೧.೩ ಕೋಟಿ ಚಿನ್ನ, ಬೆಳ್ಳಿ ಜಪ್ತಿ: ನಾಲ್ವರ ಬಂಧನ

ಬೆಂಗಳೂರು,ಜ.೬-ಕೆಲಸ ಮಾಡುತ್ತಿದ್ದ ಮಾಲೀಕರ ಮನೆಯಲ್ಲೇ ಹೊಂಚು ಗ್ಯಾಂಗ್ ಕಟ್ಟಿಕೊಂಡು ಕಳ್ಳತನ ಮಾಡುತ್ತಿದ್ದ ಕಾರು ಚಾಲಕ ಸೇರಿ ನಾಲ್ವರನ್ನು ಬಂಧಿಸಿರುವ ವಿದ್ಯಾರಣ್ಯಪುರ ಪೊಲೀಸರು ೧.೦೩ ಕೋಟಿ ಮೌಲ್ಯದ ಚಿನ್ನ ಬೆಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ.


ಘಾಟಿ ಸುಬ್ರಹ್ಮಣ್ಯದ ನರೇಂದ್ರ (೨೮) ಬಿಹಾರದ ದರ್ಭಾಂಗ್ ಜಿಲ್ಲೆಯ ಮಂಜಿತ್ ರಾಮ್(೨೮)ದೊಡ್ಡಬಳ್ಳಾಪುರದ ಮುತ್ತೂರಿನ ಚಂದನ್ (೨೭)ಮಂಜುನಾಥ್(೩೬) ಬಂಧಿತ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ಬಂಧಿತ ಆರೋಪಿಗಳಿಂದ ೪ ಲಕ್ಷ ನಗದು
೧.೩ ಕೋಟಿ ಮೌಲ್ಯದ ೫೫೦ ಗ್ರಾಂ ಚಿನ್ನಾಭರಣ,೪ ಕೆ ಜಿ ಬೆಳ್ಳಿಯ ವಸ್ತುಗಳು,ಸ್ಕೂಟರ್ ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ವಿದ್ಯಾರಣ್ಯಪುರದ ಹೆಸರುಘಟ್ಟ ಮುಖ್ಯರಸ್ತೆ, ವಡೇರಹಳ್ಳಿಯ ವಿಲ್ಲಾವೊಂದರಲ್ಲಿ ವಾಸವಾಗಿದ್ದ ಗೋಪಾಲ್ ಶಿಂಧೆ ಅವರು ಕಾರು ಚಾಲಕ, ಮನೆಗೆಲಸದವನು ಸೇರಿದಂತೆ ಕುಟುಂಬ ಸಮೇತ, ಮಹಾರಾಷ್ಟ್ರ ರಾಜ್ಯದ ಸಿಂಧ್‌ದುರ್ಗ್ ಜಿಲ್ಲೆಗೆ ಹೋಗಿ ಡಿ.೩೦ ರಂದು ವಾಪಸಾಗಿ ನೋಡಿದಾಗ ಮನೆಯ ಬೀಗ ಹೊಡೆದು ಬೀರುವಿನಲ್ಲಿಟ್ಟಿದ್ದ ಚಿನ್ನ,ಬೆಳ್ಳಿಯ ವಸ್ತುಗಳು ಮತ್ತು ನಗದನ್ನು ಕಳವು ಮಾಡಿರುವುದು ಕಂಡು ಬಂದು ಈ ಸಂಬಂಧ ವಿದ್ಯಾರಣ್ಯಪುರ ಪೊಲೀಸರಿಗೆ ದೂರು ನೀಡಿದ್ದರು.


ದೂರು ಆಧರಿಸಿ ದಾಖಲಿಸಿದ ಪ್ರಕರಣದ ತನಿಖೆಯನ್ನು ವಿವಿಧ ಆಯಾಮಗಳಲ್ಲಿ ಕೈಗೊಂಡ ಇನ್ಸ್‌ಪೆಕ್ಟರ್ ಶಿವಸ್ವಾಮಿ ಮತ್ತವರ ತಂಡ ಖಚಿತ ಮಾಹಿತಿಯನ್ನು ಕಲೆಹಾಕಿ, ಕಳೆದ ಜ.೩ ರಂದು ಚಿತ್ರದುರ್ಗ ಜಿಲ್ಲೆಯ, ಹೊಸದುರ್ಗ ಬಸ್ ನಿಲ್ದಾಣದ ಬಳಿ ಇಬ್ಬರನ್ನು ಬಂಧಿಸಿದೆ.


ಬಂಧಿತರನ್ನು ತೀವ್ರ ವಿಚಾರಣೆ ನಡೆಸಿದಾಗ ಆರೋಪಿಗಳು ದೂರುದಾರರಾದ ಶಿಂಧೆ ಅವರ ಮನೆಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುವ ಮತ್ತು ಮನೆಗೆಲಸವನ್ನು ಮಾಡುವ ಇಬ್ಬರು ಸ್ನೇಹಿತರು ನಮಗೆ ಮನೆಯ ಹಿಂಬಾಗಿಲಿನ ಕೀಯನ್ನು ನೀಡಿ, ಕಳವು ಮಾಡುವಂತೆ ತಿಳಿಸಿದ್ದು ಅದರಂತೆ ನಾವು ಕಳ್ಳತನ ಮಾಡಿದ್ದೇವು ಎಂದು ಬಾಯ್ಬಿಟ್ಟಿದ್ದಾರೆ.


ಅದರಂತೆ ಮಾಲೀಕರ ಮನೆಯ ಬಳಿಯೇ ಕಾರು ಚಾಲಕ ಮತ್ತು ಮನೆಗೆಲಸದವನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಮನೆಯ ಹಿಂಬಾಗಿಲಿನ ಕೀಯನ್ನು ಸ್ನೇಹಿತರಿಬ್ಬರಿಗೆ ನೀಡಿ, ಕಳವು ಮಾಡುವಂತೆ ತಿಳಿಸಿದ್ದುದ್ದಾಗಿ ತಪ್ಪೊಪ್ಪಿದ್ದಾರೆ.


ಬಂಧಿತ ನಾಲ್ವರು ಆರೋಪಿಗಳನ್ನು ಸುದೀರ್ಘ ವಿಚಾರಣೆ ನಡೆಸಿದಾಗ ಕಳವು ಮಾಡಿದ ಚಿನ್ನಾಭರಣ, ಬೆಳ್ಳಿಯ ವಸ್ತುಗಳನ್ನು ಪ್ರಕರಣದ ಆರೋಪಿಯೋರ್ವನು ದೊಡ್ಡಬಳ್ಳಾಪುರದಲ್ಲಿ ವಾಸವಿರುವ ಆತನ ಮನೆಯಲ್ಲಿಟ್ಟಿರುವುದಾಗಿ ತಿಳಿಸಿದ್ದು, ನಗದನ್ನು ನಾಲ್ವರು ಆರೋಪಿಗಳು ಹಂಚಿಕೊಂಡಿರುವುದಾಗಿ ತಿಳಿಸಿದ್ದಾರೆ.


ಆರೋಪಿಗಳು ನೀಡಿದ ಮಾಹಿತಿ ಮೇರೆಗೆ, ದೊಡ್ಡಬಳ್ಳಾಪುರದಲ್ಲಿ ವಾಸವಿದ್ದ ಆರೋಪಿಯೋರ್ವನ ಮನೆಯಿಂದ ೫೫೦ ಗ್ರಾಂ ಚಿನ್ನಾಭರಣ, ೪ ಕೆ.ಜಿ ಬೆಳ್ಳಿಯ ವಸ್ತುಗಳು ಹಾಗೂ ೮೦ ಸಾವಿರ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು ಈ ಕಾರ್ಯಾಚರಣೆಯನ್ನು ಈಶಾನ್ಯ ವಿಭಾಗದ ಡಿಸಿಪಿ ಜಿ.ಕೆ ಮಿಥುನ್ ಕುಮಾರ್ ಮಾರ್ಗದರ್ಶನದಲ್ಲಿ ವಿದ್ಯಾರಣ್ಯಪುರ ಪೊಲೀಸ್ ಇನ್ಸ್‌ಪೆಕ್ಟರ್ ಶಿವಸ್ವಾಮಿ ಸಿ.ಬಿ, ಮತ್ತವರ ತಂಡ ಕೈಗೊಂಡಿದೆ ಎಂದರು.