
ಸಂಜೆ ವಾಣಿ ವಾರ್ತೆ
ಕಮಲನಗರ:ಫೆ.೯:ಬೆಳಕೊನಿ (ಭೋ) ಗ್ರಾಮದಲ್ಲಿರುವ ಪಂಚಶೀಲ ಬುದ್ಧ ವಿಹಾರದಲ್ಲಿ ಮಾತಾ ರಾಮಾಬಾಯಿ ಭೀಮರಾವ್ ಅಂಬೇಡ್ಕರ್ ಅವರ ೧೨೮ನೇ ಜನ್ಮದಿನವನ್ನು ಭಕ್ತಿಭಾವದಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಶಿಕ್ಷಕ ಕಪಿಲ್ ಡೋಂಗ್ರೆ ಅವರು ಮಾತಾ ರಾಮಾಬಾಯಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು. ನಂತರ ಧಮ್ಮ ವಂದನಾ ಮಂತ್ರಗಳ ಪಠಣದೊಂದಿಗೆ ಕಾರ್ಯಕ್ರಮಕ್ಕೆ ಆಧ್ಯಾತ್ಮಿಕ ಸ್ವರೂಪ ನೀಡಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಕ ರೋಹಿದಾಸ್ ಡೋಂಗ್ರೆ ಅವರು ತಮ್ಮ ಭಾಷಣದಲ್ಲಿ ಮಾತಾ ರಾಮಾಬಾಯಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನದಲ್ಲಿ ನೀಡಿದ ತ್ಯಾಗ, ಬೆಂಬಲ ಮತ್ತು ಸಾಮಾಜಿಕ ಹೋರಾಟಗಳ ಕುರಿತು ವಿವರಿಸಿದರು. ಕಠಿಣ ಪರಿಸ್ಥಿತಿಗಳ ನಡುವೆಯೂ ಕುಟುಂಬವನ್ನು ಮುನ್ನಡೆಸಿ, ಶಿಕ್ಷಣ ಮತ್ತು ಸಮಾನತೆಯ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸಿದ ಮಾತಾ ರಾಮಾಬಾಯಿ ಅವರ ಜೀವನ ಎಲ್ಲರಿಗೂ ಪ್ರೇರಣೆಯಾಗಿದೆ ಎಂದು ಹೇಳಿದರು.
ಮಾತಾ ರಾಮಾಬಾಯಿ ಅಂಬೇಡ್ಕರ್ ಅವರ ಸ್ಮರಣಾರ್ಥವಾಗಿ ಸಿದ್ಧಾಂತ್ ಗಾಯನ ಪಕ್ಷದವರಿಂದ ಭಜನೆ ಹಾಗೂ ಸ್ಮರಣಾರ್ಥ ಗೀತ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಭಜನೆಗಳು ಹಾಗೂ ಧಮ್ಮಗೀತೆಗಳ ಮೂಲಕ ಸಮಾರಂಭವು ಭಕ್ತಿಭಾವದಿಂದ ತುಂಬಿ ತುಳುಕಿತು.
ಈ ಕಾರ್ಯಕ್ರಮದಲ್ಲಿ ತಾನಾಜಿ ಕಂಬ್ಳೆ, ಖಂಡು ಗಾಯಕವಾಡ, ಭೀಮರಾವ್ ರಾಣಡೆ ಯಾದವ ರಾನಡೆ ಮಹೇಶ ಡೋಂಗ್ರೆ ವಿಜಯ್ ಡೋಂಗ್ರೆ ಕೇವಲಬಾಯಿ ಕಾಂಬಳೆ ಸೇರಿದಂತೆ ಗ್ರಾಮಸ್ಥರಾದ ಪುರುಷರು, ಮಹಿಳೆಯರು ಇದ್ದರು.



























