Home ಜಿಲ್ಲೆ ಮೈಸೂರು 137 ಮರಗಳ ಕಡಿಯಲು ಪರಿಸರ ಪ್ರೇಮಿಗಳ ಅಸಮಾಧಾನ

137 ಮರಗಳ ಕಡಿಯಲು ಪರಿಸರ ಪ್ರೇಮಿಗಳ ಅಸಮಾಧಾನ

ಸಂಜೆವಾಣಿ ನ್ಯೂಸ್
ಮೈಸೂರು: ಮೇ.23:-
ನಗರದ ಹೊರವಲಯದಲ್ಲಿರುವ ಬಿಇಎಂಎಲ್ ಕಾರ್ಖಾನೆ ಆವರಣದಲ್ಲಿ ಆಸ್ಪತ್ರೆ ನಿರ್ಮಾಣಕ್ಕಾಗಿ 137 ಮರಗಳನ್ನು ಕಡಿಯಲು ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಸಾಕಷ್ಟು ಸಮಯಾವಕಾಶ ನೀಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಪರಿಸರ ಪ್ರೇಮಿಗಳು, 137 ಮರಗಳನ್ನು ಕಡಿಯುವ ವಿಷಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಕನಿಷ್ಠ 10 ದಿನಗಳ ಕಾಲಾವಕಾಶ ನೀಡಬೇಕು ಮತ್ತು ಈ ವಿಷಯದ ಸಾರ್ವಜನಿಕ ಪ್ರಕಟಣೆ ರೂಪದಲ್ಲಿ ಪತ್ರಿಕೆಗಳಲ್ಲಿ ಬರುವಂತೆ ಮಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಪರಿಸರಕ್ಕಾಗಿ ನಾವು ಸಂಘಟನೆ ನೇತೃತ್ವದಲ್ಲಿ ಮೈಸೂರು ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರನ್ನು ಭೇಟಿಯಾಗಿರುವ ಸಂಘಟನೆ ಸದಸ್ಯರು, ಬಿಇಎಂಲ್ ಕಾರ್ಖಾನೆ ಆವರಣದಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಿಸಲು 137 ಮರಗಳನ್ನು ಕಡಿಯುವ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪಣೆ ಸ್ವೀಕರಿಸಲು ಮೈಸೂರು ವಲಯ ಅರಣ್ಯಾಧಿಕಾರಿಗಳ ಉಲ್ಲೇಖದಲ್ಲಿ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದು, ಈ ವಿಷಯ ಕೆಲವು ದಿನಪತ್ರಿಕೆಗಳಲ್ಲಿ ಮಾತ್ರ ಪ್ರಕಟವಾಗಿದೆ.

ಆಕ್ಷೇಪಣೆ ಸಲ್ಲಿಕೆ ಮಾಡಲು ಕನಿಷ್ಠ 10 ದಿನಗಳ ಕಾಲಾವಕಾಶ ನೀಡಬೇಕು ಎಂಬ ನಿಯಮವಿದೆ. ಆದರೆ, ಅರಣ್ಯ ಇಲಾಖೆ ನೀಡಿರುವ ಪ್ರಕಟಣೆಯಂತೆ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಕೇವಲ 4 ದಿನಗಳ ಕಾಲಾವಕಾಶ ಮಾತ್ರವೇ ನೀಡಲಾಗಿದ್ದು, ಈ ಪ್ರಕಾರ ಮೇ 25 ಕಡೆ ದಿನವಾಗಿದೆ. ಮೇ 5ರಂದು ಮಣಿಪಾಲ್ ಆಸ್ಪತ್ರೆ ಜಂಕ್ಷನ್‍ನಲ್ಲಿ ಫ್ಲೈ ಓವರ್ ನಿರ್ಮಿಸಲು ಮತ್ತು ಬೇರೆ ಎರಡು ಕಡೆ ರಸ್ತೆಗಳ ಅಗಲೀಕರಣಕ್ಕಾಗಿ 561 ಮರಗಳನ್ನು ಕಡಿಯಲು ಸಾರ್ವಜನಿಕರಿಂದ ಆಕ್ಷೇಪಣೆ ಸ್ವೀಕರಿಸುವ ವಿಷಯದಲ್ಲೂ ಇದೇ ರೀತಿಯ ತಪ್ಪನ್ನು ಮಾಡಲಾಗಿತ್ತು. ಇದೀಗ ಈ ಬಾರಿಯೂ ಅರಣ್ಯ ಇಲಾಖೆ ಅಧಿಕಾರಿಗಳು ಹಿಂದಿನ ತಪ್ಪನ್ನೇ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.