
ಉಡುಪಿ, ಜೂ. ೮: ಡೀಸೆಲ್ ಸೇರಿದಂತೆ ಸಾರಿಗೆ ಕ್ಷೇತ್ರದ ವಿವಿಧ ವೆಚ್ಚಗಳು ಗಣನೀಯವಾಗಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಖಾಸಗಿ ಬಸ್‌ಗಳ ಪ್ರಯಾಣ ದರವನ್ನು ಶೇ. ೫ರಿಂದ ೮ರಷ್ಟು ಪರಿಷ್ಕರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮಜಲು ವಾಹನ ಬಸ್ ಮಾಲಕರ ಸಂಘಗಳ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದು ವರ್ಷದ ಅವಧಿಯಲ್ಲಿ ಡೀಸೆಲ್ ದರ, ವಾಹನಗಳ ಬಿಡಿಭಾಗಗಳು, ಟೈರ್ ಹಾಗೂ ಟೈರ್ ರಿಸೋಲಿಂಗ್ ವೆಚ್ಚ, ಟೋಲ್ ಶುಲ್ಕ, ನೌಕರರ ವೇತನ, ತೆರಿಗೆ ಹಾಗೂ ವಿಮೆ ದರಗಳಲ್ಲಿ ನಿರಂತರ ಏರಿಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲಕರ ಸಂಘಗಳ ಒಕ್ಕೂಟವು ಪ್ರಯಾಣ ದರ ಪರಿಷ್ಕರಿಸುವ ನಿರ್ಧಾರ ಕೈಗೊಂಡಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಅಧಿಸೂಚನೆ ಸಂಖ್ಯೆ ಟಿಡಿ ೮೧ ಟಿಡಿಎಂ ೨೦೨೦ರ ಅನ್ವಯ ಪ್ರತಿ ಕಿಲೋಮೀಟರ್‌ಗೆ ಪ್ರಯಾಣಿಕರಿಂದ ಸೆಸ್ ವಿಧಿಸಲು ಅವಕಾಶವಿದ್ದು, ಅದರ ಆಧಾರದ ಮೇಲೆ ಹಾಲಿ ದರದಲ್ಲಿ ಶೇ. ೫ರಿಂದ ೮ರಷ್ಟು ಹೆಚ್ಚಳ ಮಾಡಲಾಗಿದೆ. ಪರಿಷ್ಕೃತ ದರ ಜೂನ್ ೮ರಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಾರಿಗೆ ಬರಲಿದೆ ಎಂದು ಮಾಹಿತಿ ನೀಡಿದರು.
ಹೊಸ ದರ: ಉಡುಪಿ ಮಂಗಳೂರು: ೧೦೦ (ಹಳೆ ದರ ೯೫)
ಉಡುಪಿ-ಕುಂದಾಪುರ: ೬೩ (ಹಳೆ ದರ ೬೦)
ಉಡುಪಿ-ಕಾರ್ಕಳ: ೬೦ (ಹಳೆ ದರ ೫೮)
ಕುಂದಾಪುರ-ಮಂಗಳೂರು: ೧೫೩ (ಹಳೆ ದರ ೧೪೫)
ಉಡುಪಿ -ಮಣಿಪಾಲ ಸಿಟಿ ಬಸ್: ೧೫
ಇದಲ್ಲದೆ, ಖಾಸಗಿ ಬಸ್‌ಗಳ ಕನಿಷ್ಠ ಪ್ರಯಾಣ ದರವನ್ನು ?೧೨ರಿಂದ ?೧೩ಕ್ಕೆ ಹೆಚ್ಚಿಸಲಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಸ್ ಮಾಲಕರ ಸಂಘದ ಮುಖಂಡರಾದ ರಾಜವರ್ಮ ಬಲ್ಲಾಳ್ ಹಾಗೂ ಸದಾನಂದ ಛಾತ್ರ ಉಪಸ್ಥಿತರಿದ್ದರು.






















