ಬಸ್ಸಿನಲ್ಲಿ ಪ್ರಯಾಣಿಸುವಾಗ 1.12 ಲಕ್ಷ ಚಿನ್ನಾಭರಣ ಕಳವು

ಕಲಬುರಗಿ,ಸೆ.3-ಬಸ್ಸಿನಲ್ಲಿ ಚಿತ್ತಾಪುರದಿಂದ ಕಲಬುರಗಿಯ ರಾಜಾಪುರ ಕ್ರಾಸ್ ಹಾಗೂ ಗುಂಡಗುರ್ತಿ ಗ್ರಾಮಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಹೋಗುವಾಗ ಕಳ್ಳರು ಬ್ಯಾಗಿನಲ್ಲಿದ್ದ 1.12 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ ಎಂದು ಮಹಿಳೆಯೊಬ್ಬರು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಬೆಂಗಳೂರಿನ ಹೊಸಕೋಟೆ ರಸ್ತೆಯ ಬಿದರಳ್ಳಿ ಟೀಚರ್ಸ್ ಕಾಲೋನಿ ನಿವಾಸಿ ರಂಜಿತಾ ಕೆಲ್ಲೂರ್ ಎಂಬುವವರೆ ದೂರು ಸಲ್ಲಿಸಿದ್ದು, ಗುಂಡಗುರ್ತಿ ಗ್ರಾಮದಲ್ಲಿ ಸಂಬಂಧಿಕರ ಕುಪ್ಪಸ (ಸೀಮಂತ) ಕಾರ್ಯಕ್ರಮವಿದ್ದ ಪ್ರಯುಕ್ತ ಇವರು ತಮ್ಮ ತಾಯಿ ಸಾವಿತ್ರಮ್ಮಾ ಅವರೊಂದಿಗೆ ಬೆಂಗಳೂರಿನಿಂದ ಚಿತ್ತಾಪುರಕ್ಕೆ ಬಂದಿದ್ದಾರೆ. ಚಿತ್ತಾಪುರದಿಂದ ಬಸ್ಸಿಗೆ ಹೊರಟು ಶಹಾಬಾದ ರಿಂಗ್ ರೋಡ್ ರಾಜಾಪುರ ಕ್ರಾಸ್ ಹತ್ತಿರ ಇಳಿದಿದ್ದಾರೆ. ಅಲ್ಲಿಂದ ಸೇಡಂಗೆ ಹೋಗುವ ಬಸ್ ಹತ್ತಿ ಗುಂಡುಗುರ್ತಿಗೆ ತೆರಳಿದ್ದಾರೆ. ಸಂಬಂಧಿಕರ ಮನೆಗೆ ಹೋಗಿ ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿದ್ದ 72 ಸಾವಿರ ರೂ.ಮೌಲ್ಯದ 9 ಗ್ರಾಂ.ಬಂಗಾರದ ಬ್ರಾಸ್‍ಲೇಟ್, 40 ಸಾವಿರ ರೂ.ಮೌಲ್ಯದ 5 ಗ್ರಾಂ.ಬಂಗಾರದ ಪದಕವುಳ್ಳ ಲಾಕೇಟ್ ಕಳವಾಗಿರುವುದು ಬೆಳಕಿಗೆ ಬಂದಿದೆ. ಚಿತ್ತಾಪುರದಿಂದ ಕಲಬುರಗಿಯ ರಾಜಾಪುರ ಕ್ರಾಸ್ ಹಾಗೂ ಗುಂಡಗುರ್ತಿ ಗ್ರಾಮದ ಮಧ್ಯದ ಮಾರ್ಗದಲ್ಲಿ ಕಳ್ಳರು ಚಿನ್ನಾಭರಣ ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.