ಪುತ್ತೂರು-ರಾಜ್ಯ ಸಣ್ಣ ನೀರಾವರಿ ಇಲಾಖೆಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಪುತ್ತೂರು ಹಾಗೂ ಬಂಟ್ವಾಳ ತಾಲೂಕಿನ ೫ ಕಡೆಗಳಲ್ಲಿ ಕಿಂಡಿಅಣೆಕಟ್ಟು ನಿರ್ಮಿಸಲು ರೂ.೫.೭೦ಕೋಟಿ ಬಿಡುಗಡೆಯಾಗಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ಪುತ್ತೂರಿನ ಕೊಳ್ತಿಗೆ ಗ್ರಾಮದ ಪಾಲ್ತಾಡಿ ರೂ.೬೦ ಲಕ್ಷ, ನೆಟ್ಟಣಿಗೆ ಮುಡ್ನೂರು ಗ್ರಾಮದ ಕರ್ನೂರು ಗುತ್ತು ಕಾಲೊನಿಗೆ ರೂ.೭೦ಲಕ್ಷ, ಕೆಯ್ಯೂರು ಗ್ರಾಮದ ದೇರ್ಲಕ್ಕೆ ರೂ. ೧.೨೫ ಲಕ್ಷ, ಬಂಟ್ವಾಳ ತಾಲೂಕಿನ ಪುಣಚಾ ಗ್ರಾಮದ ದೇವರಗುಂಡಿ ಎಂಬಲ್ಲಿಗೆ ರೂ. ೧.೩೦ ಲಕ್ಷ ವಿಟ್ಲ ಗ್ರಾಮದ ನೆಕ್ಕಿಕಾರ್ ಗೆ ೧.೫೦ ಲಕ್ಷ ಅನುದಾನ ಮಂಜೂರಾಗಿದೆ. ಈ ೫ ಕಡೆಗಳಲ್ಲಿ ಕಿಂಡಿಅಣೆಕಟ್ಟು ನಿರ್ಮಾಣಕ್ಕಾಗಿ ಹಲವು ವರ್ಷಗಳಿಂದ ಜನರ ಬೇಡಿಕೆ ಇತ್ತು. ಹಲವು ಬಾರಿ ಹೋರಾಟಗಳು ನಡೆದಿದ್ದವು. ಆದರೆ ಈ ತನಕ ಅನುದಾನ ಮಂಜೂರಾಗಿರಲಿಲ್ಲ. ಈ ೫ ಕಡೆಗಳಿಗೆ ಶಾಸಕ ಅಶೋಕ್ ರೈ ಅವರು ಕಿಂಡಿಅಣೆಕಟ್ಟು ನಿರ್ಮಿಸುವ ಕುರಿತು ಜನತೆಗೆ ವಾಗ್ದಾನ ಮಾಡಿದ್ದರು. ಅದರಂತೆ ಇದೀಗ ಅನುದಾನ ಮಂಜೂರುಗೊಂಡಿದೆ.
ಜನರ ಬೇಡಿಕೆ ಈಡೇರಿಕೆ
ಕಳೆದ ಹಲವು ವರ್ಷಗಳಿಂದ ಈ ಭಾಗದ ಜನತೆ ಕಿಂಡಿಅಣೆಕಟ್ಟಿಗಾಗಿ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ನನ್ನಲ್ಲಿಯೂ ಜನತೆ ಮನವಿ ಮಾಡಿದ್ದರು. ಆಗ ಅವರಿಗೆ ಮಾತುಕೊಟ್ಟಿದ್ದೆ. ಅದರಂತೆ ಇದೀಗ ಅನುದಾನ ಮಂಜೂರಾಗಿದ್ದು, ಕೊಟ್ಟ ಮಾತನ್ನು ಈಡೇರಿಸಿದ್ದೇನೆ. ಇನ್ನೂ ಕೆಲವು ಭಾಗದಲ್ಲಿ ಕಿಂಡಿಅಣೆಕಟ್ಟು ನಿರ್ಮಾಣಕ್ಕಾಗಿ ಬೇಡಿಕೆಗಳಿವೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ವಹಿಸಲಾಗುವುದು. ಸಣ್ಣ ನೀರಾವರಿ ಇಲಾಖೆ ವತಿಯಿಂದ ೫ ಕಿಂಡಿಅಣೆಕಟ್ಟು ನಿರ್ಮಾಣದ ಕಾರ್ಯವೂ ಅತೀ ಶೀಘ್ರದಲ್ಲಿಯೇ ಆರಂಭವಾಗಲಿದೆ- ಅಶೋಕ್ ರೈ ಶಾಸಕರು




























