108ರ ಚಾಲಕರು ಅನೇಕರ ಪ್ರಾಣ ಉಳಿಸಿದ ರಕ್ಷಕರು – ಡಾ. ಕೊಟ್ರೇಶ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ. 27 :-
ಆರೋಗ್ಯ ಸೇವೆಯ 108 ರ ಅಂಬ್ಯುಲೆನ್ಸ್ ಚಾಲಕರು ತಮ್ಮ ಸಮಯಪ್ರಜ್ಞೆಯಿಂದ ಅನೇಕರ ಪ್ರಾಣ ಉಳಿಸಿದ ಜೀವರಕ್ಷಕರು ಎಂದರೆ ತಪ್ಪಾಗದು ಎಂದು ಡಾ. ಕೊಟ್ರೇಶ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಪಟ್ಟಣದ ಸಾರ್ವಜನಿಕ ತಾಲೂಕು ಆಸ್ಪತ್ರೆ ಆವರಣದಲ್ಲಿ ರಾಷ್ಟೀಯ ಅಂಬ್ಯುಲೆನ್ಸ್ ಚಾಲಕರ ದಿನಾಚರಣೆಯ ನಿಮಿತ್ತ ಇಎಂಆರ್‌ಐ 108 ಜಿಎಚ್‌ಎಸ್ ವತಿಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತ ಹೆರಿಗೆ, ಅಪಘಾತ ಸೇರಿದಂತೆ ಆರೋಗ್ಯ ಇಲಾಖೆಗೆ ಸಂಬಂದಿಸಿದ ಸೇವೆಗೆ ಸದಾ ಸಿದ್ದರಿರುವ ಅಂಬ್ಯುಲೆನ್ಸ್ ಚಾಲಕರ ಹಾಗೂ ಸಿಬ್ಬಂದಿ ಗಳ ಸೇವೆ ಶ್ಲಾಘನೀಯ ಎಂದು ತಿಳಿಸಿದರು.
ಗ್ರಿನ್ ಹೆಲ್ತ್ ಸರ್ವಿಸ್ ಜಿಲ್ಲಾ ವ್ಯವಸ್ಥಾಪಕ ವಿನಯಕುಮಾರ ಮಾತನಾಡಿ 108 ರ ಚಾಲಕರು ಯಾವುದಾದರು ಅಪಘಾತವಾಗಿದ್ದರೆ ಆ ಸ್ಥಳಕ್ಕೆ ಎಷ್ಟು ಸಮಯ ಬೇಕಾಗಬಹುದು ಎನ್ನುವುದನ್ನು ಅರಿತು ಆ ಸ್ಥಳಕ್ಕೆ ಸಮಯಪ್ರಜ್ಞೆ ಇಟ್ಟುಕೊಂಡು ಚಾಲನೆ ಮಾಡುವ ಮೂಲಕ ಪ್ರಾಣಪಾಯದಿಂದ ಪಾರುಮಾಡಿ ಜೀವ ಉಳಿಸಿದ ಕಾರ್ಯ ನಮ್ಮದಾಗಬೇಕು ಎಂಬುದನ್ನು ಚಾಲಕರು ಅರಿತಿರಬೇಕು ಆಗ ನಮ್ಮ ಸೇವೆ ಸಾರ್ಥಕವಾಗಬಲ್ಲದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ 108ರ ಚಾಲಕರ ವತಿಯಿಂದ ಸರ್ಜನ್ ಡಾ ಕೊಟ್ರೇಶ ಮತ್ತು ಗ್ರೀನ್ ಹೆಲ್ತ್ ಸರ್ವಿಸ್ ಜಿಲ್ಲಾ ವ್ಯವಸ್ಥಾಪಕ ವಿನಯಕುಮಾರ ಇವರುಗಳನ್ನು ಸನ್ಮಾನಿಸಲಾಯಿತು. ಕೂಡ್ಲಿಗಿ ಮತ್ತು ಕೊಟ್ಟೂರು 108 ರ ಚಾಲಕರುಗಳಾದ ವಿಜಯಕುಮಾರ್, ನಾಗರಾಜ, ಶ್ರೀಕಾಂತ್ ಮತ್ತು ಅಲ್ಲಾಭಕ್ಷಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.