
ಮಧುಗಿರಿ, ಸೆ. ೩- ತಾಲ್ಲೂಕಿನಲ್ಲಿ ೧೮ ಸಾವಿರಕ್ಕೂ ಹೆಚ್ಚು ಪೌತಿ ಖಾತೆ ಪ್ರಕರಣಗಳು ಬಾಕಿ ಇದ್ದು, ಇವೆಲ್ಲವನ್ನೂ ಪೌತಿ ಖಾತೆ ಆಂದೋಲನದ ಮೂಲಕ ಹಂತ ಹಂತವಾಗಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಹಶೀಲ್ದಾರ್ ನಂದಿನಿ ತಿಳಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಹಂತದಲ್ಲಿ ೬ ಹೋಬಳಿಗಳ ೬ ಗ್ರಾ.ಪಂ ವ್ಯಾಪ್ತಿಯಲ್ಲಿ ಪೌತಿ ಖಾತೆ ಆಂದೋಲನ ಹಮ್ಮಿಕೊಳ್ಳಲಾಗಿದೆ. ಸೆ. ೭ ಬಿಜವರ, ಸೆ. ೧೦ ಗೊಂದಿಹಳ್ಳಿ ಸೆ. ೧೫ ಬ್ರಹಸಮುದ್ರ, ಸೆ. ೧೭ ರಂದು ಹೊಸಕೆರೆ ಗ್ರಾಮದಲ್ಲಿ ಪೌತಿ ಖಾತೆ ಆಂದೋಲನ ಹಮ್ಮಿಕೊಳ್ಳಲಾಗಿದೆ. ವಿಎಗಳಿಗೆ ದಿನಕ್ಕೆ ಎರಡು ಪೌತಿ ಖಾತೆ ಮಾಡಲು ನಿರ್ದೇಶನ ನೀಡಲಾಗಿದೆ ಎಂದರು.
ಪ್ರತೀ ತಿಂಗಳು ಮೊದಲನೇ ಶನಿವಾರ ಜಿಲ್ಲಾ ಮಟ್ಟದ ಜನಸ್ಪಂದನ ಕಾರ್ಯಕ್ರಮ ನಡೆಸಲು ಸರ್ಕಾರದ ವತಿಯಿಂದ ಸೂಚನೆ ನೀಡಲಾಗಿದ್ದು, ಜಿಲ್ಲಾ ಹಂತದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಧುಗಿರಿ ತಾಲ್ಲೂಕಿನಲ್ಲೂ ಸೆ. ೫ ರಂದು ಶಾಸಕ ಕೆ.ಎನ್. ರಾಜಣ್ಣ ರವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಕಚೇರಿ ಆವರಣದಲ್ಲಿ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
































