Home ಜಿಲ್ಲೆ ಮಂಗಳೂರು ತುರ್ತು ಸಂದರ್ಭ ಸಾರ್ವಜನಿಕ ಹಿತಾಸಕ್ತಿಯಿಂದ ವ್ಯಾಪ್ತಿ ಮೀರಿ ಕ್ರಮ ಕೈಗೊಳ್ಳಿ

ತುರ್ತು ಸಂದರ್ಭ ಸಾರ್ವಜನಿಕ ಹಿತಾಸಕ್ತಿಯಿಂದ ವ್ಯಾಪ್ತಿ ಮೀರಿ ಕ್ರಮ ಕೈಗೊಳ್ಳಿ

ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಳೆಗಾಲದ ಸಿದ್ಧತೆಗಳ ಕುರಿತು ಸಭೆ
ಮಂಗಳೂರು : ಮಳೆಗಾಲದಲ್ಲಿ ರಸ್ತೆ ಹೊಂಡದಲ್ಲಿ ನೀರು ನಿಂತು ಅಪಘಾತಗಳಾಗಿ ಸಾರ್ವಜನಿಕರ ಪ್ರಾಣ ಹಾನಿ ಸಂಭವಿಸಿದರೆ ಸಂಬಂಧಿಸಿದ ಇಲಾಖಾ ಇಂಜಿನಿಯರ್‌ಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಎಚ್ಚರಿಸಿದ್ದಾರೆ.
ಮಳೆಗಾಲದ ಸಿದ್ಧತೆಗಳ ಕುರಿತು ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ರಸ್ತೆಯಲ್ಲಿ ನೀರು ನಿಲ್ಲದಂತೆ ಸೂಕ್ತ ಕ್ರಮ ಜರಗಿಸಬೇಕು. ತುರ್ತು ಸಂದರ್ಭ ಸಾರ್ವಜನಿಕ ಹಿತಾಸಕ್ತಿಯಿಂದ ವ್ಯಾಪ್ತಿ ಮೀರಿ ಕ್ರಮ ಕೈಗೊಳ್ಳಬೇಕು. ಮಳೆಗಾಲದಲ್ಲಿ ಎದುರಾಗುವ ಯಾವುದೇ ವಿಪತ್ತುಗಳನ್ನು ಎದುರಿಸಲು ಅಧಿಕಾರಿಗಳು ಸಮನ್ವಯದಿಂದ ನಿರ್ವಹಿಸಬೇಕು. ಪದೇ ಪದೇ ಹೊಂಡ ಮುಚ್ಚುವ ಕೆಲಸದ ಬದಲು ಶಾಶ್ವತ ಕಾಮಗಾರಿಗೆ ಒತ್ತು ನೀಡಬೇಕು ಎಂದು ಖಾದರ್ ಸೂಚಿಸಿದರು
ಮೆಸ್ಕಾಂ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ವಿದ್ಯುತ್ ಸಂಪರ್ಕ ನಿರ್ವಹಣೆಗೆ ಹೆಚ್ಚುವರಿ ಲೈನ್ ಮ್ಯಾನ್ ಮತ್ತು ವಾಹನಗಳನ್ನು ಒದಗಿಸಬೇಕು. ವಿದ್ಯುತ್ ಸಂಪರ್ಕ ಮರುಸ್ಥಾಪನೆಗೆ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಮಳೆಗಾಲದಲ್ಲಿ ಮಾನವ ನಿರ್ಮಿತ ಸಮಸ್ಯೆಗಳನ್ನು ತಗ್ಗಿಸಲು ಗಮನಹರಿಸಬೇಕು. ನೆರೆಯಿಂದ ರಸ್ತೆ ತಡೆಗಳನ್ನು ಆಯಾ ಸ್ಥಳೀಯ ಸಂಸ್ಥೆಗಳು ವಿಳಂಬಿಸದೆ ತೆರವುಗೊಳಿಸಬೇಕು. ಪರಿಹಾರ ಕ್ರಮಗಳನ್ನು ಕೈಗೊಳ್ಳುವಾಗ ಸ್ಥಳೀಯ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಟಾಸ್ಕ್‌ಫೋರ್ಸ್‌ಗಳನ್ನು ಸಕ್ರಿಯಗೊಳಿಸಬೇಕು. ಪ್ರತಿ ಗ್ರಾಪಂಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು ಎಂದು ಯು.ಟಿ. ಖಾದರ್ ಸೂಚಿಸಿದರು.
ದ.ಕ.ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಮಳೆಗಾಲ ನಿರ್ವಹಣೆಗೆ ಕೈಗೊಳ್ಳಗಿರುವ ಸಿದ್ಧತೆಗಳನ್ನು ಸಭೆಗೆ ವಿವರಿಸಿದರು.
ಸಭೆಯಲ್ಲಿ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಪೊಲೀಸ್ ಅಧೀಕ್ಷಕ ಅರುಣ್, ಡಿಸಿಎಫ್ ರವಿಶಂಕರ್, ಮಂಗಳೂರು ಉಪ ವಿಭಾಗಾಧಿಕಾರಿ ಮೀನಾಕ್ಷಿ ಆರ್ಯ ಮತ್ತಿತರರು ಉಪಸ್ಥಿತರಿದ್ದರು.