ನ. 30 ರಂದು ಬೀದರನಲ್ಲಿ ಸಂಭಾಜಿ ಬ್ರಿಗೇಡ್‍ನ 16ನೇ ವಾರ್ಷಿಕೋತ್ಸವ: ಮನೋಜ ಆಖರೆ

ಬೀದರ:ಸೆ.13: ಈ ವರ್ಷದ ನವೆಂಬರ್ 30 ರಂದು ಬೀದರನಲ್ಲಿ ಸಂಭಾಜಿ ಬ್ರಿಗೇಡ್ ಸಂಘಟನೆ ವತಿಯಿಂದ ರಾಷ್ಟ್ರಮಟ್ಟದ 16ನೇ ವರ್ಷಾಚರಣೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇದನ್ನು ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ತೀರ್ಮಾನಿಸಿದೆ ಎಂದು ಬ್ರಿಗೇಡ್‍ನ ರಾಷ್ಟ್ರೀಯ ಅಧ್ಯಕ್ಷ ಮನೋಜ ಆಖರೆ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಸಂಭಾಜಿ ಬ್ರಿಗೇಡ್ ಸಂಘಟನೆಯು ಶಾಹು ಮಹಾರಾಜ್, ಛತ್ರಪತಿ ಶಿವಾಜಿ ಮಹಾರಾಜ, ಮಹಾತ್ಮ ಜ್ಯೋತಿಬಾ ಫುಲೆ, ಮಹಾತ್ಮ ಬಸವೇಶ್ವರ, ಡಾ. ಬಿ.ಆರ್.ಅಂಬೇಡ್ಕರ್, ಅಣ್ಣಾಭಾವು ಸಾಠೆ, ಮಹಾತ್ಮ ಚಕ್ರಧರ ಸ್ವಾಮಿ, ಸಂತ ತುಕಾರಾಮ, ಸಂತ ನಾಮದೇವ ಮಹಾರಾಜ್ ಇವರ ವಿಚಾರಧಾರೆಗಳನ್ನಿಟ್ಟುಕೊಂಡು ಮಹಾರಾಷ್ಟ್ರ ಸೇರಿದಂತೆ ಕರ್ನಾಟಕ, ಆಂಧ್ರಪ್ರದೇಶ, ಮಧ್ಯಪ್ರದೇಶ, ಹರಿಯಾಣ ಹಾಗೂ ಇತರೆ ರಾಜ್ಯಗಳಲ್ಲಿ ರೈತರು, ಯುವಜನರು, ಮಹಿಳೆಯರಿಗಾಗಿ ಬ್ರಿಗೇಡ್ ಕಾರ್ಯತತ್ಪರವಾಗಿದೆ. ಶಿಕ್ಷಣ, ಆರೋಗ್ಯ, ಆರ್ಥಿಕ, ರಾಜಕೀಯ ಮತ್ತು ಧಾರ್ಮಿಕವಾಗಿ ಈ ಪಂಚ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ವರ್ಷ ಆಚರಿಸುವ ಕಾರ್ಯಕ್ರಮದ ಮುಖೇನ ಕರ್ನಾಟಕ ರಾಜ್ಯದಲ್ಲಿ ಮರಾಠಾ ಸಮಾಜವನ್ನು ಮಹಾರಾಷ್ಟ್ರ ರಾಜ್ಯದ ಓಬಿಸಿ ಮಾದರಿಯಲ್ಲಿ ಇಲ್ಲಿಯೂ ಸಹ 2ಎ ಪ್ರವರ್ಗಕ್ಕೆ ಸೇರ್ಪಡೆ ಮಾಡಬೇಕು. ಈಗಾಗಲೇ ಬೆಂಗಳೂರಿನ ಶಿವಾಜಿ ನಗರ ಮೆಟ್ರೋ ಸ್ಟೇಷನ್ ಹೆಸರು ಬದಲಿಸಲು ಹೊರಟಿರುವ ರಾಜ್ಯ ಸರ್ಕಾರವು ಅದನ್ನು ಕೈಬಿಟ್ಟು ಛತ್ರಪತಿ ಶಿವಾಜಿ ಮಹಾರಾಜ ಹೆಸರನ್ನೇ ಮುಂದುವರೆಸಬೇಕು. ದಾವಣಗೆರೆ ಜಿಲ್ಲೆಯ ಹುದಗಿರಿಯಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ತಂದೆ ಶಹಾಜಿ ರಾಜೆ ಮಹಾರಾಜರ ಸಮಾಧಿಯನ್ನು ಸ್ಮಾರಕವನ್ನಾಗಿ ಪರಿವರ್ತಿಸಬೇಕು. ಜೊತೆಗೆ ತಾಯಿ ಜೀಜಾಬಾಯಿ, ಶಿವಾಜಿ ಹಾಗೂ ಶಹಾಜಿ ರಾಜೆ ಅವರ ಹೆಸರಿನಲ್ಲಿ ಮ್ಯೂಜಿಯಂ ಸ್ಥಾಪಿಸಬೇಕು. ಈ ವರ್ಷ ರಾಜ್ಯದಲ್ಲಿ ಸಂಪೂರ್ಣ ಬೆಳೆ ನಾಶವಾಗಿದ್ದು ಪ್ರತೀ ಹೆಕ್ಟೆರ್‍ಗೆ ತಲಾ ರೂ. 50 ಸಾವಿರ ಪರಿಹಾರ ನೀಡಬೇಕು. ಈ ಪ್ರಮುಖ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಅಂದಿನ ಕಾರ್ಯಕ್ರಮದಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬ್ರಿಗೇಡ್ ಜಿಲ್ಲಾಧ್ಯಕ್ಷ ಸತೀಶ ವಾಸರೆ ಮಾತನಾಡಿದರು. ಗಜಾನಂದ ಭೋಯರ್, ಸಂಕೇತ ಪಾಟೀಲ, ಜೆಜೆರಾವ ಪಾಟೀಲ, ಸತೀಷ ಪಾಟೀಲ ಮಹಾಗಾಂವಕರ್, ಸಂಜೀವಕುಮಾರ ಪಾಟೀಲ, ದತ್ತಾ ಪಾಟೀಲ, ರಾಮ ರಾವಣಗಾವೆ, ಗೋವಿಂದ ಪಾಟೀಲ, ರತಿಕಾಂತ ಬಿರಾದಾರ, ದತ್ತಾತ್ರೇಯ ಪಾಟೀಲ, ಸಂತೋಷ ಪಾಟೀಲ, ಸಂತೋಷ ಬಿರಾದಾರ, ಅಂಕುಶ ಪಾಟೀಲ, ದತ್ತಾ ಚೌಪಡೆ, ಪ್ರಶಾಂತ ಬಿರಾದಾರ, ಜ್ಞಾನೇಶ್ವರ ಸಗರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.