
ಪುತ್ತೂರು:ಕ್ಯಾಂಪ್ಕೋ ಸಂಸ್ಥೆಯ ಸಂಸ್ಥಾಪಕ, ಸಹಕಾರಿ ರತ್ನ ವಾರಣಾಶಿ ಸುಬ್ರಾಯ ಭಟ್ ಅವರ ಜನ್ಮ ಶತಾಬ್ಧಿ ಸಂಭ್ರಮ-೨೦೨೬ ‘ಕ್ಯಾಂಪ್ಕೋ ಬ್ರಹ್ಮ ಶತನಮನಗಳು’ ಕಾರ್ಯಕ್ರಮವು ಸೋಮವಾರ ಕೆಮ್ಮಿಂಜೆ ಕ್ಯಾಂಪ್ಕೋ ಚಾಕಲೇಟ್ ಕಾರ್ಖಾನೆಯಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಕ್ಯಾಂಪ್ಕೋದ ಮಾಜಿ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಮಾತನಾಡಿ, ಯುಗಪುರುಷ ವಾರಣಾಶಿ ಸುಬ್ರಾಯ ಭಟ್ ಅವರ ಕನಸಿನ ಕೂಸಾದ ಕ್ಯಾಂಪ್ಕೋ ಸಂಸ್ಥೆ ಇಂದು ದೇಶದ ಮೂರನೇ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆದುನಿಂತಿದೆ. ಕೋಟ್ಯಾಂತರ ಅಡಿಕೆ ಬೆಳೆಗಾರರ ಬದುಕಿಗೆ ಬೆಳಕು ಹಾಗೂ ಸಾವಿರಾರು ಮಂದಿಗೆ ಉದ್ಯೋಗ ಕಲ್ಪಿಸಿದ ಅವರ ಜೀವನ ಸಾಧನೆ ಮಕ್ಕಳಿಗೆ ಪಠ್ಯಪುಸ್ತಕವಾಗಬೇಕು. ವರ ಭಾವಚಿತ್ರ ಇರುವ ಸ್ಟ್ಯಾಂಪ್ ಕಚೇರಿಯ ಎಲ್ಲಾ ಪತ್ರಗಳಲ್ಲೂ ಇರುವ ಹಾಗೆ ವ್ಯವಸ್ಥೆಯಾಗಬೇಕು. ಅವರ ಹೆಸರಲ್ಲಿ ದತ್ತಿನಿಧಿ ಸ್ಥಾಪಿಸಿ ಸಮಾಜಕ್ಕೆ ಅರ್ಪಣೆಯಾಗಬೇಕು ಎಂದು ಹೇಳಿದರು.
ಅಡಿಕೆ ಕ್ಯಾನ್ಸರ್ ಶಮನಕಾರಿ
ಅಧ್ಯಕ್ಷತೆ ವಹಿಸಿದ್ದ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ ಮಾತನಾಡಿ, ಕ್ಯಾಂಪ್ಕೋ ಬ್ರಹ್ಮ ವಾರಣಾಶಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ದೊರೆಯಬೇಕು. ದೇಶದ ಜಿಡಿಪಿಯ ಪ್ರಗತಿಗೆ ಕ್ಯಾಂಪ್ಕೋ ಸಂಸ್ಥೆಯ ಕೊಡುಗೆ ಇದೆ. ಅಡಿಕೆ ಬೆಳೆಗಾರರ ಉನ್ನತಿಗಾಗಿ ಅವರು ಕಟ್ಟಿದ ಈ ಸಂಸ್ಥೆ ಕೊಕ್ಕೊ, ತೆಂಗು, ಕಾಳುಮೆಣಸು ಮತ್ತು ರಬ್ಬರ್ ಬೆಳೆಗಾರರ ಸಂರಕ್ಷಣೆಗೂ ಕೆಲಸ ಮಾಡುತ್ತಿದೆ. ರೈತರ ಆತ್ಮಹತ್ಯೆ ತಡೆಗೆ ಕ್ಯಾಂಪ್ಕೋದಂತಹ ಸಂಸ್ಥೆಗಳನ್ನು ಹುಟ್ಟು ಹಾಕುವ ಬಗ್ಗೆ ಸಂಸತ್ ನಲ್ಲೂ ಚರ್ಚೆಯಾಗುತ್ತಿದೆ. ಅಡಿಕೆ ಕ್ಯಾನ್ಸರ್ ಶಮನಕ್ಕೆ ಸಹಕಾರಿ ಎಂದು ನಿಮಾನ್ಸ್ ಸಂಸ್ಥೆಯ ಅಧ್ಯಯನ ತಿಳಿಸಿದೆ. ಅಡಿಕೆ ಆರೋಗ್ಯಕರ ಎಂದು ಕರ್ನಾಟಕ ರಾಜ್ಯದ ಸಚಿವರೂ ಹೇಳಿದ್ದಾರೆ ಎಂದರು.
ಲಾಂಛನ ಬಿಡುಗಡೆ ಮಾಡಿದ ಕೃಷಿ ಸಂಶೋಧಕರಾಗಿರುವ ವಾರಾಣಾಶಿ ಸುಬ್ರಾಯ ಭಟ್ ಅವರ ಪುತ್ರ ವಾರಾಣಾಶಿ ಕೃಷ್ಣಮೂರ್ತಿ ಮಾತನಾಡಿ, ಮಧ್ಯವರ್ತಿಗಳಿಂದ ಅಡಿಕೆ ಬೆಳೆಗಾರರಿಗೆ ಆಗುತ್ತಿರುವ ತೊಂದರೆ ನಿವಾರಿಸಲು ಬೆಳೆಗಾರರ ಸಂಸ್ಥೆಯಾಗಿ ಕ್ಯಾಂಪ್ಕೋ ಸ್ಥಾಪನೆಯಾಗಿತ್ತು. ಸುಬ್ರಾಯ ಭಟ್ ಅವರ ಭ್ರಷ್ಠಾಚಾರವಿಲ್ಲದ ಆಡಳಿತ ಕ್ಯಾಂಪ್ಕೋ ಭದ್ರವಾಗಿ ನೆಲೆಯೂರುವಂತೆ ಮಾಡಿದೆ. ಅಡಿಕೆ ಜಗಿಯುದು ಬಿಟ್ಟರೆ ಬೇರೇನು ಆಗಿಲ್ಲ. ಇದರ ಬಗ್ಗೆ ಸಂಶೋಧನೆ ನಡೆಸಿದೆ ಇದ್ದರೆ ಭವಿಷ್ಯದಲ್ಲಿ ಸಂಕಷ್ಟ ಎದುರಾಗಬಹುದಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಕ್ಯಾಂಪ್ಕೋದ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಮಧುಸೂದನ ರಾವ್, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ-ಕೃಷಿಕ ಶಂಕರ್ ಸಾರಡ್ಕ ಮಾತನಾಡಿದರು.
ಮೂರು ಹೊಸ ಉತ್ಪನ್ನಗಳ ಬಿಡುಗಡೆ:
ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯ ಮೂರು ಹೊಸ ಉತ್ಪನ್ನಗಳಾದ ಡಾರ್ಕ್ ಚಾಕಲೇಟ್ ಪ್ರೀಮಿಯಂ ೫೫% ಕೊಕ್ಕೋ, ಡಾರ್ಕ್ ಚಾಕಲೇಟ್ ಪ್ರುಟ್ & ನಟ್ ಮತ್ತು ಕೊಕ್ಕೋ ಪೌಡರ್ ಎಂಬ ಮೂರು ಹೊಸ ಉತ್ಪನ್ನಗಳು ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿತ್ತು. ಪ್ರಭಾಕರ ಹೊಳ್ಳ ಉತ್ಪನ್ನಗಳ ಮಾಹಿತಿ ನೀಡಿದರು.
ಲಾಂಛನ ಲೋಕಾರ್ಪಣೆ
ವಾರಾಣಾಶಿ ಸುಬ್ರಾಯ ಭಟ್ ಅವರು ಜನ್ಮ ಶತಾಬ್ಧಿಯ ಅಂಗವಾಗಿ ಸಂಸ್ಥೆಯ ಸಿಬಂದಿ ಕಿಶೋರ್ ವಿನ್ಯಾಸ ಮಾಡಿದ ಲಾಂಛನವನ್ನು ವಾರಾಣಾಶಿ ಸುಬ್ರಾಯ ಭಟ್ ಅವರ ಪುತ್ರ ಕೃಷಿ ಸಂಶೋಧಕ ವಾರಾಣಾಶಿ ಕೃಷ್ಣಮೂರ್ತಿ ಅನಾವರಣಗೊಳಿಸಿದರು.
ವ್ಯವಸ್ಥಾಪನಾ ನಿರ್ದೇಶಕ ಡಾ. ಬಿ.ವಿ ಸತ್ಯನಾರಾಯಣ ಸ್ವಾಗತಿಸಿದರು. ಉಪಾಧ್ಯಕ್ಷ ಪದ್ಮರಾಜ ಪಟ್ಟಾಜೆ ವಂದಿಸಿದರು. ಸಿಬಂದಿಗಳಾದ ಪುರುಷೋತ್ತಮ ಪ್ರಾರ್ಥಿಸಿದರು. ಜಯ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.






















