ಶಿವಮೊಗ್ಗ,ಆ.೧೫- ರಾಜ್ಯಾದ್ಯಂತ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಅಂದಾಜು ೧೬೦೦೦ ಶಿಕ್ಷಕರ ನೇಮಕಾತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿದ್ದಾರೆ.
೨೦೨೫-೨೬ನೇ ಸಾಲಿನಲ್ಲಿ ಪ್ರಥಮ ಬಾರಿಗೆ ರಾಜ್ಯದ ೫೦೦೦ ಸರ್ಕಾರಿ ಶಾಲೆಗಳಲ್ಲಿ ಎಲ್‌ಜಿ ಮತ್ತು ಯುಕೆಜಿ ತರಗತಿಗಳು, ೪೦೦೦ ಸರ್ಕಾರಿ ಶಾಲೆಗಳಲ್ಲಿ ದ್ವಿ-ಭಾಷಾ ತರಗತಿಗಳನ್ನು ಹಾಗೂ ರಾಜ್ಯದಲ್ಲಿ ೫೦೦ ಶಾಲೆಗಳನ್ನು ಕೆ.ಪಿ.ಎಸ್ ಶಾಲೆಗಳಾಗಿ ಉನ್ನತೀಕರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು
ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಅವರು ರಾಜ್ಯಾದ್ಯಂತ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಅಂದಾಜು ೧೬೦೦೦ ಶಿಕ್ಷಕರ ನೇಮಕಾತಿಗೆ ಕ್ರಮವಹಿಸಲಾಗುತ್ತಿದೆ ಎಂದರು
ಶಿಕ್ಷಣ ಇಲಾಖೆಯಲ್ಲಿ ಒಂದೇ ಸೂರಿನಡಿಯಲ್ಲಿ ಎಲ್.ಕೆ.ಜಿ ಯಿಂದ ದ್ವಿತೀಯ ಪಿ.ಯು.ಸಿ ವರೆಗೂ ವಿದ್ಯಾಭ್ಯಾಸ ನೀಡುವ ಸಲುವಾಗಿ ಜಿಲ್ಲೆಯಲ್ಲಿ ೧೧ ಕೆ.ಪಿ.ಎಸ್ ಶಾಲೆಗಳನ್ನು ನಡೆಸಲಾಗುತ್ತಿದೆ. ಜಿಲ್ಲೆಯ ೧೭ ರಿಂದ ೨೦ ಶಾಲೆಗಳನ್ನು ಕೆ.ಪಿ.ಎಸ್ ಶಾಲೆಗಳನ್ನಾಗಿ ಉನ್ನತೀಕರಿಸಲು ಯೋಜಿಸಲಾಗಿದೆ. ಜಿಲ್ಲೆಗೆ ಬಜೆಟ್‌ನಲ್ಲಿ ಹಿಂದುಳಿದ ವರ್ಗಗಳ ಇಲಾಖೆಯಿಂದ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ೨ ವಸತಿ ನಿಲಯಗಳನ್ನು ಘೋಷಿಸಲಾಗಿದೆ ಎಂದು ಹೇಳಿದರು
ರಾಜ್ಯ ಸರ್ಕಾರ ಅತ್ಯಂತ ಜನಪ್ರಿಯ ಗ್ಯಾರಂಟಿ ಯೋಜನೆಗಳನ್ನು ಕಡಿಮೆ ಅವಧಿಯಲ್ಲಿ ಜಾರಿಗೊಳಿಸಿದೆ. ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಜನರಿಗೆ ತಲುಪಿದ್ದು, ಜನರ ಜೀವನದಲ್ಲಿ ಸುಧಾರಣೆ ಕಾಣಬಹುದಾಗಿದೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಪ್ರತಿ ಕುಟುಂಬಕ್ಕೆ ವಾರ್ಷಿಕವಾಗಿ ಅಂದಾಜು ರೂ.೫೦,೦೦೦ಕ್ಕೂ ಅಧಿಕ ಮೊತ್ತದ ಆರ್ಥಿಕ ಸೌಲಭ್ಯ ನೇರವಾಗಿ ದೊರೆಯುತ್ತಿದೆ ಎಂದರು
ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಸ್ತುತ ದ್ವಿ-ಭಾಷಾ ಮಾಧ್ಯಮ ಶಾಲೆಗಳಿಗೆ ಗಣನೀಯವಾಗಿ ಬೇಡಿಕೆ ಹೆಚ್ಚಿದೆ. ಇದರ ಅನ್ವಯ, ಹಾಲಿ ಶೈಕ್ಷಣಿಕ ಸಾಲಿನಲ್ಲಿ ಒಟ್ಟು ೧೭೧ ದ್ವಿ-ಭಾಷಾ ಮಾಧ್ಯಮ ಶಾಲೆಗಳನ್ನು ತೆರೆಯಲು ಸರ್ಕಾರದಿಂದ ಅನುಮತಿ ನೀಡಲಾಗಿದೆ. ಸರ್ಕಾರದ ಈ ನಿರ್ಧಾರದ ಫಲವಾಗಿ, ಹೆಚ್ಚಿನ ಸಂಖ್ಯೆಯ ಮಕ್ಕಳು ಸರ್ಕಾರಿ ಶಾಲೆಗಳ ಕಡೆಗೆ ಆಕರ್ಷಿತರಾಗಿದ್ದಾರೆ ಎಂದು ಹೇಳಿದರು.
ಗೃಹಲಕ್ಷ್ಮಿಯೋಜನೆಯಿಂದ ಜಿಲ್ಲೆಯ ೩,೮೭,೬೩೮ ಫಲಾನುಭವಿಗಳಿಗೆ ರೂ. ೧೫೬೭.೭೪ ಕೋಟಿಗಳನ್ನು ಡಿಬಿಟಿ ಮೂಲಕ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದರು
ಶಕ್ತಿ ಯೋಜನೆ ಅಡಿಯಲ್ಲಿ ಶಿವಮೊಗ್ಗ ಜಿಲ್ಲೆಯ ೬.೩೨ ಕೋಟಿ ಮಹಿಳಾ ಪ್ರಯಾಣಿಕರು ಇದುವರೆಗೆ ಪ್ರಯಾಣಿಸಿ, ಈ ಯೋಜನೆಯ ಲಾಭಪಡೆದಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ಈ ವರೆಗೆ ಜಿಲ್ಲೆಯಲ್ಲಿ ೩,೫೨,೮೪೦ ಲಕ್ಷ ಪಡಿತರ ಕಾರ್ಡುದಾರರಿಗೆ ರೂ. ೩೫೯.೯೭ ಕೋಟಿ ಹಣವನ್ನು ಡಿಬಿಟಿ ಮೂಲಕ ಜಮಾ ಮಾಡಲಾಗಿದೆ. ಈ ವರ್ಷದ ಫೆಬ್ರವರಿಯಿಂದ ೧೦ಕೆಜಿ ಅಕ್ಕಿಯನ್ನು ಪಡಿತರ ಚೀಟಿದಾರರಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು
ಗೃಹ ಜ್ಯೋತಿ ಯೋಜನೆಯಡಿ ಇದುವರೆವಿಗೂ ೪.೬೯ ಲಕ್ಷ ಕುಟುಂಬಗಳು ಸೌಲಭ್ಯ ಪಡೆಯುತ್ತಿದ್ದು, ಸರ್ಕಾರ ವಿದ್ಯುತ್ ಸಬ್ಸಿಡಿಗಾಗಿ ಮೊತ್ತ ರೂ. ೪೮೧.೦೪ ಕೋಟಿ ವೆಚ್ಚ ಮಾಡಲಾಗಿದೆ.ಶಿವಮೊಗ್ಗದಿಂದಲೇ ಯುವನಿಧಿ ಯೋಜನೆಗೆ ಮಾನ್ಯ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ನವರು ಹಾಗೂ ಉಪ ಮುಖ್ಯ ಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರು ಚಾಲನೆ ನೀಡಿದರು. ಇದುವರೆವಿಗೂ ಈ ಯೋಜನೆಯಡಿ ಜಿಲ್ಲೆಯ ೬೮೯೪ ವಿದ್ಯಾರ್ಥಿಗಳಿಗೆ ರೂ.೧೭.೮೮ ಕೋಟಿಯನ್ನು ಅವರ ಖಾತೆಗಳಿಗೆ ಜಮಾಮಾಡಲಾಗಿದೆ ಎಂದರು
ಈ ಬಾರಿ ಉತ್ತಮ ಮಳೆಯಿಂದಾಗಿ ಜಿಲ್ಲೆಯ ಕೆರೆ, ಕಾಲುವೆಗಳಲ್ಲಿ ನೀರು ತುಂಬಿ, ಕೃಷಿ ಚಟುವಟಿಕೆಗೆ ಅನುಕೂಲವಾಗಿದೆ. ಇದರಿಂದಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಜಿಲ್ಲೆಗೆ ನೂತನವಾಗಿ ೫ ಪಶು ಚಿಕಿತ್ಸಾಲಯ ಕಟ್ಟಡಗಳನ್ನು ಮಂಜೂರು ಮಾಡಲಾಗಿದೆ. ಶೀಘ್ರದಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಹೇಳಿದರು.




























