
ಸಂಜೆವಾಣಿ ವಾರ್ತೆ
ಬಳ್ಳಾರಿ, ಡಿ.04: ನಗರದಲ್ಲಿ ಅನಾವರಣವಾಗಲಿರುವ ಮಹರ್ಷಿ ವಾಲ್ಮೀಕಿಯವರ ಪುತ್ಥಳಿಯ ನಿರ್ಮಾಣ ಕಾಮಗಾರಿ ನಾನು ಮಾಡುತ್ತಿಲ್ಲ, ನನ್ನ ಮೂಲಕ ಮಹರ್ಷಿ ವಾಲ್ಮೀಕಿಯವರ ಇಚ್ಛೆ ನೆರವೇರುತ್ತಿದೆ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ನಿನ್ನರ ಸಂಜೆ ನಗರದ ಖಾಸಗಿ ಹೊಟೇಲಿನಲ್ಲಿ ವಾಲ್ಮೀಕಿ ನಾಯಕರ ಸಮಾಜದ ಮುಖಂಡರು ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿಯವರ ಪುತ್ಥಳಿ ಅನಾವರಣ ಕಾರ್ಯಕ್ರಮದ ಎರಡನೆಯ ಪೂರ್ವಭಾವಿ ಸಭೆಯಲ್ಲಿ. ವಾಲ್ಮೀಕಿಯವರ ನೂತನ ಪುತ್ಥಳಿ ಸ್ಥಾಪಿಸುತ್ತಿರುವ ಶಾಸಕರನ್ನು ಶ್ಲಾಘಿಸಿದ ವಾಲ್ಮೀಕಿ ನಾಯಕರ ಸಮಾಜದ ಮುಖಂಡರ ಅಭಿಪ್ರಾಯಗಳಿಗೆ ಪ್ರತಿಯಾಗಿ ಅವರು ಪ್ರತಿಕ್ರಿಯಿಸಿದರು.
ಬರುವ ಜ.03 ಪುತ್ಥಳಿಯ ಅನಾವರಣ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ, ಅದರಲ್ಲಿ ಸಮಾಜದ ಸಾವಿರಾರು ಜನರು ಭಾಗಿಯಾಗಲು ಅಗತ್ಯವಾದ ವ್ಯವಸ್ಥೆ ಮಾಡಲು ಸಮಿತಿಗಳನ್ನು ರಚಿಸಬೇಕು ಎಂದರು. ಈ ಕಾರ್ಯಕ್ರಮ ಪಕ್ಷಾತೀತವಾಗಿದ್ದು, ಎಲ್ಲ ಪಕ್ಷ ಸಂಘ ಸಂಸ್ಥೆಯವರೂ ಭಾಗಿಯಾಗಬೇಕು, ಈ ವಿಷಯದಲ್ಲಿ ನಾನು ರಾಜಕೀಯ ಮಾಡುವುದಿಲ್ಲ ಎಂದರು.
ವಾಲ್ಮೀಕಿ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ರಾಂಪ್ರಸಾದ್ ಮಾತನಾಡಿ, ಕಾರ್ಯಕ್ರಮದಲ್ಲಿ ನಮ್ಮ ಸಮಾಜದ ಜನರ ಭಾಗವಹಿಸುವುದು ಮುಖ್ಯ, ಇದಕ್ಕೆ ಅನುಗುಣವಾಗಿ ಸಮಿತಿಗಳನ್ನು ರಚಿಸಿ, ಸಮಿತಿಗಳಲ್ಲಿರುವವರು ಕ್ರಿಯಾಶೀಲವಾಗಿ ಕೆಲಸ ಮಾಡಿದಲ್ಲಿ ಕಾರ್ಯಕ್ರಮ ಯಶಸ್ವಿಯಾಗಲಿದೆ, ಈ ಕಾರ್ಯಕ್ರಮದ ಕುರಿತು ಮಾಜಿ ಸಚಿವ ಬಿ.ನಾಗೇಂದ್ರ ಅವರೊಂದಿಗೂ ಚರ್ಚಿಸಿರುವೆ, ಎಲ್ಲರೂ ಸೇರಿ ಪುತ್ಥಳಿ ಅನಾವರಣ ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದರು.
ಹಿರಿಯ ವಕೀಲ ಜಯರಾಂ ಮಾತನಾಡಿ; ಜ.03 ರ ಕಾರ್ಯಕ್ರಮದ ಬಗ್ಗೆ ವ್ಯವಸ್ಥಿತವಾಗಿ ಪ್ರಚಾರ ಮಾಡಬೇಕು, ವಿವಿಧ ಮಾಧ್ಯಮಗಳ ಮೂಲಕ ವಾಲ್ಮೀಕಿ ನಾಯಕರ ಸಮಾಜದ ಜನರಿಗೆ ಮಾಹಿತಿ ತಲುಪಿಸಬೇಕು ಎಂದರು.
ನಾರಾಯಣಪ್ಪ ಮಾತನಾಡಿ, ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ವಾಲ್ಮೀಕಿ ನಾಯಕರ ಸಮಾಜದ ಜನ ದೊಡ್ಡ ಸಂಖ್ಯೆಯಲ್ಲಿದ್ದಾರೆ, ಆದರೆ ಸ್ವಾತಂತ್ರ್ಯ ಸಿಕ್ಕ ಇಷ್ಟು ವರ್ಷಗಳಾದರೂ ಯಾರೂ ಕೂಡ ಮಹರ್ಷಿ ವಾಲ್ಮೀಕಿಯವರ ಇಂತಹ ಪುತ್ಥಳಿಯ ಸ್ಥಾಪನೆ ಮಾಡಿರಲಿಲ್ಲ, ಭರತ್ ರೆಡ್ಡಿಯವರ ಈ ಕಾರ್ಯ ಶ್ಲಾಘನೀಯ ಎಂದರು.
ಸಮಾಜದ ಮುಖಂಡರಾದ ಮೀನಳ್ಳಿ ತಾಯಣ್ಣ, ಮಾಜಿ ಮೇಯರ್ ನಾಗಮ್ಮ, ಮಾಜಿ ಉಪ ಮೇಯರ್ ಜಾನಕಮ್ಮ, ಪಾಲಿಕೆಯ ಸದಸ್ಯ ಹನುಮಂತಪ್ಪ ಮೊದಲಾದವರು ಇದ್ದರು.































