
ವಿಜಯಪುರ,ಅ.೧೦- ವಿಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗೊಬ್ಬರಗುಂಟೆ ಗ್ರಾಮದಲ್ಲಿ ಮನೆಗೆ ನುಗ್ಗಿ ೧೨೦ ಗ್ರಾಂ ಚಿನ್ನ ಕದ್ದಿದ್ದ ಕಳ್ಳನನ್ನು ಮನೆಯ ಮಾಲೀಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಗೊಬ್ಬರಗುಂಟೆ ಗ್ರಾಮದ ಕೃಷ್ಣಪ್ಪ ಎಂಬುವವರ ಮನೆಗೆ ನುಗ್ಗಿದ ಕಳ್ಳ ೧೨೦ ಗ್ರಾಂ ಚಿನ್ನವನ್ನು ಕದ್ದಿದ್ದಾನೆ. ಮನೆಯವರೆಲ್ಲರೂ ವಿಜಯಪುರದಲ್ಲಿ ಸಿನಿಮಾ ನೋಡಲು ಹೋಗಿದ್ದಾಗ,ದೂರದಿಂದಲೇ ಹೊಂಚು ಹಾಕಿದ್ದ ಕಳ್ಳ, ಮಧ್ಯಾಹ್ನ ೧.೫೦ ರಲ್ಲಿ ಮನೆಗೆ ನುಗ್ಗಿದ್ದಾನೆ. ಮನೆಯ ಮಾಲೀಕ ಕೃಷ್ಣಪ್ಪ, ಮನೆಗೆ ಬಂದಾಗ, ಮನೆಗೆ ಒಳಗಿನಿಂದ ಲಾಕ್ ಮಾಡಿರುವುದನ್ನು ಕಂಡು, ಮನೆಯವರೆಲ್ಲರೂ ಸಿನಿಮಾಗೆ ಹೋಗಿದ್ದು, ಒಳಗೆ ಲಾಕ್ ಮಾಡಿದವರು ಯಾರು ಎಂದು ಅನುಮಾನಗೊಂಡು ತಮ್ಮ ಮಗನಿಗೆ ಪೋನ್ ಮಾಡಿದ್ದಾರೆ. ಸಿನಿಮಾ ವೀಕ್ಷಣೆ ಮಾಡುತ್ತಿದ್ದ ಮಗ, ತನ್ನ ಮೊಬೈಲ್‌ನಲ್ಲಿ ಸಿಸಿಟಿವಿ ಪರಿಶೀಲನೆ ಮಾಡಿದಾಗ, ಕಳ್ಳ ಒಳಗೆ ಹೋಗಿರುವುದು ಗೊತ್ತಾಗಿದ್ದು, ತಕ್ಷಣ ಬಂದು ಬಾಗಿಲು ಹೊಡೆದು ಮನೆಯೊಳಗೆ ಹೋಗಿ, ಹುಡುಕಾಡಿದ್ದಾರೆ.
ಒಂದು ರೂಂನಲ್ಲಿ ಮಂಚದ ಕೆಳಗೆ ಅವಿತುಕೊಂಡಿದ್ದ ಕಳ್ಳನನ್ನು ಹಿಡಿದು, ಕಳ್ಳತನ ಮಾಡಿ, ಜೇಬಿನಲ್ಲಿ ಇಟ್ಟುಕೊಂಡಿದ್ದ ೧೨೦ ಗ್ರಾಂ ಚಿನ್ನದ ಸಮೇತ ಪೊಲೀಸರ ವಶಕ್ಕೆ ನೀಡಿದ್ದಾರೆ. ಬಂಧಿತನನ್ನು ಕೇರಳ ಮೂಲದ ತ್ರಿಶೂರ್‌ನ ಚಿತ್ತಿಲಪಲ್ಲಿಯ ಅಜಯ್ ಎಂದು ಗುರುತಿಸಲಾಗಿದ್ದು, ಯಲಹಂಕದ ಬಳಿ ಅಪಾರ್ಟ್ಮೆಂಟ್ ಒಂದರಲ್ಲಿ ತನ್ನ ಸ್ನೇಹಿತರೊಂದಿಗೆ ವಾಸವಾಗಿರುವುದಾಗಿ ತಿಳಿಸಿದ್ದಾನೆ. ಓಲಾ, ಉಬರ್ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿರುವುದಾಗಿ ತಿಳಿದುಬಂದಿದೆ.
ಕಳ್ಳತನ ಮಾಡುವುದಕ್ಕಿಂತ ಮೊದಲೇ ಎರಡು ಮೂರು ದಿನಗಳಿಂದ ಮನೆಯವರ ಚಲನವಲನಗಳ ಬಗ್ಗೆ ಗಮನವಿಟ್ಟು ಕೃತ್ಯ ಎಸಗಿರುವುದಾಗಿ ಆರೋಪಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.
ಈ ಕುರಿತು ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಯುತ್ತಿದೆ.






















