
ಕಲಬುರಗಿ,ಮೇ.21: ಸೇಡಂ ಮಾರ್ಗವಾಗಿ ಸಂಚರಿಸುವ ಬಸ್ಸುಗಳ ಸುಗಮ ಸಂಚಾರಕ್ಕೆ ಉದ್ದೇಶಿತ ಗುಲಬರ್ಗಾ ವಿ.ವಿ ಬಳಿ ಸ್ಯಾಟಲೈಟ್ ಬಸ್ ನಿಲ್ದಾಣ ನಿರ್ಮಿಸಲು 2 ಎಕರೆ ಜಮೀನು ಕೆ.ಕೆ.ಅರ್.ಟಿ.ಸಿ. ಸಂಸ್ಥೆಗೆ ಮಂಜೂರು ಮಾಡಿದ ಗುಲಬರ್ಗಾ ವಿ.ವಿ. ಸಿಂಡಿಕೇಟ್ ನಿರ್ಧಾರಕ್ಕೆ ಸಂತಸ ವ್ಯಕ್ತಪಡಿಸಿರುವ ಕೆ.ಕೆ.ಆರ್.ಟಿ.ಸಿ ಅಧ್ಯಕ್ಷ ಅರುಣಕುಮಾರ ಪಾಟೀಲ ಅವರು ಬುಧವಾರ ಸಿಂಡಿಕೇಟ್ ಸದಸ್ಯರಿಗೆ ಸತ್ಕರಿಸಿ ಅಭಿನಂದನೆ ಸಲ್ಲಿಸಿದರು.
ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯಿಂದ ಉದ್ದೇಶಿತ ಸೇಡಂ ಮಾರ್ಗದಲ್ಲಿ ಸ್ಯಾಟಲೈಟ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಬೇಕೆಂಬ ಸಂಸ್ಥೆಯ ಪ್ರಸ್ತಾವನೆಗೆ ಗುಲಬರ್ಗಾ ವಿ.ವಿ. ಸಿಂಡಿಕೇಟ್ ಸಮಿತಿಯು ಸಾರ್ವಜನಿಕ ಹಿತಾಸಕ್ತಿ ಮತ್ತು ಜನಸೇವೆಯ ದೃಷ್ಟಿಯಿಂದ ಜಮೀನು ಮಂಜೂರಾತಿಗೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇದು ಕಲಬುರಗಿ ನಗರದ ಸಾರಿಗೆ ವ್ಯವಸ್ಥೆಗೆ ಹೊಸ ದಿಕ್ಕು ನೀಡಲಿದೆ. ವಿದ್ಯಾರ್ಥಿಗಳು, ಪ್ರಯಾಣಿಕರು ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ ಎಂದು ಅರುಣಕುಮಾರ ಪಾಟೀಲ ಧನ್ಯವಾದ ತಿಳಿಸಿದರು.
ಇನ್ನು ಜಮೀನು ಮಂಜೂರಾತಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಉನ್ನತ ಶಿಕ್ಷಣ ಸಚಿವರು ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಸಮ ಕುಲಾಧಿಪತಿ ಎಂ.ಸಿ.ಸುಧಾಕರ್, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಕನೀಜ್ ಫಾತಿಮಾ ಅವರ ಸಹಕಾರ ಹಾಗೂ ಬೆಂಬಲ ಮತ್ತು ಸಹಕಾರವನ್ನು ಅಧ್ಯಕ್ಷರು ಇದೇ ಸಂದರ್ಭದಲ್ಲಿ ಕೊಂಡಾಡಿದರು.
ನಿಗಮದಿಂದ ಸ್ಯಾಟಲೈಟ್ ಬಸ್ ನಿಲ್ದಾಣ ನಿರ್ಮಾಣಗೊಂಡ ಬಳಿಕ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸಂಚಾರಕ್ಕೆ ಮತ್ತಷ್ಟು ಅನುಕೂಲ ಒದಗಿಸುವ ಮತ್ತು ವಿಶ್ವವಿದ್ಯಾಲಯಕ್ಕೆ ಪ್ರತ್ಯೇಕ ಬಸ್ ಸೇವೆ ಕಲ್ಪಿಸುವ ಭರವಸೆಯನ್ನು ನಿಗಮದ ಅಧ್ಯಕ್ಷ ಅರುಣಕುಮಾರ ಎಮ್. ವಾಯ್. ಪಾಟೀಲ ವಿ.ವಿ.ಗೆ ನೀಡಿದರು. ಅಲ್ಲದೆ ಸಿಂಡಿಕೇಟ್ ಸದಸ್ಯರು ನೀಡಿದ ಪ್ರಮುಖ ಸಲಹೆಗಳನ್ನು ಸಹ ಪರಿಗಣನೆಗೆ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು ಹಾಗೂ ಕುಲಪತಿ ಪೆÇ್ರ. ಶಶಿಕಾಂತ ಎಸ್. ಉಡಿಕೇರಿ, ರಿಜಿಸ್ಟ್ರಾರ್ ರಮೇಶ್ ಲಂಡನ್ಕರ್, ಮೌಲ್ಯಾಮಾಪನ ವಿಭಾಗದ ಕುಲಸಚಿವ ನಿಂಗಪ್ಪ ಕಣ್ಣೂರ್, ವಿತ್ತಾಧಿಕಾರಿ ಜಯಾಂಬಿಕಾ, ಸಿಂಡಿಕೇಟ್ ಸದಸ್ಯರುಗಳಾದ ಉದಯ್ ಕಾಂತ್ ಪಾಟೀಲ, ಪೀರ್ ಜಾದ್ ಫಹಿಮುದ್ದೀನ್, ಮಲ್ಲಣ್ಣ ಎಸ್. ಮಡಿವಾಳ, ರಾಘವೇಂದ್ರ ಎಂ. ಭೈರಪ್ಪ, ಸಿದ್ದಪ್ಪ ಸುಳ್ಳದ ಉಪಸ್ಥಿತರಿದ್ದರು.






















