
ಸಂಜೆವಾಣಿ ವಾರ್ತೆ
ಹೊಸಪೇಟೆ.ಮೇ.24 ರಾಜ್ಯದಲ್ಲಿ ಎಸ್.ಟಿ ಮೀಸಲಾತಿ ಹಿನ್ನಡೆ ಆಗಿರುವುದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೇ ನೇರ ಹೊಣೆ ಎಂದು ಮಾಜಿ ಸಂಸದರು ಹಾಗೂ ವಿಧಾನ ಪರಿಷತ್ತಿನ ಮಾಜಿ ವಿರೋಧ ಪಕ್ಷದ ನಾಯಕರು ಆದ ವಿ.ಎಸ್.ಉಗ್ರಪ್ಪ ತಿಳಿಸಿದರು.
ಸ್ಥಳೀಯ ಶ್ರೀಪುಣ್ಯಾನಂದಪುರಿ ಕಲ್ಯಾಣ ಮಂಟಪದಲ್ಲಿ ಶನಿವಾರ ಜರುಗಿದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಕಾಂಗ್ರೇಸ್ ಪಕ್ಷದ ಮುಖಂಡನಾಗಿ ಅಥವಾ ವಕ್ತಾರನಾಗಿ ಪತ್ರಿಕಾ ಗೋಷ್ಠಿ ನಡೆಸುತ್ತಿಲ್ಲ. ಬದಲಾಗಿ ಪ.ಜಾ, ಪ.ಪಂ. ಹಾಗು ಹಿಂದುಳಿದವರ ಧ್ವನಿಯಾಗಿ ಮಾತನಾಡುತ್ತಿದ್ದೇನೆ. ಈ ಹಿನ್ನಲೆಯಲ್ಲಿ ಇಲ್ಲಿ ನೀಡುವ ಹೇಳಿಕೆಗಳಿಗೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಪರಿಶಿಷ್ಟ ಪಂಗಡದವರಿಗೆ ನೀಡಲಾಗಿರುವ ಶೇ.7 ರಷ್ಟು ಮೀಸಲಾತಿಗೆ ತಡೆ ನೀಡಿರುವ ಕುರಿತು ಸಮಾಜದ ಬಂಧುಗಳಲ್ಲಿ ಜಾಗೃತಿ ಮೂಡಿಸಲು ಕಳೆದ 2 ತಿಂಗಳಲ್ಲಿ ರಾಜ್ಯದ 23 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ. ವಿಜಯನಗರ 24ನೇ ಜಿಲ್ಲೆಯಾಗಿದೆ.
ಪರಿಶಿಷ್ಟ ಪಂಗಡದವರಿಗೆ ಶೇ.3 ರಷ್ಟಿದ್ದ ಮೀಸಲಾತಿಯನ್ನು 2022 ರಲ್ಲಿ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಬಿಜೆಪಿ ಸರ್ಕಾರದ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶೇ.7ಕ್ಕೆ ಏರಿಕೆ ಮಾಡಿದರು. ಆದರೆ ಅದನ್ನು ಷೆಡ್ಯೂಲ್ 9ಕ್ಕೆ ಸೇರ್ಪಡೆ ಮಾಡದ ಹಿನ್ನಲೆಯಲ್ಲಿ ನಮ್ಮ ಪಾಲಿನ ಮೀಸಲಾತಿಗೆ ತೀವ್ರ ಹಿನ್ನಡೆಯಾಗಿದೆ. 2023 ರಲ್ಲಿ ಬಿಜೆಪಿ ಸರ್ಕಾರ ಷೆಡ್ಯೂಲ್ 9 ಕ್ಕೆ ಸೇರ್ಪಡೆ ಮಾಡುವ ಕುರಿತು ಕೇಂದ್ರಕ್ಕೆ ಪತ್ರ ಬರೆದರೂ, ಕೇಂದ್ರ ಸರ್ಕಾರ ಅದನ್ನು ಸ್ವೀಕರಿಸಿದ ಹಾಗೂ ತಿರಸ್ಕಾರ ಮಾಡಿದ ಯಾವುದೇ ದಾಖಲೆಗಳಿಲ್ಲ. ಕೇಳದೆ ಹಲವಾರು ಸಮುದಾಯಗಳಿಗೆ ಮೀಸಲಾತಿ ಕಲ್ಪಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಎಸ್.ಟಿ ಸಮುದಾಯಕ್ಕೆ ಹಲವಾರು ಹೋರಾಟಗಳ ನಂತರ ದೊರೆತ ಮೀಸಲಾತಿಯನ್ನು ಸಮರ್ಪಕವಾಗಿ ಜಾರಿ ಮಾಡದೆ, ಎಸ್.ಟಿ ಸಮುದಾಯಕ್ಕೆ ದ್ರೋಹ ಮಾಡಿದ್ದಾರೆ ಎಂದರು.
ಈ ಕುರಿತು ಸುಪ್ರೀಂ ಕೋರ್ಟಿನಲ್ಲಿ ಸಮರ್ಥವಾಗಿ ವಾದ ಮಂಡಿಸುವಲ್ಲಿ ರಾಜ್ಯ ಕಾಂಗ್ರೇಸ್ ಸರ್ಕಾರ ಕೂಡ ವಿಫಲವಾಗಿದೆ. ಮೀಸಲಾತಿಗೆ ನೀಡಲಾಗಿರುವ ತಡೆ ತೆರವಿಗೆ ಸಮರ್ಥವಾಗಿ ರಾಜ್ಯ ಸರ್ಕಾರದಿಂದ ಸುಪ್ರೀಂ ಕೋರ್ಟಿನಲ್ಲಿ ಸಮರ್ಥವಾಗಿ ವಾದ ಮಂಡಿಸುವಂತೆ ಹಾಗೂ ಪ್ರಧಾನಿ ಬಳಿ ಸರ್ವ ಪಕ್ಷ ನಿಯೋಗ ತೆಗೆದುಕೊಂಡು ಹೋಗುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಗಿದೆ. ಎಸ್.ಟಿ ಗೆ ಮೀಸಲಾತಿ ನೀಡುವಲ್ಲಿ ಹಿನ್ನಡೆಯಾಗಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಹತ್ವದ ಪಾತ್ರವಿದೆ. ಇದರಿಂದ ಸಾಮಾಜಿಕ ನ್ಯಾಯಕ್ಕೆ ದೊಡ್ಡ ಪೆಟ್ಟು ಬಿದ್ದಿದೆ ಎಂದು ತಿಳಿಸಿದರು.
ಮೀಸಲಾತಿ ನಮ್ಮ ಹಕ್ಕು. ನಾವು ಬಿಕ್ಷೆ ಬೇಡುತ್ತಿಲ್ಲ. ನಮ್ಮ ತಾಳ್ಮೆ ಪರೀಕ್ಷೆ ಮಾಡಬೇಡಿ ಎಂದ ಅವರು ಈ ಕುರಿತು ಎಸ್.ಟಿ ಸಮುದಾಯದಿಂದ ಆಯ್ಕೆಯಾಗಿರುವ ಶಾಸಕರು, ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರು ಸರ್ಕಾರದ ಮೇಲೆ ಒತ್ತಡ ಹಾಕುವ ಕೆಲಸವನ್ನು ಮಾಡಬೇಕು. ಆದರೆ ಸಮುದಾಯದ ಶಾಸಕರು, ಸಂಸದರು ಇದರ ಬಗ್ಗೆ ಯಾರು ಬಾಯಿ ಬಿಡುತ್ತಿಲ್ಲ. ಸಮುದಾಯದ ಸ್ವಾಮೀಜಿಗಳು, ಸರ್ಕಾರಿ ನೌಕರರು ನಿದ್ರಾವಸ್ಥೆಯಲ್ಲಿದ್ದಾರೆ. ಈ ಕುರಿತು ಪ್ರತಿಯೊಬ್ಬ ಸಮುದಾಯದ ಬಂಧುಗಳು ಜಾಗೃತರಾಗಬೇಕು. ಸಮುದಾಯದ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಸಮಾಜದ ಪರವಾಗಿ ಧ್ವನಿಯೆತ್ತದ ಜನಪ್ರತಿನಿಧಿಗಳನ್ನು ದೂರವಿಡುವ ಕೆಲಸವನ್ನು ಸಮಾಜ ಬಾಂಧವರು ಮಾಡಬೇಕು ಎಂದರು.
ಎಸ್.ಸಿ, ಎಸ್.ಟಿ ಮೀಸಲಾತಿ ಯಾರ ಸೊತ್ತು ಅಲ್ಲ. ಅರ್ಹರಿದ್ದವರನ್ನು ಎಸ್.ಸಿ, ಎಸ್.ಟಿ ಗೆ ಸೇರ್ಪಡೆ ಮಾಡಲು ನಮ್ಮ ಅಭ್ಯಂತರವಿಲ್ಲ. ಅದಕ್ಕೂ ಮೊದಲು ಕುಲಶಾಸ್ತ್ರ ಅಧ್ಯಯನ ಆಗಬೇಕು. ಎಸ್.ಟಿ ಗೆ ಸೇರ್ಪಡೆಗೊಳ್ಳುವವರು ತಮ್ಮ ಪಾಲಿನ ಮೀಸಲಾತಿಯೊಂದಿಗೆ ಸೇರ್ಪಡೆ ಆಗಬೇಕು. ಅದು ಬಿಟ್ಟು ನಮ್ಮ ತಟ್ಟೆಯಲ್ಲಿನ್ನ ಅನ್ನಕ್ಕೆ ಕೈಹಾಕಿದರೆ, ನಾವು ಕೈಕಟ್ಟಿಕೊಂಡು ಕೂರುವುದಿಲ್ಲ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಗೋಸಲ ಭರಮಪ್ಪ, ಪ್ರಧಾನ ಕಾರ್ಯದರ್ಶಿ ದೇವರಮನೆ ಶ್ರೀನಿವಾಸ, ಉಪಾಧ್ಯಕ್ಷ ಕಿನ್ನಾಳ ಹನುಮಂತ, ವರದಾನೇಶ್ವರ ಸ್ವಾಮೀಜಿ, ನಾಯಕ ನೌಕರರ ಸಂಘದ ಕಿಶೋರ್ ಕುಮಾರ್, ಡಾ.ಜಂಬಯ್ಯ, ಮುಖಂಡರಾದ ಜಂಬಾನಳ್ಳಿ ವಸಂತ, ನಾಣಿಕೇರಿ ವೆಂಕಪ್ಪ, ವೆಂಕಟೇಶ ನಾಯಕ, ತುಳಸಿರಾಮ, ಪ್ರಕಾಶ್ ದೇಸಾಯಿ, ರಾಜಣ್ಣ ಇದ್ದರು.
























