
ಸಂಜೆವಾಣಿ ನ್ಯೂಸ್
ಮೈಸೂರು.ಫೆ.03:- ದಿನಾಂಕ 31-01-2026ರ ಶನಿವಾರದಂದು ಸಂತ ಫಿಲೋಮಿನಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಯೂತ್ ರೆಡ್ ಕ್ರಾಸ್ ಘಟಕಗಳ ಸಹಯೋಗದಲ್ಲಿ ಒಂದು ದಿನದ ಪ್ರವಾಸವನ್ನು ಹಮ್ಮಿಕೊಳ್ಳಲಾಗಿತ್ತು. ಚಿಕ್ಕಮಗಳೂರಿನ ಚಾರಣಕ್ಕೆ ಪ್ರಸಿದ್ಧ ಪ್ರವಾಸಿ ತಾಣವಾದ ಎತ್ತಿನ ಭುಜ ಸ್ಥಳಕ್ಕೆ ಭೇಟಿ ನೀಡಲಾಯಿತು. ಸುಂದರ ಪಶ್ಚಿಮ ಘಟ್ಟಗಳಲ್ಲಿ ಇರುವ ಈ ಸ್ಥಳವು ಎಲ್ಲರ ಮನಸೂರೆಗೊಂಡಿತು. ಸುಮಾರು 2 ಕಿಲೋಮೀಟರ್ ನ ನಡಿಗೆ, ಚಾರಣ ವಿದ್ಯಾರ್ಥಿಗಳಲ್ಲಿ ಹೊಸ ಹುರುಪು ಮತ್ತು ಲವಲವಿಕೆಯನ್ನು ಉಂಟು ಮಾಡಿತು. ಗುಂಪುಗಳಾಗಿ ವಿಭಾಗಿಸಲ್ಪಟ್ಟ ಸ್ವಯಂ ಸೇವಕರು ಅಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಿದರು. ನಂತರ ಅಲ್ಲಿನ ಇತಿಹಾಸ ಪ್ರಸಿದ್ಧ ಕಾಲಭೈರವೇಶ್ವರ ದೇವಾಲಯಕ್ಕೆ ಭೇಟಿ ನೀಡಲಾಯಿತು. ಸಮೀಪದ ಅಬ್ಬಿ ಜಲಪಾತದಲ್ಲಿ ಮಿಂದು, ಆಟವಾಡಿ ವಿದ್ಯಾರ್ಥಿಗಳು ಸಂಭ್ರಮಿಸಿದರು.
ಈ ಪ್ರವಾಸಕ್ಕೆ ಕಾಲೇಜಿನ ರೆಕ್ಟರ್ ಅವರಾದ ಡಾ.ಲೂರ್ದ್ ಪ್ರಸಾದ್ ಜೋಸೆಫ್, ಆಡಳಿತಾಧಿಕಾರಿಗಳಾದ ರೆ.ಜ್ಞಾನಪ್ರಗಾಸಂ, ಸಹಾಯಕ ರೆಕ್ಟರ್ ಅವರಾದ ಡೇವಿಡ್ ಸಗಾಯಿರಾಜ್, ಪ್ರಾಂಶುಪಾಲರಾದ ಡಾ.ರವಿ ಜೆ.ಡಿ ಸಲ್ಡಾನ್ಹಾ ಇವರುಗಳು ಶುಭ ಕೋರಿದರು.
ಈ ಪ್ರವಾಸದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿಗಳಾದ ಶ್ರೀಯುತ ಜಾನ್ಸನ್ ಅರುಳ್ ರಾಜ್, ಯೂತ್ ರೆಡ್ ಕ್ರಾಸ್ ನ ಸಂಚಾಲಕರಾದ ಶ್ರೀಯುತ ಮ್ಯಾಥ್ಯೂ, ಅಧ್ಯಾಪಕರಾದ ಡಾ.ಶಿವರಾಜು ಎಸ್, ಜೆನಿಫರ್ ಪ್ರಿಯ, ಪೂಜಾ ಎಚ್.ಆರ್, ಪ್ರಿಯಾಂಕ ಒಲಿವೆರ, ಅಜಯ್ ಅಂತೋಣಿ ಇವರುಗಳು ಭಾಗವಹಿಸಿದ್ದರು.



























