಳ್ಳಿಗೂ ರಸ್ತೆಗಳ ಸಂಪರ್ಕ ರಸ್ತೆ ಕಾಮಗಾರಿಗಳನ್ನು ಕೈಗೆತ್ತುಕೊಳ್ಳಲಾಗಿದ್ದು, ಕೋಲಾರವನ್ನು ೬ ತಿಂಗಳ ಒಳಗೆ ಹೈಟೆಕ್ ಸಿಟಿಯಾಗಿ ಅಭಿವೃದ್ದಿ ಮಾಡುವ ಗುರಿ ಹೊಂದಿದ್ದೇನೆಂದು ತಿಳಿಸಿದರು.


ಆವಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಆದಿನಾರಾಯಣ, ಟೌನ್ ಬ್ಲಾಕ್ ಅಧ್ಯಕ್ಷ ಅಮಾನುಲ್ಲ, ಮುಖಂಡರಾದ ಆಲಂಗೂರು ಶಿವಣ್ಣ, ಆರ್.ಆರ್. ರಾಜೇಂದ್ರಗೌಡ, ಗುಜ್ಜನಹಳ್ಳಿ ಮಂಜುನಾಥ್, ಜಮ್ಮನಹಳ್ಳಿ ಕೃಷ್ಣ, ಆಂಜನೇಯರೆಡ್ಡಿ, ವಿ.ಕೆ.ರಾಜು, ಸುಬ್ರಮಣಿ, ಮಲ್ಲಿಕಾರ್ಜುನ ರೆಡ್ಡಿ, ಆರ್.ಎಸ್.ಸುಹಾಸ್ ಶೆಟ್ಟಿ, ಅಮರ್, ಅಭಿಷೇಕ್, ಮುರಳಿ, ಚೋಟೂಸಾಬಿ ಇದ್ದರು.