15 ದಿನಗಳೊಳಗೆ ಖಾತೆ ಅರ್ಜಿ ಇತ್ಯರ್ಥಪಡಿಸಿ

ಸಂಜೆವಾಣಿ ನ್ಯೂಸ್
ಮೈಸೂರು: ಡಿ.05:-
ಹಲವು ದಿನಗಳಿಂದ ಸಕಾರಣವಿಲ್ಲದೆ ಬಾಕಿ ಉಳಿಸಿಕೊಂಡಿರುವ ಖಾತೆ ಅರ್ಜಿಗಳನ್ನು ಹದಿನೈದು ದಿನಗಳೊಳಗೆ ಇತ್ಯರ್ಥಪಡಿಸಬೇಕು. ಸಣ್ಣಪುಟ್ಟ ಕೆಲಸಕ್ಕೂ ಕಚೇರಿಗೆ ಅಲೆಯದಂತೆ ನಿಗಧಿತ ಸಮಯದಲ್ಲಿ ಪರಿಹರಿಸಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಗಡುವು ನೀಡಿದರು.


ನಗರದ ಹೊರವಲಯದ ರಮ್ಮನಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಗುರುವಾರ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ರಮ್ಮನಹಳ್ಳಿ ಪ.ಪಂ ವ್ಯಾಪ್ತಿಯಲ್ಲಿ ನಿವೇಶನ, ಮನೆಗಳ ಖಾತೆಗಾಗಿ ಅರ್ಜಿ ಸಲ್ಲಿಸಿ ಸುಮಾರು ದಿನಗಳಾಗಿವೆ. 399 ಖಾತೆಗಾಗಿ ಬಾಕಿ ಉಳಿದಿದೆ. ಅಧಿಕಾರಿಗಳು ಮೂಲ ದಾಖಲೆಗಳನ್ನು ಪರಿಶೀಲಿಸುವುದು, ನಿಯಮಾನುಸಾರವಾಗಿ ಇರುವ ಅರ್ಜಿಗಳ ಖಾತೆ ಮಾಡಿಕೊಡಬೇಕು ಎಂದು ಸೂಚಿಸಿದರು. ಖಾತೆ ಮಾಡಿಕೊಡದಿದ್ದರೆ ಸಾರ್ವಜನಿಕರು ಪರಿತಪಿಸುತ್ತಾರೆ. ಖಾತೆ ಇಲ್ಲದಿದ್ದರೆ ಮುಂದಿನ ಪ್ರಕ್ರಿಯೆಗಳಿಗೆ ತೊಡಕಾಗಲಿದೆ. ಮುಖ್ಯಾಧಿಕಾರಿ, ಕಂದಾಯಾಧಿಕಾರಿ ಹದಿನೈದು ದಿನಗಳಲ್ಲಿ ಸಾಧ್ಯವಾದಷ್ಟು ಖಾತೆ ಮುಗಿಸುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಸಾರ್ವಜನಿಕರು ಖಾತೆಗೆ ಅರ್ಜಿ ಸಲ್ಲಿಸಿದಾಗ ದಾಖಲೆಗಳನ್ನು ಪರಿಶೀಲಿಸಬೇಕು. ಖಾತೆ ಮಾಡಿಕೊಡಲು ವಿಳಂಬ ಮಾಡುವುದು, ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಯಾವ ಸಿಬ್ಬಂದಿ ಅನಗತ್ಯವಾಗಿ ವಿಳಂಬ ಮಾಡಿದ ಬಗ್ಗೆ ದೂರು ಬಂದರೆ ಮುಲಾಜಿಲ್ಲದೆ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಸಿದರು.


ಗಾ.್ರಪಂನಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೇಗೇರಿಸಲಾಗಿದೆ. ಈಗ ಗ್ರೇಡ್-1 ಮೈಸೂರು ರಚನೆಯಾಗಲಿದೆ. ಎಷ್ಟು ಖಾಸಗಿ ಬಡಾವಣೆಗಳು, ಕಂದಾಯ ಮನೆಗಳು, ಗ್ರಾಮಗಳು ಎಷ್ಟು ಇದೆ. ಅದೇ ರೀತಿ ಪ.ಪಂ ವ್ಯಾಪ್ತಿಯಲ್ಲಿ ಕಂದಾಯ ವಸೂಲಿಗಾರರು, ವಾಟರ್‍ಮನ್‍ಗಳು, ಪೌರ ಕಾರ್ಮಿಕರು ಎಷ್ಟು ಜನರಿದ್ದಾರೆ, ಯಾರ್ಯಾರಿಗೆ ಯಾವ ಜವಾಬ್ದಾರಿ ಕೊಡಲಿದೆ ಎಂಬುದರ ಪಟ್ಟಿ ತಯಾರಿಸಬೇಕು. ಮುಂದಿನ ಸಭೆಗೆ ಸಂಪೂರ್ಣ ವಿವರಗಳೊಂದಿಗೆ ಮಂಡಿಸಬೇಕು ಎಂದು ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.


ಸಾರ್ವಜನಿಕರ ಅಹವಾಲು ಸ್ವೀಕಾರ: ತಮ್ಮನ್ನು ಭೇಟಿ ಮಾಡಿ ಮನವಿ ಮಾಡಿದ ಸಾರ್ವಜನಿಕರ ದೂರುಗಳನ್ನು ಶಾಸಕರು ಆಲಿಸಿದರು. ಗ್ರಾಮಗಳ ಮೂಲ ಸೌಕರ್ಯ ನೀಗಿಸಲು ಕಷ್ಟಪಟ್ಟು ಗ್ರೇಡ್-1 ಮೈಸೂರು ಪಾಲಿಕೆಯನ್ನಾಗಿ ಮಾಡಿ ಸೇರಿಸಲು ತೀರ್ಮಾನ ಮಾಡಿಸಿದ್ದೇನೆ. ಖಾತೆ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಪಾಲಿಕೆಗೆ ಹಸ್ತಾಂತರವಾದ ಮೇಲೆ ಎಲ್ಲಾ ಕೆಲಸಗಳು ಸುಲಲಿತವಾಗಿ ನಡೆಯಲಿದೆ ಎಂದು ಭರವಸೆ ನೀಡಿದರು.


ಶೀಘ್ರದಲ್ಲೇ ಟೆಂಡರ್: ರಮ್ಮನಹಳ್ಳಿ ಪಪಂ ವ್ಯಾಪ್ತಿಯ ಗ್ರಾಮಗಳು, ಬಡಾವಣೆಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಹತ್ತು ಕೋಟಿ ರೂಪಾಯಿ ಬಿಡುಗಡೆ ಆಗಿದ್ದು, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭಿಸಬೇಕು. ಕುಡಿಯುವ ನೀರಿನ ಪೈಪ್‍ಲೈನ್, ಒಳಚರಂಡಿ ಪೈಪ್‍ಲೈನ್, ಚರಂಡಿ ಕಾಮಗಾರಿಯನ್ನು ಟೆಂಡರ್ ಪ್ರಕ್ರಿಯೆ ಮುಗಿದ ತಕ್ಷಣವೇ ಪ್ರಾರಂಭಿಸಬೇಕು. ಕಾವೇರಿ ನದಿ ನೀರನ್ನು ಒದಗಿಸಬೇಕಾದರೆ ಪೈಪ್‍ಲೈನ್ ಅಳವಡಿಸಬೇಕಾಗಿದೆ. ಈ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಗಮನಹರಿಸಲಾಗಿದೆ ಮುಂದಿನ ದಿನಗಳಲ್ಲಿ ಉಂಡುವಾಡಿ ಯೋಜನೆಯಿಂದ ಕುಡಿಯುವ ನೀರು ಯೋಜನೆ ಆರಂಭವಾದ ಮೇಲೆ ದಿನದ 24ಗಂಟೆಗಳ ಕಾಲ ನೀರು ಹರಿಯಲಿದೆ. ಈಗಿನಿಂದಲೇ ಯಾವ್ಯಾವ ಪ್ರದೇಶಗಳಿಗೆ ಯಾವ ರೀತಿಯಲ್ಲಿ ಪೈಪ್‍ಲೈನ್ ಅಳವಡಿಸಬೇಕು ಎಂಬುದರ ಕುರಿತು ಪ್ಲಾನ್ ಮಾಡಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಸಲಹೆ ನೀಡಿದರು.


ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾಧಿಕಾರಿ ವಿ.ಪ್ರಿಯದರ್ಶಿನಿ, ಆಡಳಿತಾಧಿಕಾರಿ ಮಹೇಶ್ ಕುಮಾರ್, ಮುಖ್ಯಾಧಿಕಾರಿ ಎಸ್.ಎನ್.ರವಿಕೀರ್ತಿ ಸೇರಿದಂತೆ ಮತ್ತಿತರರು ಹಾಜರಿದ್ದರು.