ಕಳವಾದ 173 ಮೊಬೈಲ್ ಪತ್ತೆ ಹಚ್ಚಿ ವಾರುಸುದಾರರಿಗೆ ಹಸ್ತಾಂತರ

ಕಲಬುರಗಿ,ಜ.16-ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳವಾದ, ಮರೆತು ಹೋದ ಹಾಗೂ ಕಾಣೆಯಾದ ಸುಮಾರು 173 ಮೊಬೈಲ್‍ಗಳನ್ನು ಪತ್ತೆ ಹಚ್ಚಿ ಅವುಗಳನ್ನು ಇಂದು ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಎಸ್‍ಪಿ ಕಚೇರಿಯಲ್ಲಿ ಇಂದು ಎಸ್‍ಪಿ ಅಡ್ಡೂರು ಶ್ರೀನಿವಾಸಲು ವಾರಸುದಾರರಿಗೆ ಮೊಬೈಲ್ ಫೋನ್‍ಗಳನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳವಾದ, ಮರೆತು ಹೋದ ಹಾಗೂ ಕಾಣೆಯಾದ ಮೊಬೈಲ್‍ಗಳ ಬಗ್ಗೆ ಅವುಗಳ ವಾರಸುದಾರರು ಕೇಂದ್ರ ಸರ್ಕಾರದ ದೂರ ಸಂಪರ್ಕ ಇಲಾಖೆ ಜಾರಿಗೆ ತಂದಿರುವ ಸೆಂಟ್ರಲ್ ಇಕ್ವಿಪಮೆಂಟ್ ಐಡೆಂಟಿಟಿ ರೆಜಿಸ್ಟರ್ (ಸಿಇಐಆರ್) ಪೋರ್ಟಲ್‍ನಲ್ಲಿ ದೂರು ಸಲ್ಲಿಸಿದ್ದರು.
ಈ ದೂರಿನ ಅನ್ವಯ ಡಿಸಿಪಿಗಳ ಮಾರ್ಗದರ್ಶನದಲ್ಲಿ ಆಯಾ ಪೊಲೀಸ್ ಠಾಣೆಗಳ ಪಿಎಸ್‍ಐ ಹಾಗೂ ಪಿಐಗಳ ಮುಂದಾಳತ್ವದಲ್ಲಿ ಸಿಇಐಆರ್ ಪೋರ್ಟಲ್ ಕರ್ತವ್ಯ ಸಿಬ್ಬಂದಿಗಳು ಮತ್ತು ಸೈಬರ್ ಅಪರಾಧ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ಸಹಾಯದಿಂದ 173 ಮೊಬೈಲ್‍ಗಳನ್ನು ಪತ್ತೆ ಹಚ್ಚಿ ಅವುಗಳ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಸಾರ್ವಜನಿಕರು ತಮ್ಮ ಮೊಬೈಲ್ ಕಳೆದು ಹೋದಲ್ಲಿ ಸಿಇಐಆರ್ ಪೋರ್ಟಲ್‍ನಲ್ಲಿ ದೂರು ಸಲ್ಲಿಸಬೇಕು ಎಂದು ಮನವಿ ಮಾಡಿದರು.
ಕಳವಾದ ಮೊಬೈಲ್ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ಅವರು ಶ್ಲಾಘಿಸಿದರು.