Home ಜಿಲ್ಲೆ ಮಂಗಳೂರು ಬೆಳ್ತಂಗಡಿ: ಪಿಕಪ್-ಸ್ಕೂಟರ್ ಡಿಕ್ಕಿ; ಇಬ್ಬರು ಮೃತ್ಯು

ಬೆಳ್ತಂಗಡಿ: ಪಿಕಪ್-ಸ್ಕೂಟರ್ ಡಿಕ್ಕಿ; ಇಬ್ಬರು ಮೃತ್ಯು

ಬೆಳ್ತಂಗಡಿ: ತಾಲೂಕಿನ ಬಳ್ಳಮಂಜ-ಪಣಕಜೆ ರಸ್ತೆಯ ಪಾಲ್ಯರ ಎಂಬಲ್ಲಿ ಸೋಮವಾರ ಸಂಜೆ ಪಿಕಪ್ ವಾಹನ ಹಾಗೂ ಆಕ್ಟಿವಾ ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟರ್ ಸವಾರ ಮತ್ತು ಸಹಸವಾರ ಇಬ್ಬರೂ ಮೃತಪಟ್ಟಿದ್ದಾರೆ. ಮಚ್ಚಿನ ಗ್ರಾಮದ ಕುತ್ತಿನ ನಿವಾಸಿ ಡಾಕಯ್ಯ ಗೌಡ (೬೦) ಹಾಗೂ ಅದೇ ಗ್ರಾಮದ ಹೇಂಟ್ರೇಲು ನಿವಾಸಿ, ಮಚ್ಚಿನ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಚಂದಪ್ಪ ಮೂಲ್ಯ (೬೫) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಮೃತರಾದ ಡಾಕಯ್ಯ ಗೌಡ ಮತ್ತು ಚಂದಪ್ಪ ಮೂಲ್ಯ ಅವರು ಸೋಮವಾರ ತೋಟದ ಕೂಲಿ ಕೆಲಸ ಮುಗಿಸಿಕೊಂಡು ಪಣಕಜೆ ಕಡೆಯಿಂದ ಬಳ್ಳಮಂಜದತ್ತ ತಮ್ಮ ಸ್ಕೂಟರ್‌ನಲ್ಲಿ ಬರುತ್ತಿದ್ದರು. ಈ ವೇಳೆ ಬಳ್ಳಮಂಜ ಕಡೆಯಿಂದ ಪಣಕಜೆ ಕಡೆಗೆ ತೆರಳುತ್ತಿದ್ದ ಮಡಂತ್ಯಾರಿನ ‘ಆಶೀರ್ವಾದ್ ಹೆಸರಿನ ಪಿಕಪ್ ವಾಹನವು ಪಾಲ್ಯರ ಎಂಬಲ್ಲಿ ಸ್ಕೂಟರ್‌ಗೆ ನೇರ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಸ್ಕೂಟರ್‌ನ ಸಹಸವಾರ ಚಂದಪ್ಪ ಮೂಲ್ಯ ಅವರು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸವಾರ ಡಾಕಯ್ಯ ಗೌಡ ಅವರ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೂಡ ಸಾವನ್ನಪ್ಪಿದ್ದಾರೆ.
ಮೃತರಾದ ಚಂದಪ್ಪ ಮೂಲ್ಯ ಅವರು ಮಚ್ಚಿನ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾಗಿದ್ದು, ಸಣ್ಣ ಕೃಷಿಯ ಜೊತೆಗೆ ತೋಟದ ಕೆಲಸಕ್ಕೂ ಹೋಗುತ್ತಿದ್ದರು. ಅವರು ಪತ್ನಿ ಹಾಗೂ ನಾಲ್ಕು ಮಂದಿ ಮಕ್ಕಳನ್ನು ಅಗಲಿದ್ದಾರೆ. ಮತ್ತೊಬ್ಬ ಮೃತ ಡಾಕಯ್ಯ ಗೌಡ ಅವರು ಕೂಡ ಸಣ್ಣ ಕೃಷಿಕರಾಗಿದ್ದು, ತೋಟದ ಕೆಲಸ ಮಾಡಿಕೊಂಡು ಕುಟುಂಬದ ಆಧಾರಸ್ತಂಭವಾಗಿದ್ದರು. ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಈ ಭೀಕರ ಅಪಘಾತದ ಕುರಿತು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.