
ಬೀದರ:ಜ.23:ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆ ಮತ್ತು ಸಮಾನತೆಯ ಹೋರಾಟವನ್ನು ಮುಂದುವರಿಸಲು 101 ಜಾತಿಗಳು ಒಂದಾಗಿ ನಡೆಯಬೇಕೆಂದು ಮೈಸೂರು ರಂಗಾಯಣದ ಮಾಜಿ ನಿರ್ದೇಶಕ ಜನಾರ್ಧನ (ಜನ್ನಿ) ಕರೆ ನೀಡಿದರು.
ಬೆಂಗಳೂರಿನ ಗಾಂಧಿ ಭವನದ ಮಹಾದೇವ ಸಭಾಂಗಣದಲ್ಲಿ ರವಿವಾರ ಮಧ್ಯಾಹ್ನ 12ರಿಂದ ಸಂಜೆ 5ರವರೆಗೆ ಆಯೋಜಿಸಲಾಗಿದ್ದ “ಸಮಾನತೆಯ ಹಾದಿಯಲ್ಲಿ ಲಕ್ಷ್ಮೀನಾರಾಯಣ ನಾಗವಾರ – ಹೋರಾಟಗಾರನ ಅಳಿಯದ ನೆನಪು” ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ಮೀಸಲಾತಿಗಾಗಿ ಜಾತಿಗಳ ನಡುವೆ ಸಂಘರ್ಷ ನಡೆಯುತ್ತಿರುವ ಈ ಸಂದರ್ಭದಲ್ಲಿ, ಮೀಸಲಾತಿ ತಂದುಕೊಟ್ಟ ಅಂಬೇಡ್ಕರ್ ಅವರ ರಥವನ್ನು ಮುನ್ನಡಿಸಲು ಎಲ್ಲ ಜಾತಿಗಳು ಒಂದಾಗಬೇಕೆಂದು ಅವರು ಹೇಳಿದರು. ಅಂಬೇಡ್ಕರ್ ರಚಿಸಿದ ಸಂವಿಧಾನದ ಮೂಲಕವೇ ಸಮೃದ್ಧ ಭಾರತ ಹಾಗೂ ಸಮೃದ್ಧ ವಿಶ್ವ ನಿರ್ಮಾಣ ಸಾಧ್ಯವೆಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ಆಳಂದ ಶಾಸಕ ಹಾಗೂ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಶ್ರೀ ಬಿ.ಆರ್. ಪಾಟೀಲ್ ಉದ್ಘಾಟಿಸಿ, 70-80ರ ದಶಕಗಳಲ್ಲಿ ಉದಯಿಸಿದ ದಲಿತ ಚಳುವಳಿ ನಂದಿಬಸವಣ್ಣರನ್ನು ನಾಯಕನಾಗಿ ರೂಪಿಸಿದ ಕೀರ್ತಿ ದಲಿತ ಚಳುವಳಿಗೆ ಸಲ್ಲುತ್ತದೆ ಎಂದು ಹೇಳಿದರು. ಇಂದಿನ ಅನೇಕ ಸಂಘಟನೆಗಳಿಗೆ ತಾಯಿಬೇರುವಾಗಿರುವ ದಲಿತ ಚಳುವಳಿಗೆ ಪುನರ್ಚೇತನ ಅಗತ್ಯವಿದ್ದು, ವಿಭಾಗವಾರು ರಾಜ್ಯಮಟ್ಟದ ಕಾರ್ಯಕ್ರಮಗಳ ಮೂಲಕ ಸಂವಿಧಾನ ಹಾಗೂ ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕೆಂದು ಅವರು ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಮಹಿಳಾ ವಿಭಾಗದ ರಾಜ್ಯ ಸಂಚಾಲಕಿ ಡಾ. ಜಾನಕಮ್ಮಾ ಲಕ್ಷ್ಮೀನಾರಾಯಣ, ಮಹಿಳಾ ಸಮಾಜಕ್ಕೆ ಆತ್ಮಗೌರವ ಹಾಗೂ ಸ್ವಾಭಿಮಾನಪೂರ್ಣ ಬದುಕನ್ನು ಸಂವಿಧಾನಾತ್ಮಕವಾಗಿ ನೀಡಿದವರು ಡಾ. ಅಂಬೇಡ್ಕರ್ ಎಂದರು.
ಕೆನರಾ ಬ್ಯಾಂಕ್ ಎಸ್‍ಸಿ/ಎಸ್‍ಟಿ ನೌಕರರ ಸಂಘದ ಅಧ್ಯಕ್ಷ ಪುರುಷೋತ್ತಮ ದಾಸ ಮಾತನಾಡಿ, ದಲಿತ ಚಳುವಳಿ ಮುನ್ನಡಿಸಲು ಸರ್ಕಾರಿ ನೌಕರರ ಪಾತ್ರ ಅತ್ಯಂತ ಅಗತ್ಯವಿದೆ ಎಂದರು. ಅವರ ಸಹಕಾರದಿಂದಲೇ ಬೆಂಗಳೂರಿನಲ್ಲಿ ಜೈ ಭೀಮ್ ಭವನ ನಿರ್ಮಾಣ ಸಾಧ್ಯವಾಯಿತೆಂದು ಅವರು ತಿಳಿಸಿದರು.
ನಿವೃತ್ತ ಪೆÇಲೀಸ್ ಅಧಿಕಾರಿ ಬಿ.ಕೆ. ಶಿವರಾಂ ಮಾತನಾಡಿ, ಶಾಂತಿ ಮತ್ತು ಸಮೃದ್ಧ ಸಮಾಜ ನಿರ್ಮಾಣದಲ್ಲಿ ಪೆÇಲೀಸ್ ಇಲಾಖೆಯ ಪಾತ್ರ ಮಹತ್ವದ್ದಾಗಿದೆ. ದ್ವೇಷದ ಬದಲು ಪ್ರೀತಿ, ಕರುಣೆ, ಸಮತೆ ಮತ್ತು ಮಮತೆ ಬೆಳೆಸುವ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಸಮಾಜವಾದಿ ಚಿಂತಕ ಅಲಿಬಾಬಾ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಕಲಬುರಗಿ ವಿಭಾಗದ ಸಂಚಾಲಕ ಉಮೇಶಕುಮಾರ ಸೋರಳ್ಳಿಕರ್, ರಾಜ್ಯ ಸಂಘಟನಾ ಸಂಚಾಲಕ ಕಲ್ಲಪ್ಪ ಕಾಂಬಳೆ, ದೇವನಹಳ್ಳಿ ಸೋಮಶೇಖರ, ಎಫ್.ವೈ. ದೊಡ್ಡಮನಿ, ಶಿವಜ್ಞಾನಿ ಕಪ್ಪಗಲ, ಶರಣಪ್ಪ ಗುಳಬಾಳ ಉಪಸ್ಥಿತರಿದ್ದರು. ಕಾರ್ಯಕಾರಿ ರಾಜ್ಯ ಸಂಚಾಲಕ ಜೀವನಹಳ್ಳಿ ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಬುದ್ಧ-ಬಸವ-ಅಂಬೇಡ್ಕರ್ ಗೀತೆಗಳನ್ನು ಖ್ಯಾತ ಗಾಯಕರಿಂದ ಪ್ರಸ್ತುತಪಡಿಸಲಾಯಿತು. ಬೀದರ್ ಜಿಲ್ಲಾ ಸಂಚಾಲಕ ಬಾಬುರಾವ ಕೌಠ, ಸಾಹಿತಿ ಡಾ. ಸುಬ್ಬಣ್ಣ ಕರಕನಳ್ಳಿ, ಪಂಕಜಕುಮಾರ ಸೂರ್ಯವಂಶಿ, ವಿಜಯಕುಮಾರ, ಭೀಮರಾವ ಭಾವಿಕಟ್ಟಿ ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.

























